ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ದಾವಣಗೆರೆ-ಚಿತ್ರದುರ್ಗ-ತುಮಕೂರಿನ ನೇರ ರೈಲು ಮಾರ್ಗದ ಕುರಿತು ಒಂದು ಮಹತ್ವವಾದ ಅಪ್ಡೇಟ್ ತಿಳಿಸಿದ್ದಾರೆ. ಹಂಪನೂರು ಗ್ರಾಮದ ಬಳಿ ನಡೆಯುತ್ತಿದ್ದ ಕಾಮಗಾರಿ ಪರಿಶೀಲನೆ ನಂತರ, ಅವರು ಈ ರೈಲು ಮಾರ್ಗದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಬಯಲುಸೀಮೆ ಭಾಗದ ಜನರಿಗೆ ಅನುಕೂಲವಾಗಲೆಂದು ನೀಡಿರುವ ಯೋಜನೆಯಾಗಿದ್ದು, ಇದರ ಕೆಲಸ ಕಾರ್ಯಗಳನ್ನು ವಿ.ಸೋಮಣ್ಣ ಅವರು ಪರಿಶೀಲನೆ ನಡೆಸಿದ್ದು, ಯಾವಾಗ ಕಾಮಗಾರಿ ಪೂರ್ಣಗೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿದ್ದಾರೆ.

ಇನ್ನು ಕೇವಲ ದಾವಣಗೆರೆ-ತುಮಕೂರಿನ ರೈಲು ಮಾರ್ಗದ ಬಗ್ಗೆ ಅಷ್ಟೇ ಅಲ್ಲ. ಗದಗ-ವಾಡಿ, ರಾಯದುರ್ಗ ಹಾಗೂ ತುಮಕೂರು ಸಂಪರ್ಕ ಮಾರ್ಗಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯದ ಒಳನಾಡು ಪ್ರದೇಶಗಳಿಗೆ ಉತ್ತಮ ರೈಲು ಸಂಪರ್ಕ ಕಲ್ಪಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು. ಈ ಮಾರ್ಗಗಳು ಪೂರ್ಣಗೊಂಡರೆ ವ್ಯಾಪಾರ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೇ ಈ ರೈಲು ಮಾರ್ಗಗಳು 2027ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಅಂದಹಾಗೆ ಈಗಾಗಲೇ ದಾವಣಗೆರೆಯಿಂದ ಹೆಬ್ಬಾಳ ಗ್ರಾಮವರೆಗೆ ರೈಲು ಹಳಿ ಕಾಮಗಾರಿ ಮುಗಿದಿದೆ. ಹೀಗಾಗಿ ಸ್ವತಃ ತಾವೇ ಮೊಟಾರ್ ಟ್ರಾಲಿ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿರುವುದಾಗಿ ಸಚಿವರು ಹೇಳಿದರು. ಚಿತ್ರದುರ್ಗದ ಸುತ್ತಮುತ್ತಲಿನ ಭಾಗದಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಕೆಲಸ ನಿಧಾನಗತಿಯಲ್ಲಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಸ್ತುತ ಬೆಂಗಳೂರಿನಿಂದ ದಾವಣಗೆರೆಗೆ ರೈಲಿನಲ್ಲಿ ಪ್ರಯಾಣಿಸಲು ಸುಮಾರು ಐದು ಗಂಟೆ ಸಮಯ ಬೇಕಾಗುತ್ತಿದೆ. ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟ ತಾವು ದಾವಣಗೆರೆ ತಲುಪಲು ಐದು ಗಂಟೆ ತೆಗೆದುಕೊಂಡಿದ್ದಾಗಿ ಸಚಿವರು ಉದಾಹರಣೆ ನೀಡಿದರು. ನೇರ ರೈಲು ಮಾರ್ಗ ಪೂರ್ಣಗೊಂಡ ಬಳಿಕ ಬೆಂಗಳೂರು-ದಾವಣಗೆರೆ ನಡುವೆ ಪ್ರಯಾಣ ಸಮಯ ಎರಡೂವರೆ ಗಂಟೆಗೆ ಇಳಿಯಲಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಒದಗಲಿದೆ ಹಾಗೂ ಸಮಯ ಉಳಿತಾಯವಾಗಲಿದೆ ಎಂದು ಹೇಳಿದರು.
ಈ ಯೋಜನೆ ಪೂರ್ಣಗೊಂಡರೆ ಬಯಲುಸೀಮೆ ಪ್ರದೇಶದ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ. ಕೃಷಿ ಉತ್ಪನ್ನಗಳ ಸಾಗಣೆ, ಕೈಗಾರಿಕಾ ಚಟುವಟಿಕೆಗಳು ಮತ್ತು ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ದೊರೆಯಲಿದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಾರ್ಥಿಗಳಿಗೆ ಸುಲಭ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗವು ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.


Click it and Unblock the Notifications