Namma Metro: ದೊಡ್ಡ ಅಪ್ಡೇಟ್! ಮಾದವರದಿಂದ ತುಮಕೂರನ್ನು ಸಂಪರ್ಕಿಸುವ 52.41 ಕಿಮೀ ಮಾರ್ಗಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚನೆಯನ್ನು ನೀಡಿದ್ದಾರೆ.
ಹೌದು, ನಮ್ಮ ಮೆಟ್ರೋ ಬೆಂಗಳೂರಿನ ಜೀವನಾಡಿಯಾಗಿ ಕಳೆದ ಎರಡು ವರ್ಷಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಅಭಿವೃದ್ದಿ ಸಚಿವ ಡಿ ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ. ನಮ್ಮ ಮೆಟ್ರೋ ಯೋಜನೆ ಗಮನಾರ್ಹ ಪ್ರಗತಿ ಸಾಧಿಸಿದೆ,ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಗೊಳಿಸಲು ಮೆಟ್ರೋ ಒಂದು ಸುಲಭ ಮಾರ್ಗ. ಭವಿಷ್ಯದಲ್ಲಿ ಮೆಟ್ರೋ ಮಾರ್ಗಗಳು ನಗರದ ಪ್ರಮುಖ ಸಾರಿಗೆ ಮಾರ್ಗವಾಗಲಿವೆ. ಕಳೆದ ಎರಡು ವರ್ಷಗಳಲ್ಲಿ ನಮ್ಮ ಮೆಟ್ರೋ ಯೋಜನೆಯು ಉತ್ತಮ ಸಾಧನೆ ಮಾಡಿದೆ.
ಮೆಟ್ರೋ ಜಾಲವನ್ನು ಇನ್ನಷ್ಟು ವಿಸ್ತರಗೊಳಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಮಾದವರ (ಬಿಐಇಸಿ) ಯಿಂದ ತುಮಕೂರನ್ನು ಸಂಪರ್ಕಿಸುವ 52.41 ಕಿಮೀ ಮಾರ್ಗಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸೂಚಿಸಲಾಗಿದೆ. ಇದರ ಜೊತೆಗೆ 50 ಕಿಮೀ ಮೆಟ್ರೋ ವಿಸ್ತರಣೆಯನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಮೂರು ಹೊಸ (ಚಲ್ಲಘಟ್ಟದಿಂದ ಬಿಡದಿ (15 ಕಿಮೀ), ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ (24 ಕಿಮೀ), ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ (11 ಕಿಮೀ)) ಮಾರ್ಗಗಳಿವೆ.

ನಮ್ಮ ಮೆಟ್ರೋ ಯೋಜನೆಯ ಹಂತ - 3ರ ಭಾಗವಾಗಿ ಎರಡು ಪ್ರಮುಖ ಕಾರಿಡಾರ್‌ಗಳನ್ನು ರೂಪಿಸಲಾಗಿದೆ. ಕಾರಿಡಾರ್ - 1 ಜೆಪಿ ನಗರದ 4ನೇ ಹಂತದಿಂದ ಹೆಬ್ಬಾಳದವರೆಗೆ ಬರುತ್ತದೆ. ಇದು 29.20 ಕಿ.ಮೀ ಉದ್ದದ ರಸ್ತೆಯಾಗಿದೆ. ಕಾರಿಡಾರ್ - 2 ಹೊಸಹಳ್ಳಿಯಿಂದ ಕಡಬಗೆರೆಗೆ ಇರುತ್ತದೆ. ಇದು 11.45 ಕಿ.ಮೀ. ಉದ್ದದ ರಸ್ತೆ ಆಗಿದೆ.
ಇನ್ನು ಹೆಚ್ಚುವರಿ ಹಂತ - 3 ಪ್ರಸ್ತಾವನೆ ಇದೆ. ಇದು ಸರ್ಜಾಪುರದಿಂದ ಇಬ್ಬಲೂರು (ಹೊರ ವರ್ತುಲ ರಸ್ತೆ ಜಂಕ್ಷನ್) ವರೆಗಿನ ಬರುತ್ತದೆ. ಈ ರಸ್ತೆಯ ಉದ್ದ 14 ಕಿ.ಮೀ ಇರಲಿದೆ. ಹಾಗೆಯೇ ಅಗರದಿಂದ ಕೋರಮಂಗಲ 3 ನೇ ಬ್ಲಾಕ್ ವರೆಗೆ 2.45 ಕಿ.ಮೀ. ಸಂಪರ್ಕ ಸೇರಿವೆ. ಪ್ರಮುಖ ವಿಷಯವೆಂದರೆ, ಇದು ನಗರದ ಅತ್ಯಂತ ಜನನಿಬಿಡ ಐಟಿ ಕಾರಿಡಾರ್‌ಗಳಲ್ಲಿ ಒಂದಾಗಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಮುಂದಿನ ಹಂತಗಳು
ಡಿಪಿಆರ್ ಸಿದ್ಧತೆ: ಪ್ರಸ್ತಾವಿತ ಮಾರ್ಗಗಳಿಗೆ ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸುವುದು.
ಸರ್ಕಾರದ ಅನುಮೋದನೆ: ಮೆಟ್ರೋ ವಿಸ್ತರಣಾ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ.
ಅನುಷ್ಠಾನ: ಪಿಪಿಪಿ ವಿಧಾನದ ಮೂಲಕ ಯೋಜನೆಯ ಅನುಷ್ಠಾನ ಮಾಡುವುದು.
ಬ್ರ್ಯಾಂಡ್ ಬೆಂಗಳೂರಿಗೆ ಬ್ರ್ಯಾಂಡೆಡ್ ರಸ್ತೆಗಳು!
ಬೆಂಗಳೂರಿನ ರಸ್ತೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಉನ್ನತೀಕರಿಸಲು "ಬ್ರ್ಯಾಂಡ್ ಬೆಂಗಳೂರು" ಪರಿಕಲ್ಪನೆಯಡಿ ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದು ನಗರದ ರಸ್ತೆಗಳ ಮೇಲಿನ ಒತ್ತಡ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಜಲ ಸಮೃದ್ಧಿ: ರೈತರ ನೆಮ್ಮದಿ
ರಾಜ್ಯವು ಜಲ ಸಮೃದ್ಧವಾಗಿದ್ದರೆ ರೈತರು ನೆಮ್ಮದಿಯಿಂದ ಇರಲಿದ್ದಾರೆ. ಸುಭಿಕ್ಷ ಕರ್ನಾಟಕ ಸ್ಥಾಪನೆಯ ಉದ್ದೇಶದೊಂದಿಗೆ ಬೃಹತ್ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬದಲಾವಣೆಗಳನ್ನು ತರಲು ಕಳೆದ ಎರಡು ವರ್ಷಗಳಿಂದ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಬೆಂಗಳೂರನ್ನು ಪ್ರಗತಿಯತ್ತ ನಮ್ಮ ಸರ್ಕಾರ ಮುನ್ನಡೆಸುತ್ತಿದೆ. 4-5 ವರ್ಷಗಳಲ್ಲಿ ಬೆಂಗಳೂರಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹1 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲಾಗುತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮೆಟ್ರೋ ವಿವಿಧ ಹಂತದ ಕಾಮಗಾರಿಗಳು ಸದ್ಯದಲ್ಲಿ ಆರಂಭವಾಗುತ್ತವೆ ಎಂದು ಹೇಳಿದ್ದಾರೆ.


Click it and Unblock the Notifications