ನವದೆಹಲಿ, ಏಪ್ರಿಲ್ 2: ವಿಸ್ತಾರ ವಿಮಾನಯಾನ ಸಂಸ್ಥೆಯ ವಿಮಾನಗಳ ವಿಳಂಬ, ರದ್ಧತಿ ಬಗ್ಗೆ ಕಿಡಿಕಾರಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದಿನದ ಕಾರ್ಯಾಚರಣೆ ಕುರಿತ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಇತ್ತೀಚಿಗೆ ಹಲವಾರು ವಿಸ್ತಾರಾ ಪೈಲಟ್‌ಗಳ ಲಭ್ಯತೆಯಿಲ್ಲದ ಹಿನ್ನೆಲೆಯಲ್ಲಿ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಕೇಂದ್ರದಿಂದ ಈ ಖಡಕ್ ಸೂಚನೆ ಬಂದಿದೆ. ಏಪ್ರಿಲ್ 2 ರಂದು ಹೇಳಿಕೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ವಿಸ್ತಾರಾ ವಿಮಾನಯಾನದ ವಿವಿಧ ಸೇವಾ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ರದ್ದಾದ ಮತ್ತು ವಿಳಂಬವಾಗುವ ವಿಮಾನಗಳ ದೈನಂದಿನ ಮಾಹಿತಿ ಮತ್ತು ವಿವರಗಳನ್ನು ಸಲ್ಲಿಸಲು ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದೆ.

ಬೋರ್ಡಿಂಗ್ ಮಾಡಲು ಹಿಂದೇಟು, ಮುಂಗಡ ಮಾಹಿತಿ, ಮರುಪಾವತಿಯ ಆಯ್ಕೆ, ವಿಮಾನಗಳ ರದ್ದತಿ ಮತ್ತು ವಿಮಾನಗಳ ವಿಳಂಬದ ಕಾರಣದಿಂದ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಒದಗಿಸುವ ಸೌಲಭ್ಯಗಳ ಕುರಿತು ಸಿಎಆರ್ ವಿಭಾಗ-3, ಸರಣಿ M, ಭಾಗ-IV ರ ಸಂಬಂಧಿತ ನಿಬಂಧನೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗೆ ತಿಳಿಸಿದೆ.
ಸೋಮವಾರ ಸಿಬ್ಬಂದಿ ಲಭ್ಯವಿಲ್ಲದ ಕಾರಣ ವಿಸ್ತಾರ ವಿಮಾನಯಾನ ಸಂಸ್ಥೆಯು ಸುಮಾರು 50 ವಿಮಾನಗಳನ್ನು ರದ್ದುಗೊಳಿಸಿತು. ಅನೇಕ ವಿಮಾನಗಳು ವಿಳಂಬಗೊಂಡವು. ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿರುವ ವಿಸ್ತಾರಾ, ಸಿಬ್ಬಂದಿ ಸಮಸ್ಯೆಗಳ ನಡುವೆ ತಾತ್ಕಾಲಿಕವಾಗಿ ವಿಮಾನಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.
ವಿಸ್ತಾರಾ ವಿಮಾನ ರದ್ದತಿ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ. ವಿಮಾನ ಕಾರ್ಯಾಚರಣೆಗಳನ್ನು ಏರ್‌ಲೈನ್ಸ್ ಸ್ವತಃ ನಿರ್ವಹಿಸುತ್ತದೆ. ವಿಮಾನಯಾನ ರದ್ದತಿ ಅಥವಾ ವಿಳಂಬದ ಸಂದರ್ಭದಲ್ಲಿ ಪ್ರಯಾಣಿಕರ ಸೌಕರ್ಯ ಗಮನಿಸಲು ವಿಮಾನಯಾನ ಸಂಸ್ಥೆಗಳು ಡಿಜಿಸಿಎ ಮಾನದಂಡಗಳನ್ನು ಅನುಸರಿಸಬೇಕು" ಎಂದು ಸಚಿವಾಲಯ ಮಂಗಳವಾರ ಟ್ವೀಟ್‌ನಲ್ಲಿ ತಿಳಿಸಿದೆ.


Click it and Unblock the Notifications