ನವದೆಹಲಿ, ಏಪ್ರಿಲ್ 11: ಹೂಡಿಕೆ ಮಾಡುವವರ ಪಾಲಿಗೆ ಈಗ ಹಲವು ಅವಕಾಶಗಳು ಇವೆ. ಷೇರು ಮಾರುಕಟ್ಟೆಯ ಮೂಲಕ ಆರಂಭವಾಗಿ, ಕ್ರಿಪ್ಟೋ ಕರೆನ್ಸಿ ತನಕ ಹಲವು ರೂಪದಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ. ಆದರೆ ಹಣ ಹೂಡಿಕೆ ಮಾಡುವಾಗ ಸ್ವಲ್ಪ ಎಡವಟ್ಟು ಮಾಡಿಕೊಂಡರೂ ಲಕ್ಷ ಲಕ್ಷ ಹಣ ಉಂಡೆನಾಮ ಆಗುವುದು ಗ್ಯಾರಂಟಿ. ಇದೇ ರೀತಿ ಇಲ್ಲೊಬ್ಬ ಎಂಬಿಎ ವಿದ್ಯಾರ್ಥಿ ದೊಡ್ಡ ಮೊತ್ತದ ಹಣ ಕಳೆದುಕೊಂಡು, ₹23 ಲಕ್ಷ ವಂಚನೆಗೆ ಒಳಗಾಗಿದ್ದಾನೆ.
ಭಾರತದಲ್ಲಿ ಈಗಲೂ ಕ್ರಿಪ್ಟೊ ಕರೆನ್ಸಿ ಬಗ್ಗೆ ಗೊಂದಲ ಇದೆ. ಏಕೆಂದರೆ ಕ್ರಿಪ್ಟೊ ಕರೆನ್ಸಿ ಈಗ ಕೂಡ ಕಾನೂನಿನ ಅಡಿಯಲ್ಲಿ ಬರಲ್ಲ ಎಂಬ ಮಾತು ಇದೆ. ಹೀಗಾಗಿ ಜನರು ಕೂಡ ಕ್ರಿಪ್ಟೊ ಕರೆನ್ಸಿ ಮೇಲೆ ಹೂಡಿಕೆ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಹೀಗಿದ್ದರೂ ಕೆಲವರು ಮೊಂಡು ಧೈರ್ಯ ಮಾಡಿ ಕ್ರಿಪ್ಟೊ ಕರೆನ್ಸಿ ಮೇಲೆ ಹೂಡಿಕೆ ಮಾಡುತ್ತಾರೆ. ಇದೇ ರೀತಿ ಕ್ರಿಪ್ಟೊ ಕರೆನ್ಸಿ ಕರೆನ್ಸಿ ಮೇಲೆ ಹೂಡಿಕೆ ಮಾಡಲು ಮುಂದಾದ ವ್ಯಕ್ತಿಗೆ, ಯಾರೋ ಕೆಲವು ವಂಚಕರು ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಶ್ಚಿಮ ಬಂಗಾಳದ ವಿದ್ಯಾರ್ಥಿ
ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಗ್ಪುರದ ಕಾಲೇಜು ಒಂದರಲ್ಲಿ. ವಿದ್ಯಾರ್ಥಿ ಒಬ್ಬ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ವಂಚಕರ ಮಾತಿಗೆ ತಲೆದೂಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಹಾರಾಷ್ಟ್ರ ನಾಗ್ಪುರದ ಕಾಲೇಜು ಒಂದರ ವಿದ್ಯಾರ್ಥಿ ಆಗಿದ್ದ, ಎಂಬಿಎ ಸ್ಟೂಡೆಂಟ್ ಹೀಗೆ ವಂಚಕರ ಮಾತು ಕೇಳಿ ₹23 ಲಕ್ಷ ಮೋಸ ಹೋಗಿದ್ದಾನೆ. ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 28 ವರ್ಷದ ವಿದ್ಯಾರ್ಥಿಗೆ ಈ ರೀತಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ಈ ವಿದ್ಯಾರ್ಥಿಗೆ ಹೂಡಿಕೆ ಮಾಡಲು ಸಲಹೆ ಬಂದಿದ್ದು ಎಲ್ಲಿಂದ?
ಮೊದಲು ₹1,000 ಹೂಡಿಕೆ ಮಾಡಿ
ಈ ಘಟನೆ ಕೆಲವು ತಿಂಗಳ ಹಿಂದಕ್ಕೆ ಸಾಗುತ್ತದೆ, 2023ರ ನವೆಂಬರ್ 17 ರಂದು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಷನ್ ಅಲ್ಲಿ ಹೂಡಿಕೆ ಸಲಹೆಗಾರ ಎಂಬ ಸೋಗಿನಲ್ಲಿ ವಂಚಕರು ಇದೇ ವಿದ್ಯಾರ್ಥಿಗೆ ಬಲೆ ಹಾಕಿದ್ದರು. ವಂಚಕ ವಿದ್ಯಾರ್ಥಿಯನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾನೆ ಎನ್ನಲಾಗಿದೆ. ಮೊದಲು ಈ ವಿದ್ಯಾರ್ಥಿ ₹1,000 ಹೂಡಿಕೆ ಮಾಡಿ ಅದಕ್ಕೆ ಪ್ರತಿಯಾಗಿ ಭರ್ತಿ 1,400 ರೂಪಾಯಿ ಗಳಿಸಿದ್ದ. ಆ ಮೂಲಕ ವಿದ್ಯಾರ್ಥಿ ನಂಬಿಕೆ ಗಿಟ್ಟಿಸಿಕೊಳ್ಳುವಲ್ಲಿ ವಂಚಕ ಯಶಸ್ವಿಯಾಗಿದ್ದ. ಆ ನಂತರ ಮತ್ತೊಂದು ಖತರ್ನಾಕ್ ಐಡಿಯಾ ಮಾಡಿದ್ದ.
ಹೀಗೆ ಸಣ್ಣ ಮೊತ್ತದ ಆಸೆ ತೋರಿಸಿದ್ದ ವಂಚಕ, ವಿದ್ಯಾರ್ಥಿ ಬಳಿ ಮತ್ತಷ್ಟು ಹಣವನ್ನು ಪಡೆಯಲು ಬಲೆ ಬೀಸಿದ್ದ. ಲಾಭ ಗಳಿಸುವ ದುರಾಸೆಯಲ್ಲಿ ವಿದ್ಯಾರ್ಥಿ ಕೂಡ ಒಟ್ಟು 23 ಲಕ್ಷ ಹೂಡಿಕೆ ಮಾಡಿದ್ದ ಎಂದು ಇದೀಗ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ 23 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ ನಂತರ ವಿದ್ಯಾರ್ಥಿಗೆ ದುಡ್ಡು ವಾಪಸ್ ಬರಲೇ ಇಲ್ಲ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಕೋಪಗೊಂಡ ವಿದ್ಯಾರ್ಥಿ ವಾಥೋಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ಆ ನಂತರ ಪ್ರಕರಣ ಬಯಲಾಗಿದ್ದು, ಪೊಲೀಸರು ವಂಚಕನಿಗಾಗಿ ಈಗ ಹುಡುಕಾಟ ಆರಂಭಿಸಿದ್ದಾರೆ.


Click it and Unblock the Notifications