ಕೋವಿಡ್- 19 ಮತ್ತು ಅದರ ಬೆನ್ನಿಗೇ ಜಾರಿಯಾದ ಲಾಕ್ ಡೌನ್ ನಿಂದ ಆಟೋಮೋಟಿವ್ ವಲಯಕ್ಕೆ ದಿನಕ್ಕೆ 2300 ಕೋಟಿ ರುಪಾಯಿಯಂತೆ ನಷ್ಟವಾಗಿದೆ ಮತ್ತು ಈ ವಲಯದಲ್ಲಿ ಆಗಿರುವ ಉದ್ಯೋಗ ನಷ್ಟದ ಅಂದಾಜು 3.45 ಲಕ್ಷ ಎಂಬುದನ್ನು ಸಂಸದೀಯ ಸಮಿತಿಯ ವರದಿಯಲ್ಲಿ ತಿಳಿದುಬಂದಿದೆ. ಈ ವರದಿಯನ್ನು ರಾಜ್ಯಸಭಾ ಮುಖ್ಯಸ್ಥರಾದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಮಂಗಳವಾರ ಸಲ್ಲಿಸಲಾಯಿತು.
ವಾಣಿಜ್ಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಸಂಸದರಾದ ಕೇಶವರಾವ್ ಇದ್ದರು. ದೇಶದ ವಾಹನೋದ್ಯಮ ವಲಯಕ್ಕೆ ಬಂಡವಾಳ ಸೆಳೆಯುವುದಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿಯಲ್ಲಿ ಭೂಮಿ ಮತ್ತು ಕಾರ್ಮಿಕ ಕಾನೂನುಗಳ ಸುಧಾರಣೆ ಸೇರಿ ಕೆಲವು ಸಲಹೆಗಳನ್ನು ಸಹ ನೀಡಲಾಗಿದೆ.
ಪ್ರಮುಖ ಒರಿಜಿನಲ್ ಎಕ್ವಿಪ್ ಮೆಂಟ್ ಮ್ಯಾನುಫ್ಯಾಕ್ಚರರ್ಸ್ (OEM) ಶೇಕಡಾ 18ರಿಂದ 20ರಷ್ಟು ಉತ್ಪಾದನೆಯನ್ನು ಕಡಿಮೆ ಮಾಡಿದ್ದಾರೆ ಎಂದು ವಾಹನೋದ್ಯಮದ ಒಕ್ಕೂಟಗಳು ಸಮಿತಿಗೆ ತಿಳಿಸಿವೆ. ಏಕೆಂದರೆ, ಬೇಡಿಕೆ ಕಡಿಮೆ ಆಗಿದೆ ಮತ್ತು ವಾಹನಗಳ ಮಾರಾಟದಲ್ಲಿ ಇಳಿಕೆ ಆಗಿದೆ. ಅದರ ಪರಿಣಾಮ ವಾಹನೋದ್ಯಮ ವಲಯದ ಉದ್ಯೋಗಗಳ ಮೇಲೆ ಆಗಿದೆ. ಅಂದಾಜು 3.45 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಸಮಿತಿಯು ವರದಿಯಲ್ಲಿ ತಿಳಿಸಿದೆ.

ವಾಹನ ಉದ್ಯಮದಲ್ಲಿ ನೇಮಕಾತಿ ನಿಂತುಹೋಗಿದೆ. ಇನ್ನು 286 ವಾಹನ ಡೀಲರ್ ಗಳು ಮುಚ್ಚಿದ್ದಾರೆ. ಉತ್ಪಾದನೆ ಪ್ರಮಾಣವನ್ನೇ ಕಡಿತ ಮಾಡಿರುವುದರಿಂದ ಬಿಡಿ ಭಾಗಗಳ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ವಾಹನಗಳ ಬಿಡಿ ಭಾಗಗಳ ತಯಾರಿಕೆಯಲ್ಲಿ ತೊಡಗಿರುವ ಎಂಎಸ್ ಎಂಇಗಳ ಮೇಲೆ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈಗಿನ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ ಇನ್ನು ಸತತ ಎರಡು ವರ್ಷಗಳ ಕಾಲ ವಾಹನೋದ್ಯಮ ಇಳಿಜಾರಿನ ಹಾದಿಯಲ್ಲಿ ಇರುತ್ತದೆ. ಭವಿಷ್ಯದಲ್ಲಿ ಬಂಡವಾಳ ಹೂಡಿಕೆಯಲ್ಲಿ ಇಳಿಕೆ, ದಿವಾಳಿ ಆಗುವ ಅಪಾಯ, ಉದ್ಯೋಗ ನಷ್ಟ ಇಂಥ ಸವಾಲು ಇರುತ್ತವೆ ಎಂದು ವರದಿ ತಿಳಿಸಿದೆ.


Click it and Unblock the Notifications