ವಿಶ್ವದ ಯಾವುದೇ ಮೂಲೆಯನ್ನು ನೋಡಿದರೂ ಕೊರೊನಾಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ ಹೊರತು ಇಳಿಕೆ ಕಾಣುತ್ತಲೇ ಇಲ್ಲ. ಸದ್ಯ ಈ ಮಹಾಮಾರಿಗೆ ಯಾವುದೇ ಔಷಧ ಇಲ್ಲದಿದ್ರೂ, ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ (HCQ). ವಿಶ್ವದಲ್ಲಿ ಅತಿ ದೊಡ್ಡ ಉತ್ಪಾದಕನಾದ ಭಾರತ ಇತ್ತೀಚೆಗಷ್ಟೇ ತನ್ನ ರಫ್ತು ನಿಯಂತ್ರಣ ಸಡಿಲಿಸಿ ಇತರ ದೇಶಗಳಿಗೂ ಔಷಧವನ್ನ ರಫ್ತು ಮಾಡುತ್ತಿದೆ.
ದೇಶದಲ್ಲಿ ಕೊರೊನಾವೈರಸ್ ದಿನೇ ದಿನೇ ಹೆಚ್ಚುತ್ತಿರುವುದರಿಂದ ಈ ಔಷಧ ಬೇರೆ ರಾಷ್ಟ್ರಗಳಿಗೆ ನೀಡಿದರೆ ಹೇಗೆ ಎಂಬ ಸಾಮಾನ್ಯ ಪ್ರಶ್ನೆ ಜನರಲ್ಲಿ ಮೂಡುವುದು ಸಹಜ. ಆದರೆ ಈ ಯೋಚನೆ ಮಾಡುವ ಅವಶ್ಯಕತೆ ಬಾರದು ಎಂದು ಕೈಗಾರಿಕೆಯ ಮೂಲಗಳು ಹೇಳಿವೆ. ಇದಕ್ಕೆ ಕಾರಣ ಜಾಗತಿಕ ಬೇಡಿಕೆಯನ್ನೇ ಪೂರೈಸಲು ಭಾರತಕ್ಕೆ ಸಾಕಷ್ಟು ಸಾಮರ್ಥ್ಯವಿದೆ.
ಪ್ರತಿ ತಿಂಗಳು ಸುಮಾರು 60-70 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ
ವಿಶ್ವದಲ್ಲಿ ಅತಿದೊಡ್ಡ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆ ಮಾಡುವ ದೇಶವಾದ ಭಾರತವು ವಿಶ್ವದಲ್ಲಿ 70 ಪರ್ಸೆಂಟ್‌ನಷ್ಟು HCQ ಉತ್ಪಾದಿಸುತ್ತದೆ. ಉದ್ಯಮದ ಮೂಲಗಳ ಪ್ರಕಾರ, ಭಾರತವು ತಿಂಗಳಿಗೆ ಸುಮಾರು 60 ರಿಂದ 70 ಮೆಟ್ರಿಕ್ ಟನ್ (300 ರಿಂದ 350 ಮಿಲಿಯನ್ ಮಾತ್ರೆಗಳು) HCQ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಭಾರತ ಸರ್ಕಾರ ಸದ್ಯ ಸುಮಾರು 100 ಮಿಲಿಯನ್ ಮಾತ್ರೆಗಳನ್ನು (20 ಮೆಟ್ರಿಕ್ ಟನ್) ಆದೇಶಿಸಿದೆ. ಆದರೆ ದೇಶೀಯ ಬೇಡಿಕೆಗೆ ಪೂರೈಕೆಯಾದ ನಂತರ ರಫ್ತಿಗೆ ಯೋಗ್ಯವಾದ ಸಾಮರ್ಥ್ಯವಿದೆ ಎಂದು ಕಂಪನಿಗಳು ಹೇಳಿವೆ.
ರಫ್ತು ಮೂಲಕವೇ 380 ಕೋಟಿ ರುಪಾಯಿ ಆದಾಯ ಗಳಿಕೆ
ಮಲೇರಿಯಾ ಕಾಯಿಲೆಯು ಸೀಸನ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ದೇಶದಲ್ಲಿ ಬೇಡಿಕೆ ಇರುತ್ತಿರಲಿಲ್ಲ. ಹೀಗಾಗಿ ತನಗೆ ಬೇಕಾದಷ್ಟು ಉಳಿಸಿಕೊಂಡು ಉಳಿದ ಔಷಧವನ್ನು ರಫ್ತು ಮಾಡುತ್ತಿತ್ತು. ವಾರ್ಷಿಕವಾಗಿ ರಫ್ತು ಮೂಲಕ ಭಾರತ ಸುಮಾರು 40 ರಿಂದ 50 ಮಿಲಿಯನ್ ಡಾಲರ್‌ಗಳಿಸುತ್ತದೆ.
ದಶಕದಷ್ಟು ಹಳೆಯ ಔಷಧವಾದ HCQ 200 ಮಿ.ಗ್ರಾಂ ಮಾತ್ರೆಗೆ ಸುಮಾರು 5 ರಿಂದ 6 ರುಪಾಯಿಗಳಷ್ಟು ಖರ್ಚಾಗುತ್ತದೆ.
'' ಸಾಮಾನ್ಯ ಸಮಯದಲ್ಲಿ ಭಾರತವು ಸುಮಾರು 3 ಮಿಲಿಯನ್ ಟ್ಯಾಬ್ಲೆಟ್‌ಗಳನ್ನು ಬಳಸುತ್ತದೆ ಮತ್ತು ಸುಮಾರು 30 ಮಿಲಿಯನ್ ಟ್ಯಾಬ್ಲೆಟ್‌ಗಳನ್ನು ರಫ್ತು ಮಾಡುತ್ತದೆ '' ಎಂದು ದೊಡ್ಡ ದೇಶೀಯ ಔಷಧ ಕಂಪನಿಗಳನ್ನು ಪ್ರತಿನಿಧಿಸುವ ಭಾರತೀಯ ಔಷಧೀಯ ಒಕ್ಕೂಟದ (ಐಪಿಎ) ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್ ಹೇಳಿದ್ದಾರೆ.
ಫ್ರೆಂಚ್ ಸಂಶೋಧಕರಿಂದ ಔಷಧಿ ಮಾಹಿತಿ ಬಹಿರಂಗ
ಕೋವಿಡ್-19 ಸೋಂಕಿಗೆ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವು ಪರಿಣಾಮಕಾರಿಯಾಗಿ ಉಪಯೋಗಕ್ಕೆ ಬರುತ್ತದೆ ಎಂದು ಫ್ರೆಂಚ್ ಸಂಶೋಧಕರ ಅಧ್ಯಯನದ ನಂತರ ವಿಚಾರ ಬೆಳಕಿಗೆ ಬಂತು. SARS-COV-2 ಅನ್ನು ಕೊಲ್ಲುವಲ್ಲಿ HCQ ಪರಿಣಾಮಕಾರಿ ಎಂದು ಅಧ್ಯಯನವು ವರದಿ ಮಾಡಿದೆ. ಇದರಿಂದಾಗಿ ಅಮೆರಿಕಾ, ಸ್ಪೇನ್, ಬ್ರೆಜಿಲ್, ಸೇರಿದಂತೆ ಹಲವು ರಾಷ್ಟ್ರಗಳು ಭಾರತದಿಂದ HCQ ಔಷಧಕ್ಕೆ ಬೇಡಿಕೆಯಿಟ್ಟಿವೆ.
29 ಮಿಲಿಯನ್ ಔಷಧವನ್ನು ಸಂಗ್ರಹಿಸಿದ ಅಮೆರಿಕಾ
ಅಮೆರಿಕಾ ಸರ್ಕಾರವು 29 ಮಿಲಿಯನ್ ಔಷಧವನ್ನು ಸಂಗ್ರಹಿಸಿದೆ. ಈಗಾಗಲೇ ಭಾರತವೂ ಕೂಡ 100 ಮಿಲಿಯನ್ HCQ ಮಾತ್ರೆಗಳನ್ನು ಉತ್ಪಾದನೆಗೆ ಬೇಡಿಕೆ ಇಟ್ಟಿದೆ. ಜೊತೆಗೆ ಅಮೆರಿಕಾ ಅಷ್ಟೇ ಅಲ್ಲದೆ ಇತರೆ ದೇಶಗಳು ಸಹ ಔಷಧಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಈಗಾಗಲೇ ಸಕ್ರಿಯ ಔಷಧಿಯ ಘಟಕಾಂಶದ(ಎಪಿಐ) ಬೆಲೆಯನ್ನು ದ್ಬಿಗುಣಗೊಳಿಸಲಾಗಿದೆ.
ಎಪಿಐ ಬೆಲೆಗಳು ಪ್ರತಿ ಕೆಜಿಗೆ 75,000 ರಿಂದ 80,000 ರುಪಾಯಿಗಳವರೆಗೆ ಇದ್ದು, ಈಗ 1,50,000 ಮತ್ತು ಅದಕ್ಕಿಂತ ಹೆಚ್ಚಿನ ದರದಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ HCQ ಉತ್ಪಾದನಾ ಘಟಕಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿವೆ.


Click it and Unblock the Notifications