ಕರ್ನಾಟಕದ ಗುತ್ತಿಗೆದಾರರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಡೆಯಿಂದ ದೊಡ್ಡ ಮಟ್ಟದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಇರುವ, 32,000 ಕೋಟಿ ರೂಪಾಯಿಯನ್ನು ಶೀಘ್ರದಲ್ಲೇ ಪಾವತಿ ಮಾಡುತ್ತೇವೆಂದು ತಿಳಿಸಿದ್ದಾರೆ. ಮೇ 13ರಂದು ರಾಜ್ಯದ ನಾಗರಿಕ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು, ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾದಾಗ ಈ ಬಗ್ಗೆ ಸ್ಪಷ್ಟನೆ ಭರವಸೆ ನೀಡಿದ್ದಾರೆ.

ಇನ್ನು ಈ ಸಭೆಯು ಕೇವಲ ಹಣಕಾಸು ವಿಷಯಕ್ಕೆ ಸೀಮಿತವಾಗಿರಲಿಲ್ಲ. ಇದರಲ್ಲಿ ಪ್ರಮುಖ ರಾಜಕೀಯ ವಿಚಾರಗಳು ಕೂಡ ಸದ್ದು ಮಾಡಿವೆ. ಕಳೆದ ತಿಂಗಳು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಬಿಜೆಪಿ ಸರ್ಕಾರದ ಕಾಲದಲ್ಲಿ 40% ಇದ್ದ 'ಕಮಿಷನ್ ಸೌಲಭ್ಯ' ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 50%ಕ್ಕೆ ಏರಿದೆಯೆಂದು ಆರೋಪ ಮಾಡಿತ್ತು. ಈ ಗಂಭೀರ ಆರೋಪಗಳು ಡಿಕೆಶಿ ಸೇರಿದಂತೆ ಮೂವರು ಸಚಿವರ ಮೇಲೆ ನೇರವಾಗಿ ಹೇರಲಾಗಿತ್ತು.
ಮೂರು ಪ್ರಮುಖ ಸಚಿವರ ಹೆಸರು:
KSCA ಗುತ್ತಿಗೆದಾರರ ಸಂಘವು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಪತ್ರ ಬರೆದಿರುವುದಾಗಿ ಸಂಘದ ಪ್ರತಿನಿಧಿಗಳು ಹೇಳಿದ್ದಾರೆ.
ಇನ್ನು ಕಳೆದ ತಿಂಗಳು ಕೂಡ ಗುತ್ತಿಗೆದಾರರು ಸಣ್ಣ ನೀರಾವರಿ ಸಚಿವ ಬೋಸರಾಜು ಅವರನ್ನು ಭೇಟಿ ಮಾಡಿದ್ದರು. ಆಗ ಕೂಡ ಗುತ್ತಿಗೆದಾರರಿಗೆ ಇರುವ ಬಾಕಿ ಬಿಲ್‌ಗಳನ್ನು ಶೀಘ್ರವಾಗಿ ಪಾವತಿಸಲಾಗುವುದು ಎಂದು, ಸಚಿವರು ಭರವಸೆ ನೀಡಿದ್ದರು.
ಎಲ್ಲ ಬಾಕಿಗಳಿಗೂ ಶೀಘ್ರ ಪರಿಹಾರ:
ಇನ್ನು ನಿನ್ನೆ ನಡೆದ ಸಭೆಯಲ್ಲಿ ಕೂಡ, ಬಾಕಿ ಇರುವ ಎಲ್ಲಾ ಬಿಲ್‌ಗಳನ್ನು ಶೀಘ್ರವಾಗಿ ಪಾವತಿಸಲಾಗುವುದು ಎಂದಿದ್ದಾರೆ. ಇದೇ ವಿಚಾರವಾಗಿ, ಗುತ್ತಿಗೆದಾರರ ನಿಯೋಗದ ನೇತೃತ್ವ ವಹಿಸಿದ್ದ, KSCA ಅಧ್ಯಕ್ಷ ಆರ್. ಮಂಜುನಾಥ್ ತಿಳಿಸಿದ್ದಾರೆ. ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ನಮ್ಮ ಎಲ್ಲಾ ಬಾಕಿ ಬಿಲ್‌ಗಳನ್ನು ಪಾವತಿಸಲಾಗುವುದು ಎಂದಿದ್ದಾರೆ. ಆದರೆ ನಿರ್ದಿಷ್ಟವಾಗಿ ಸದ್ಯಕ್ಕೆ ಸಮಯ ನಿಗದಿಪಡಿಸಿಲ್ಲ ಎಂದಿದ್ದಾರೆ. ಅಲ್ಲದೇ ಅವರು ಹೇಳಿದಂತೆ ಶೀಘ್ರದಲ್ಲೇ ಬಿಲ್ ಪಾವತಿಸುವ ನಂಬಿಕೆ ಕೂಡ ಇದೆ. ಸರ್ಕಾರ ಹೊಸ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲಿದೆ ಎಂಬ ದೃಢತೆ ಕೂಡ ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು ಎಂದರು.
ಬಿಜೆಪಿ ಅವಧಿಯ ಆಡಳಿತದ ವಿರುದ್ಧ ಟೀಕೆ:
ಇನ್ನು ಈ ಬಿಲ್‌ಗಳ ಬಾಕಿ ಉಳಿಸಿಕೊಳ್ಳುವ ಪ್ರವೃತ್ತಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಸಭೆಯ ವಿವರಗಳನ್ನು ಬಹಿರಂಗಪಡಿಸುವ ನಿರ್ಧಾರವಿದ್ದರೂ, ಅಧಿಕೃತ ಮೂಲಗಳ ಪ್ರಕಾರ ಉಪಮುಖ್ಯಮಂತ್ರಿ ಈ ಗೊಂದಲಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಹೇಳಿದರು. ಅಂದರೆ 2021 ರಿಂದ 2023 ರವರೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅನೇಕ ಯೋಜನೆಗಳಿಗೆ ₹1 ಲಕ್ಷ ಕೋಟಿ ಮೌಲ್ಯದ ಒಪ್ಪಂದಗಳನ್ನು ಬಜೆಟ್ ಮೀಸಲಾತಿಯ ನಿರ್ಧಾರವಿಲ್ಲದೇ ನೀಡಿದೆ ಎಂದು ಅವರು ಆರೋಪಿಸಿದರು.
ಬಿಜೆಪಿಯು ಜಲಸಂಪನ್ಮೂಲ ಇಲಾಖೆಯಲ್ಲೇ ₹1 ಲಕ್ಷ ಕೋಟಿ ಮೌಲ್ಯದ ಬಿಲ್‌ಗಳನ್ನು, ಪಾವತಿಸದೇ ಹಾಗೆ ಬಿಟ್ಟಿದೆ ಎಂದರು. ಅಲ್ಲದೇ ಈ ಪೈಕಿ ನಾವು ಈಗಿನವರಿಗೆ ಕೇವಲ, ಕೇವಲ 10% ರಿಂದ 15% ವರೆಗೆ ಮಾತ್ರ ಪಾವತಿಸಬಲ್ಲೆವು ಎಂದು ಕೂಡ ಸ್ಪಷ್ಟಪಡಿಸಿದ್ದಾರೆ. ಕೆಲ ಗುತ್ತಿಗೆದಾರರು ತಮ್ಮ ಕ್ಷೇತ್ರದ ಶಾಸಕರ ಮೂಲಕ ಮಧ್ಯಪ್ರವೇಶ ಮಾಡುವಂತೆ ವಿನಂತಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಬಾಕಿ ಬಿಲ್ ಪಾವತಿ ಸಮಸ್ಯೆ ರಾಜ್ಯದ ಅನೇಕ ನಾಗರಿಕ ಗುತ್ತಿಗೆದಾರರಿಗೆ ತೀವ್ರ ತೊಂದರೆ ನೀಡುತ್ತಿದೆ. DK ಶಿವಕುಮಾರ್ ಅವರಿಂದ ದೊರೆತ ಭರವಸೆ ಈ ಸಂಬಂಧ ಒಂದು ಮಟ್ಟಿಗೆ ಆಶ್ವಾಸನ ನೀಡಿದರೆ, ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆಯೂ ಇದು ಗಂಭೀರ ರಾಜಕೀಯ ಬದಲಾವಣೆಯ ಸೂಚನೆ ನೀಡುತ್ತಿದೆ. ಭ್ರಷ್ಟಾಚಾರದ ಆರೋಪಗಳು ಮತ್ತಷ್ಟು ಎತ್ತರಕ್ಕೆ ಏರುವ ಮುನ್ನವೇ, ಸರ್ಕಾರ ಸ್ಪಷ್ಟತೆಯಿಂದ ಹಾಗೂ ಜವಾಬ್ದಾರಿಯಿಂದ ನಡೆದು ಈ ಬಾಕಿ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವ ನಿರ್ಧಾರಕ್ಕೆ ಬರಬೇಕಾಗಿದೆ.


Click it and Unblock the Notifications