ಕರ್ನಾಟಕದ ಅಧಿಕವಾಗಿ ಭತ್ತವನ್ನು ಬೆಳೆಯುವ ಪ್ರದೇಶ ಎಂದು ಪರಿಗಣಿಸಲಾದ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭತ್ತದ ಉತ್ಪಾದನೆಯಲ್ಲಿ ಶೇಕಡ 15 ರಷ್ಟು ಹೆಚ್ಚಳ ಕಂಡು ಬಂದಿದೆ. ಆದರೂ ಭತ್ತದ ಬೆಲೆ ಮಾತ್ರ ಕರ್ನಾಟಕದಲ್ಲಿ ಶೇಕಡ 25 ರಷ್ಟು ಏರಿಕೆಯಾಗಿದೆ.
ಹೌದು, ಈ ಭತ್ತದ ಬೆಲೆ ಏರಿಕೆಯಿಂದಾಗಿ ಅಕ್ಕಿ ಬೆಲೆಯು ಕೂಡಾ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಈಗಾಗಲೇ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಪ್ರತಿ ನಿತ್ಯ ಒಂದು ಪ್ಲೇಟ್ ಊಟದ ಬೆಲೆಯೂ ಗಗನಕೇರುತ್ತಿದೆ. ಭತ್ತದ ಬೆಲೆ ಏರಿಕೆಗೆ ಕಾರಣವೇನು?, ಇಲ್ಲಿದೆ ವಿವರ ಮುಂದೆ ಓದಿ.....

ಭತ್ತದ ಬೆಲೆ ಏರಿಕೆಗೆ ಕಾರಣ
ಈ ವರ್ಷ ತುಂಗಭದ್ರಾ ಮತ್ತು ಆಲಮಟ್ಟಿ ಜಲಾಶಯದ ನೀರು ಕಡಿಮೆ ಸಂಗ್ರಹವಾಗಿರುವ ಕಾರಣ ಕುಡಿಯಲು ಮಾತ್ರ ಬಳಸಲಾಗುವುದು. ಇದರಿಂದಾಗಿ ರಬಿ ಬೆಳೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತವಾಗುವ ನಿರೀಕ್ಷೆಯಿದೆ. ಈ ಕಾರಣದಿಂದಾಗಿ ರೈತರು ಭತ್ತ ಬೆಳೆಯನ್ನು ಸಂಗ್ರಹ ಮಾಡಿದ್ದಾರೆ. ಇದರಿಂದಾಗಿ ಕೃತಕ ಅಭಾವ ಸೃಷ್ಟಿಯಾಗಿ ಭತ್ತದ ಬೆಲೆ ಹೆಚ್ಚಾಗಿದೆ.
ಗಿರಣಿದಾರರು ತಮ್ಮ ಘಟಕಗಳನ್ನು ಚಾಲನೆಯಲ್ಲಿಡಲು ಬಿಹಾರದಂತಹ ರಾಜ್ಯಗಳಿಂದ ಭತ್ತವನ್ನು ಸಂಗ್ರಹಿಸಬೇಕಾದ ಸ್ಥಿತಿ ಉಂಟಾಗಿದೆ. ಕೇವಲ ಒಂದು ವಾರದಲ್ಲಿ ಕ್ವಿಂಟಾಲ್‌ಗೆ 3,000 ರೂಪಾಯಿಯಿಂದ 2,400 ರೂಪಾಯಿಗೆ ಕುಸಿದಿದೆ ಎಂದು ಸಣ್ಣ ರೈತರು ಭಾವಿಸಿದ್ದರಿಂದ ರೈತರು ಮತ್ತು ಗಿರಣಿಗಾರರ ನಡುವೆ ಜಗಳಕ್ಕೂ ಇದು ಕಾರಣವಾಗಿದೆ.
ಆದರೆ, ಇದೀಗ ಮತ್ತೆ ಬೆಲೆ 3 ಸಾವಿರ ರೂಪಾಯಿ ಬೆಲೆ ದಾಟಿದ್ದು, ದೊಡ್ಡ ದೊಡ್ಡ ಗಿರಣಿದಾರರ ಭತ್ತ ಸಂಗ್ರಹಣೆ ಇದಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಪ್ರಸಿದ್ಧ ಗಂಗಾವತಿ ಸೋನಾ ಅಕ್ಕಿಯಲ್ಲಿ ಇತರೆ ರಾಜ್ಯಗಳ ಕಳಪೆ ಭತ್ತದೊಂದಿಗೆ ಗಿರಣಿಗಾರರು ಕಲಬೆರಕೆ ಮಾಡುತ್ತಿದ್ದಾರೆ ಎನ್ನುತ್ತಾರೆ ರೈತ ಮುಖಂಡರು.
ತುಂಗಭದ್ರಾ ಜಲಾನಯನ ಪ್ರದೇಶದ 3.6 ಲಕ್ಷ ಹೆಕ್ಟೇರ್ ಭತ್ತದಲ್ಲಿ 90,000 ಹೆಕ್ಟೇರ್ 10 ಎಕರೆಗಿಂತ ಹೆಚ್ಚು ಹೊಂದಿರುವ ರೈತರಿಗೆ ಸೇರಿದೆ. "ಮಿಲ್ಲರ್‌ಗಳು ಮತ್ತು ಶೇಖರಣಾ ಸಾಮರ್ಥ್ಯದ ದೊಡ್ಡ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಬಡ ರೈತರು ಭತ್ತ ಸಂಗ್ರಹಿಸಲಾಗದೆ ಕಡಿಮೆ ದರಕ್ಕೆ ಮಾರಾಟ ಮಾಡಿ ಸಾಲ ತೀರಿಸುವ ಅನಿವಾರ್ಯತೆ ಎದುರಾಗಿದೆ," ಎಂದು ಡೆಕ್ಕನ್ ಹೆರಾಲ್ಡ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮರೆಪ್ಪ ಸಾಲವಣಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಿ ಗಿರಣಿಗಳ ಸಂಘದ ಕಾರ್ಯಾಧ್ಯಕ್ಷ ಪುರುಷೋತ್ತಮ ಸಾವಿತ್ರಿ ಮಾತನಾಡಿ, ಸರ್ಕಾರದ ಭಾರತ್ ಅಕ್ಕಿ ಬ್ರಾಂಡ್‌ಗೆ ಕೆಜಿಗೆ 25 ರೂಪಾಯಿ ಬೆಲೆಯಿದೆ. ಸ್ಥಳೀಯ ಭತ್ತಕ್ಕೆ ಬೇಡಿಕೆ ಕಡಿಮೆಯಾಗಿದೆ. ವರ್ಷವಿಡೀ ಗಿರಣಿಗಳನ್ನು ನಡೆಸಲು ಬೇರೆ ಪ್ರದೇಶಗಳಿಂದ ಭತ್ತವನ್ನು ಖರೀದಿಸಬೇಕಾದ ಸ್ಥಿತಿಯಿದೆ," ಎಂದು ತಿಳಿಸಿದರು.
ಕೊರತೆ ಕಂಡುಬಂದಲ್ಲಿ ಮತ್ತು ಜನರಿಗೆ ತೊಂದರೆಯಾದರೆ ನಾವು ಭತ್ತ ಸಂಗ್ರಹಣೆಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗಂಗಾವತಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟಡ್ಕಲ್ ಹೇಳಿದರು.


Click it and Unblock the Notifications