2020ನೇ ಇಸವಿಯಲ್ಲಿ ಕರೆನ್ಸಿ ಚಲಾವಣೆಯಲ್ಲಿ 5 ಲಕ್ಷ ಕೋಟಿ ರುಪಾಯಿ ಹೆಚ್ಚಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯರು ನಗದು ಬಳಕೆಯನ್ನು ಹೆಚ್ಚು ಮಾಡಿದ್ದಾರೆ. FY21ರಲ್ಲಿ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) 7.5% ಕುಗ್ಗುವ ಅಂದಾಜು ಇದ್ದು, ಕರೆನ್ಸಿ ಟು ಜಿಡಿಪಿ ಪ್ರಮಾಣ 15% ದಾಟಬಹುದು ಎಂಬ ನಿರೀಕ್ಷೆ ಕೂಡ ಇದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಜನವರಿ 1, 2019ರಿಂದ ಜನವರಿ 1, 2020ರ ಮಧ್ಯೆ ನೋಟಿನ ಚಲಾವಣೆ 5,01,405 ಕೋಟಿ ರುಪಾಯಿ ಜಾಸ್ತಿ ಆಗಿದೆ. ಒಟ್ಟಾರೆಯಾಗಿ 27,70,315 ಕೋಟಿ ರುಪಾಯಿ ಮುಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 22% ಹೆಚ್ಚಳವಾಗಿದೆ.
ಅಪನಗದೀಕರಣದ ನಂತರ ಚಲಾವಣೆಯಲ್ಲಿನ ನೋಟು 20% ಕಡಿಮೆ ಆಗಿತ್ತು
ಅಪನಗದೀಕರಣದ ಏರಿಕೆಯ ಬ್ಯಾಂಕ್ ನೋಟುಗಳ ಬದಲಾವಣೆಯನ್ನು ಹೊರತುಪಡಿಸಿದರೆ ಈ ವರೆಗಿನ ಲೆಕ್ಕಾಚಾರದಲ್ಲಿ ಇದು ತೀವ್ರವಾದ ಏರಿಕೆ. ಅಪನಗದೀಕರಣದ ಕಾರಣಕ್ಕೆ FY17ರಲ್ಲಿ ಚಲಾವಣೆಯಲ್ಲಿನ ನೋಟು 20% ಕಡಿಮೆ ಆಗಿತ್ತು. ಆ ಮರು ವರ್ಷವೇ ಹೊಸ ನೋಟುಗಳನ್ನು ವಿತರಿಸಿದ್ದರಿಂದ 37% ಹೆಚ್ಚಳವಾಯಿತು. ಕಳೆದ ದಶಕದಲ್ಲಿನ ಸರಾಸರಿ ಬೆಳವಣಿಗೆಯೇ 12.6% ಮತ್ತು ಕಳೆದ 50 ವರ್ಷಗಳಲ್ಲಿನ ಸರಾಸರಿ 13.8%.RBI ಬಿಡುಗಡೆ ಮಾಡಿರುವ ಮಾಹಿತಿಯಂತೆ, ಕಳೆದ 50 ವರ್ಷದಲ್ಲಿ ನಾಲ್ಕು ಸಂದರ್ಭಗಳಲ್ಲಿ ಮಾತ್ರ ಕರೆನ್ಸಿ ಬೆಳವಣಿಗೆ 4 ಸಲ 17%ಗೂ ಹೆಚ್ಚು ಸತತ ಮುರ್ನಾಲ್ಕು ವರ್ಷ ಆಗಿದೆ. 1987- 90, 1993- 96 ಹಾಗೂ 2005- 09 ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಹೆಚ್ಚಿದ್ದರಿಂದ ನೋಟಿಗೆ ಬೇಡಿಕೆ ಇತ್ತು. ಆದರೆ ಈಚಿನ ಏರಿಕೆಯು ಜಿಡಿಪಿ ಕುಸಿತದ ಹೊರತಾಗಿಯೂ ಆಗಿದೆ.
ಅನಿಶ್ಚಿತತೆ ಕಾರಣಕ್ಕೆ ಹೆಚ್ಚೆಚ್ಚು ನಗದು ಸಂಗ್ರಹ
2020ರಲ್ಲಿ ಕೊರೊನಾದಿಂದ ಒಂದು ಬಗೆಯ ಅನಿಶ್ಚಿತತೆ ತಲೆದೋರಿತು. ವೈದ್ಯಕೀಯ ಅಥವಾ ಹಣಕಾಸು ತುರ್ತಿನ ಆತಂಕದಲ್ಲಿ ಜನರು ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವುದಕ್ಕೆ ಆರಂಭಿಸಿದರು. ಜಿಡಿಪಿ ಏರಿಕೆ ಜತೆಜತೆಗೆ ನೋಟಿನ ಚಲಾವಣೆಯೂ ಜಾಸ್ತಿ ಆಯಿತು. ಆದರೆ ಕಳೆದ ಮೂರು ವರ್ಷಗಳಲ್ಲಿ ಜಿಡಿಪಿ ಬೆಳವಣಿಗೆ ಕಡಿಮೆ ಇದ್ದರೂ ಕರೆನ್ಸಿ ನೋಟುಗಳ ಬೆಳವಣಿಗೆ ಹೆಚ್ಚಾಗಿದೆ. ಕಳೆದ ವರ್ಷ ಕೊರೊನಾ ಪ್ರಕರಣಗಳು ಭಾರತದಲ್ಲಿ ಹೆಚ್ಚಾದ ಮೇಲೆ ಠೇವಣಿ ಬೆಳವಣಿಗೆ ನಿಧಾನ ಆಯಿತು. ವರ್ಷದಿಂದ ವರ್ಷದ ಸಾರ್ವಜನಿಕರ ಬಳಿಯ ಕರೆನ್ಸಿ ಬೆಳವಣಿಗೆ 2020ರ ಫೆಬ್ರವರಿಗೆ 11.3%, ಮಾರ್ಚ್ ಗೆ 14.5% ಮತ್ತು ಜೂನ್ ಗೆ 21% ಆಯಿತು.
ಯುಎಸ್ ಡಾಲರ್ ಗಳ ಪೈಕಿ ಶೇಕಡಾ 35ರಷ್ಟು 10 ತಿಂಗಳಲ್ಲಿ ಮುದ್ರಣ
ಮಾಧ್ಯಮದ ವರದಿಗಳ ಪ್ರಕಾರ, ಚಲಾವಣೆಯಲ್ಲಿ ಇರುವ ಎಲ್ಲ ಯುಎಸ್ ಡಾಲರ್ ಗಳ ಪೈಕಿ ಶೇಕಡಾ 35ರಷ್ಟು ಕಳೆದ 10 ತಿಂಗಳಲ್ಲಿ ಮುದ್ರಣವಾಗಿದೆ. ಅಲ್ಲಿನ ಕೇಂದ್ರ ಬ್ಯಾಂಕ್ ಹಣಕಾಸು ಚಲಾವಣೆಗಾಗಿ ತೆಗೆದುಕೊಂಡ ಕ್ರಮ ಇದು.ಆರ್ ಬಿಐ ಹೇಳುವಂತೆ, ಈಗಿನ ಬೆಳವಣಿಗೆಯೂ ಜಾಗತಿಕವಾಗಿಯೇ ನಡೆಯುತ್ತಿರುವ ವಿದ್ಯಮಾನ. ಬ್ರೆಜಿಲ್, ಚಿಲಿ, ಭಾರತ, ರಷ್ಯಾ ಮತ್ತು ಟರ್ಕಿ ಸೇರಿದಂತೆ, ಅಭಿವೃದ್ಧಿಶೀಲ ರಾಷ್ಟ್ರಗಳಾದ ಯುಎಸ್, ಸ್ಪೇನ್, ಇಟಲಿ, ಜರ್ಮನಿ, ಫ್ರಾನ್ಸ್ ನಂತಹ ನಗದು ಚಲಾವಣೆ ಕಡಿಮೆ ಇರುವ ದೇಶಗಳಲ್ಲೂ ಹೀಗಾಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಲ್ಲಿನ ವ್ಯವಸ್ಥೆಯೊಳಗೆ ನಗದು ಪೂರೈಕೆ ಹೆಚ್ಚು ಮಾಡಬೇಕು ಎಂಬ ಉದ್ದೇಶಕ್ಕೆ ಆಯಾ ದೇಶಗಳು ಕೈಗೊಂಡ ಕ್ರಮದ ಕಾರಣಕ್ಕೆ ಈ ಬೆಳವಣಿಗೆ ಆಗಿದೆ ಎಂದು ಆರ್ ಬಿಐ ಹೇಳಿದೆ.


Click it and Unblock the Notifications