ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿ ನೋಟಿನ ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ತಿಳಿಸಿದೆ. ಮೇ ತಿಂಗಳಿನಲ್ಲಿ ಆರ್‌ಬಿಐ ಕೈಗೊಂಡ ಈ ನಿರ್ಧಾರದ ವಿರುದ್ಧದ ಧನಿಯೂ ಕೂಡಾ ಕೇಳಿ ಬಂದಿದೆ. ಈ ನಿರ್ಧಾರದ ವಿರುದ್ಧವಾಗಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಇದನ್ನು ಕೋರ್ಟ್ ವಜಾಗೊಳಿಸಿದೆ.
ಮುಖ್ಯ ನಾಯ್ಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸುಬ್ರಮನಿಯಂ ಪ್ರಸಾದ್‌ರನ್ನು ಒಳಗೊಂಡ ದ್ವಿಸದಸ್ಯ ವಿಭಾಗೀಯ ಪೀಠವು, 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆಯುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ರಜನೀಶ್ ಭಾಸ್ಕರ್ ಗುಪ್ತಾ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದು, ಆರ್‌ಬಿಐ ಕಾಯ್ದೆಯಡಿ ನೋಟುಗಳನ್ನು ರದ್ದುಗೊಳಿಸಲು ಆರ್‌ಬಿಐಗೆ ಯಾವುದೇ ಸ್ವತಂತ್ರ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ನೋಟು ರದ್ದು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಆದರೆ ಸರ್ಕಾರ ಅಂತಹ ಯಾವುದೇ ಆದೇಶವನ್ನು ಹೊರಡಿಸಿದೆ ಎಂಬ ದಾಖಲೆಗಳು ಇಲ್ಲ ಎಂದು ವಕೀಲ ರಜನೀಶ್ ಭಾಸ್ಕರ್ ಗುಪ್ತಾ ವಾದ ಮಾಡಿದ್ದಾರೆ.
ಈ ಹಿಂದೆಯೂ ಸಲ್ಲಿಕೆಯಾಗಿತ್ತು ಅರ್ಜಿ
ಇನ್ನು ಈ ಹಿಂದೆ ಯಾವುದೇ ಗುರುತಿನ ಪುರಾವೆಗಳ ಅಗತ್ಯವಿಲ್ಲದೆ ಈ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಶ್ವಿನಿ ಉಪಾಧ್ಯಾಯ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಮೇ 29 ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಈಗ ವಕೀಲ ರಜನೀಶ್ ಭಾಸ್ಕರ್ ಗುಪ್ತಾ ಸಲ್ಲಿಸಿದ ಅರ್ಜಿಯನ್ನು ಕೂಡಾ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
2000 ರೂಪಾಯಿ ನೋಟನ್ನು ಜಾರಿಗೆ ತರಲಾದ ಉದ್ದೇಶವು ಪೂರೈಕೆಯಾಗಿದೆ. ಆದ್ದರಿಂದಾಗಿ ಆ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನೀತಿ ವಿಷಯವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದು ಎಂದು ನ್ಯಾಯಾಲಯವು ಒತ್ತಿ ಹೇಳಿದೆ. "ಆದ್ದರಿಂದ, ಸರ್ಕಾರದ ನಿರ್ಧಾರವು ನಿರಂಕುಶವಾಗಿದೆ ಅಥವಾ ಸರಿಯಾಗಿಲ್ಲ ಎಂದು ಹೇಳಲಾಗುವುದಿಲ್ಲ. ಅಥವಾ ಅದು ಕಪ್ಪುಹಣ, ಅಕ್ರಮ ಹಣ ವರ್ಗಾವಣೆ, ಲಾಭಕೋರತನ ಅಥವಾ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಕೂಡಾ ಹೇಳಲಾಗುವುದಿಲ್ಲ," ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆಯುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯು ರದ್ದಾದ ಬೆನ್ನಲ್ಲೇ ಈಗ ವಕೀಲ ರಜನೀಶ್ ಭಾಸ್ಕರ್ ಗುಪ್ತಾ ಸುಪ್ರೀಂ ಕೋರ್ಟ್ ಕದ ತಟ್ಟುವ ಸಾಧ್ಯತೆಯಿದೆ. ಇನ್ನು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಪ್ರಸ್ತುತ ಈ ಪ್ರಕರಣವು ಸುಪ್ರೀಂ ಕೋರ್ಟ್‌ನಡಿಯಲ್ಲಿದೆ. ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಈ ವಿಷಯವನ್ನು ತುರ್ತಾಗಿ ವಿಚಾರಣೆ ಮಾಡಲು ನಿರಾಕರಿಸಿದೆ.
ನೋಟು ಹಿಂಡೆದ ಆರ್‌ಬಿಐ
ಮೇ 19ರಂದು ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯುವುದಾಗಿ ಆರ್‌ಬಿಐ ಘೋಷಣೆ ಮಾಡಿದೆ. ಅದಾದ ಬಳಿಕ ಮೇ 23ರಿಂದ ನೋಟು ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಸೆಪ್ಟೆಂಬರ್ 30, 2023ರವರೆಗೆ ನೋಟು ಬದಲಾವಣೆ ಅಥವಾ ಜಮೆಗೆ ಆರ್‌ಬಿಐ ಸಮಯವನ್ನು ಕೂಡಾ ನೀಡಿದೆ.
ನಿಮ್ಮಲ್ಲಿ 2000 ರೂಪಾಯಿ ನೋಟುಗಳು ಇದ್ದರೆ ಆ ನೋಟುಗಳನ್ನು ಬ್ಯಾಂಕುಗಳಲ್ಲಿ ಮತ್ತು ಆರ್‌ಬಿಐ ಕಚೇರಿಗಳಲ್ಲಿ ನೀವು ಈ ಗಡುವಿಗೂ ಮುನ್ನ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಬ್ಯಾಂಕುಗಳಲ್ಲಿ ನೀವು ಈ ನೋಟುಗಳನ್ನು ನೇರವಾಗಿ ನಿಮ್ಮ ಖಾತೆಗೆ ಡೆಪಾಸಿಟ್ ಕೂಡಾ ಮಾಡಬಹುದಾಗಿದೆ.


Click it and Unblock the Notifications