ಡಿಜಿಟಲ್ ರೂಪಾಯಿ ಅಥವಾ ಇ-ರುಪೀಯ ಪ್ರಾಯೋಗಿಕ ಆರಂಭವಾದ ಬಳಿಕದಿಂದ ಫೆಬ್ರವರಿ 28ರವರೆಗಿನ ಲೆಕ್ಕಾಚಾರದ ಪ್ರಕಾರ 130 ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ರುಪೀ ಚಲಾವಣೆಯಲ್ಲಿದೆ ಎಂದು ಸೋಮವಾರ (ಮಾರ್ಚ್ 13) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಜಿಟಲ್ ರೂಪಾಯಿ ವೋಲ್‌ಸೇಲ್ ಸೆಗ್‌ಮೆಂಟ್ (e₹-W) ಅನ್ನು ನವೆಂಬರ್ 1, 2022ರಂದು, ರಿಟೇಲ್ ಸೆಗ್‌ಮೆಂಟ್ (e₹-R) ಡಿಸೆಂಬರ್ 1, 2022ರಂದು ಆರಂಭಿಸಿದೆ.
ಒಟ್ಟು ಒಂಬತ್ತು ಬ್ಯಾಂಕುಗಳು ಡಿಜಿಟಲ್ ರುಪೀ ಸೇವೆಯನ್ನು ಆರಂಭಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಬ್ಯಾಂಕ್ ಆಫ್ ಬರೋಡಾ (ಬಿಒಬಿ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಎಸ್‌ಬಿಸಿ ಈ ಡಿಜಿಟಲ್ ರುಪೀ ವೋಲ್‌ಸೇಲ್ ಪ್ರಾಯೋಗಿಕ ಆರಂಭದಲ್ಲಿ ಭಾಗಿಯಾಗುತ್ತಿದೆ ಎಂದು ವಿತ್ತ ಸಚಿವೆ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ಬೇರೇನು ಹೇಳಿದ್ದಾರೆ?
"ಫೆಬ್ರವರಿ 28, 2023ರ ಲೆಕ್ಕಾಚಾರದ ಪ್ರಕಾರ ಒಟ್ಟಾಗಿ ರಿಟೇಲ್ ಡಿಜಿಟಲ್ ರುಪೀ ಮತ್ತು ವೋಲ್‌ಸೇಲ್ ಡಿಜಿಟಲ್ ರುಪೀ ಕ್ರಮವಾಗಿ 4.14 ಕೋಟಿ ರೂಪಾಯಿ ಮತ್ತು 126.27 ಕೋಟಿ ರೂಪಾಯಿ ಚಲಾವಣೆಯಲ್ಲಿದೆ," ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲಿಖಿತ ಉತ್ತರ ನೀಡಿದ್ದಾರೆ. e₹-R (ರಿಟೇಲ್) ಡಿಜಿಟಲ್ ಟೋಕನ್ ರೂಪದಲ್ಲಿ ಇರುತ್ತದೆ. ಪೇಪರ್ ಕರೆನ್ಸಿಯ ಮೌಲ್ಯಕ್ಕೆ ಸಮನಾಗಿ ಈ ಡಿಜಿಟಲ್ ರುಪೀ ಇರುತ್ತದೆ.
ಹಣಕಾಸು ಸಂಸ್ಥೆಯಾದ ಬ್ಯಾಂಕ್ ಮೂಲಕ ಈ ಡಿಜಿಟಲ್ ರುಪೀಯನ್ನು ವಿತರಣೆ ಮಾಡಲಾಗುತ್ತದೆ. ಇದು ಡಿಜಿಟಲ್ ವ್ಯಾಲೆಟ್ ರೂಪದಲ್ಲಿರುತ್ತದೆ. ಮೊಬೈಲ್ ಫೋನ್‌ನಲ್ಲಿ ವ್ಯಾಲೆಟ್ ರೂಪದಲ್ಲಿ ಇರಿಸಬಹುದಾಗಿದೆ. ಮೊದಲು ಪ್ರಮುಖವಾಗಿ 5 ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ಪರ್ಸನ್ ಟು ಪರ್ಸನ್ ಮತ್ತು ಪರ್ಸನ್ ಟು ಮೆರ್ಚೆಂಟ್ ವಹಿವಾಟಿನ ಪ್ರಯೋಗವನ್ನು ನಡೆಸಲಾಗಿದೆ.
"ಚಹಾ ಮಾರಾಟಗಾರು, ಹಣ್ಣು ಮಾರಾಟಗಾರರು, ಬೀದಿಬದಿ ವ್ಯಾಪಾರಸ್ಥರು, ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುವವರು, ಸಣ್ಣ ಮಳಿಗೆಗಳಲ್ಲಿ ಮೊದಲು ವ್ಯಕ್ತಿ ಹಾಗೂ ವ್ಯಾಪಾರಿ ನಡುವಿನ ಡಿಜಿಟಲ್ ರುಪೀ ವಹಿವಾಟು ನಡೆಸಲಾಗಿದೆ," ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದಾದ ಬಳಿಕ ರಿಟೇಲ್ ಅಂಗಡಿಗಳು, ಪೆಟ್ರೋಲ್ ಪಂಪ್‌ಗಳಲ್ಲಿ ವಹಿವಾಟು ನಡೆಸಲಾಗಿದೆ.
ಬಳಕೆ ಮಾಡುವುದು ಹೇಗೆ?
ಡಿಜಿಟಲ್ ರೂಪಾಯಿ ಡಿಜಿಟಲ್ ವ್ಯಾಲೆಟ್ ರೂಪದಲ್ಲಿರುತ್ತದೆ. ಇದು ಬ್ಯಾಂಕ್‌ಗಳು ನೀಡುವ ಪೇಪರ್ ಕರೆನ್ಸಿಯ ಡಿಜಿಟಲ್ ರೂಪಾಂತರವಾಗಿದೆ. ಸರಳವಾಗಿ ಹೇಳುವುದಾದರೆ ಇದು ಹಣದ ಎಲೆಕ್ಟ್ರಾನಿಕ್ ರೂಪವಾಗಿದೆ. ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ನಲ್ಲಿರುವ ಈ ಡಿಜಿಟಲ್ ರೂಪಾಯಿಯನ್ನು ಗ್ರಾಹಕರು ಮೊಬೈಲ್ ಫೋನ್‌ಗಳ ಮೂಲಕ ಬಳಕೆ ಮಾಡಬಹುದು. ಇದರ ಮೂಲಕ ನಾವು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ವ್ಯಕ್ತಿಯಿಂದ ವ್ಯಾಪಾರಿಗೆ ವಹಿವಾಟನ್ನು ನಡೆಸಲು ಸಾಧ್ಯವಾಗುತ್ತದೆ. ಇನ್ನು ಕ್ಯೂಆರ್ ಕೋಡ್ ಬಳಸಿಕೊಂಡು ಕೂಡಾ ಹಣ ಸಂದಾಯ ಮಾಡಬಹುದು.
ಮೊದಲು ಪ್ರಮುಖವಾಗಿ ನಾಲ್ಕು ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕವಾಗಿ ಆರಂಭ ಮಾಡಲಾಗುತ್ತದೆ. ನವದೆಹಲಿ, ಬೆಂಗಳೂರು, ಮುಂಬೈ, ಭುವನೇಶ್ವರದಲ್ಲಿ ಮೊದಲು ಆರಂಭ ಮಾಡಲಾಗುತ್ತದೆ. ಬಳಿಕ ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದಾರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ. ಬಳಿಕ ಇನ್ನಷ್ಟು ಪ್ರದೇಶ, ಬ್ಯಾಂಕ್‌ಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಸರ್ಕಾರವು ಈ ಹಿಂದೆ ಮಾಹಿತಿ ನೀಡಿತ್ತು. ಅದರಂತೆಯೇ ವಿಸ್ತರಣೆ ಮಾಡಲಾಗುತ್ತಿದೆ.


Click it and Unblock the Notifications