ಎಚ್ಚರ, ಎಚ್ಚರ! ರಿಲಯನ್ಸ್ ಜಿಯೋ ಗ್ರಾಹಕರಿಗೆ ಹಲವರಿಗೆ ಮೆಸೇಜ್ ಗಳು ಬರುತ್ತಿವೆ. ಜಿಯೋ- ಫೇಸ್ ಬುಕ್ ನಿಂದ ದಿನಕ್ಕೆ 25GBಯಂತೆ 6 ತಿಂಗಳು ಉಚಿತ ಡೇಟಾ ನೀಡಲಾಗುವುದು ಎಂಬ ಒಕ್ಕಣೆ ಅದರಲ್ಲಿದೆ. ಆದರೆ ಇದು ವಂಚನೆ. ಇಂಥ ಯಾವ ಯೋಜನೆಯನ್ನೂ ರಿಲಯನ್ಸ್ ಜಿಯೋ ಘೋಷಣೆ ಮಾಡಿಲ್ಲ.
ರಿಲಯನ್ಸ್ ಜಿಯೋ- ಫೇಸ್ ಬುಕ್ ಮಧ್ಯದ ಇತ್ತೀಚಿನ ವ್ಯವಹಾರವನ್ನು ಕೆಲವರು ಮುಂದು ಮಾಡಿಕೊಂಡು, ಆಫರ್ ಅನ್ನು ಸತ್ಯ ಎಂಬಂತೆ ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸ್ವತಃ ಜಿಯೋ ಕಂಪೆನಿಯಿಂದಲೇ ಈ ವಂಚನೆ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಇಂಥ ವಂಚನೆ ಜಾಲಕ್ಕೆ ಬೀಳಬೇಡಿ ಎಂದು ಸಂದೇಶ ಕಳುಹಿಸಲಾಗುತ್ತಿದೆ.
ಭಾರತ ಮೂಲದ ಸಂಖ್ಯೆಯಿಂದ ನಕಲಿ ಸಂದೇಶ ಬರುತ್ತಿದೆ. ಈ ಆಫರ್ ಸಿಗಬೇಕು ಅಂದರೆ ಅಪ್ಲಿಕೇಷನ್ ಡೌನ್ ಲೌಡ್ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ. ಆ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಸಂದೇಶದಲ್ಲಿ ಒಂದು ಲಿಂಕ್ ಕೂಡ ಇರುತ್ತದೆ. ಹೆಚ್ಚಿನ ಹಣ ನೀಡದೆ ಈ ಆಫರ್ ಪಡೆಯಬಹುದು ಎಂಬ ಮಾಹಿತಿಯೂ ಒಳಗೊಂಡಿರಲಿದೆ.

MyJio ಅಪ್ಲಿಕೇಷನ್ ನಂತೆಯೇ ಇದು ಕೂಡ ಇರಲಿದ್ದು, ಬಳಕೆದಾರನ್ನು ಗೊಂದಲಕ್ಕೆ ದೂಡುತ್ತದೆ. ಆದರೆ ಈ ಅಪ್ಲಿಕೇಷನ್ ನಲ್ಲಿ ಮಾಲ್ ವೇರ್ ಅಥವಾ ರಾನ್ಸಮ್ ವೇರ್ ಇರುವ ಸಾಧ್ಯತೆ ಇದೆ. ಆ ಮೂಲಕ ಡೌನ್ ಲೋಡ್ ಮಾಡಲಾದ ಸೂಕ್ಷ್ಮ ಮಾಹಿತಿಗಳಾದ ಬ್ಯಾಂಕ್ ಡೀಟೇಲ್ಸ್ ಇನ್ನಿತರ ಪಾಸ್ ವರ್ಡ್ ಗಳು ಹ್ಯಾಕ್ ಆಗುತ್ತವೆ.
ಕೊರೊನಾ ಹಬ್ಬಿರುವ ವೇಳೆಯಲ್ಲಿ ಸೈಬರ್ ಕ್ರೈಮ್ ಪ್ರಮಾಣ ತುಂಬಾ ಹೆಚ್ಚಾಗಿದೆ. ಭಾರತದಲ್ಲಿ ಈಚೆಗೆ ಜಿಯೋ ಎಂದು ಸರ್ಚ್ ಮಾಡುವುದು ಹೆಚ್ಚಾಗಿದೆ. ಅದರಲ್ಲೂ ಫೇಸ್ ಬುಕ್ ಜತೆಗೆ ಜಿಯೋ ವ್ಯವಹಾರ ಅಂತಿಮವಾದ ಮೇಲೆ ಸರ್ಚ್ ಪ್ರಮಾಣ ಮತ್ತೂ ಹೆಚ್ಚಾಗಿದೆ. ಈ ಅವಕಾಶ ಬಳಸಿಕೊಂಡು, ವಂಚನೆ ಮಾಡುವವರು ಜಾಸ್ತಿಯಾಗಿದ್ದಾರೆ.


Click it and Unblock the Notifications