ನವದೆಹಲಿ, ನ. 1: ಇಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಬಹಳಷ್ಟು ಸಂಚಲನ ಸೃಷ್ಟಿಯಾಗುವ ನಿರೀಕ್ಷೆ ಇದೆ. ಚೀನಾದ ವೀಚ್ಯಾಟ್ ಮಾದರಿಯಲ್ಲಿ ಟ್ವಿಟ್ಟರ್ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸುವ ಗುರಿಯಲ್ಲಿದ್ದಂತಿರುವ ಇಲಾನ್ ಮಸ್ಕ್ ಆದಾಯ ಗಳಿಕೆಯತ್ತಲೂ ಗಮನ ಕೊಡುತ್ತಿದ್ದಾರೆ. ಲಾಭಕ್ಕಾಗಿ ಟ್ವಿಟ್ಟರ್ ಖರೀದಿಸಿಲ್ಲ ಎಂದು ಅವರು ಹೇಳಿದ್ದಾರಾದರೂ ವಿವಿಧ ಸ್ತರಗಳಲ್ಲಿ ಸಬ್‌ಸ್ಕ್ರಿಪ್ಷನ್‌ಗಳಿಗೆ ಶಲ್ಕ ವಿಧಿಸುವ ಸಾಧ್ಯತೆ ಇದೆ. ಇಲಾನ್ ಮಸ್ಕ್ ತಮ್ಮ ಟ್ವೀಟ್‌ವೊಂದರಲ್ಲಿ ನಡೆಸಿರುವ ಸಂವಾದವನ್ನು ಗಮನಿಸಿದಲ್ಲಿ ಟ್ವಿಟ್ಟರ್‌ನ ವೆರಿಫೈಡ್ ಖಾತೆಗಳಿಗೆ, ಅಂದರೆ ಬ್ಲೂಟಿಕ್ ಪಡೆದ ಖಾತೆಗಳಿಗೆ ಮಾಸಿಕ 8 ಡಾಲರ್ ಶುಲ್ಕ ವಿಧಿಸಬಹುದು.
ಮೊನ್ನೆಯಷ್ಟೇ ಟ್ವಿಟ್ಟರ್‌ನ ಬ್ಲೂಟಿಕ್ ಸಬ್‌ಸ್ಕ್ರಿಪ್ಷನ್‌ಗೆ ಮಾಸಿಕವಾಗಿ ಸುಮಾರು 20 ಡಾಲರ್ ಹಣ ನೀಡಬೇಕಾಗಬಹುದು ಎಂಬಂತಹ ಸುದ್ದಿ ಹರಿದಾಡಿತ್ತು. ಅಂದರೆ ಟ್ವಿಟ್ಟರ್‌ನಲ್ಲಿ ವೆರಿಫೈಡ್ ಖಾತೆ ಹೊಂದಲು ತಿಂಗಳಿಗೆ 1600 ರೂ ಕೊಡಬೇಕಾಗುತ್ತದೆ. ಈ ಬಗ್ಗೆ ಬಹಳ ಟ್ವೀಟಿಗರು ಬೆಕ್ಕಸ ಬೆರಗಾಗಿದ್ದಾರೆ. ಸ್ವೀಫನ್ ಕಿಂಗ್ ಎನ್ನುವ ಸೆಲಬ್ರಿಟಿ ತಾನು 20 ಡಾಲರ್ ಕೊಡುವುದಿಲ್ಲ, ಬೇಕಾದರೆ ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಿಂದಲೇ ಹೊರಹೋಗುತ್ತೇನೆ ಎಂದಿದ್ದರು.
ಸ್ಟೀಫನ್ ಕಿಂಗ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಇಲಾನ್ ಮಸ್ಕ್, "ವೆಚ್ಚ ಭರಿಸುವುದು ಅನಿವಾರ್ಯ. ಜಾಹೀರಾತುಗಳನ್ನಷ್ಟೇ ನೆಚ್ಚಿಕೊಳ್ಳಲು ಆಗುವುದಿಲ್ಲ. 8 ಡಾಲರ್ ಬೆಲೆ ಹೇಗಿದ್ದೀತು?" ಎಂದು ಪ್ರಶ್ನೆ ಹಾಕಿದ್ದಾರೆ. ಎಂಟು ಡಾಲರ್ ಎಂದರೆ ಸುಮಾರು 660 ರೂಪಾಯಿ ಆಗುತ್ತದೆ. 8 ಡಾಲರ್ ಆಸುಪಾಸಿನ ದರವನ್ನೇ ಮಸ್ಕ್ ಅಂತಿಮಗೊಳಿಸಿದರೆ ಆಶ್ಚರ್ಯ ಇಲ್ಲ.
ಟ್ವಿಟ್ಟರ್ ಬ್ಲೂಟಿಕ್‌ಗೆ ಹೇಗಿದೆ ಪ್ರಕ್ರಿಯೆ?
ಸದ್ಯದಲ್ಲಿ ಟ್ವಿಟ್ಟರ್‌ನಲ್ಲಿ ಯಾರು ಬೇಕಾದರೂ ಬ್ಲೂಟಿಕ್ ಪಡೆಯಬಹುದು. ಟ್ವಿಟ್ಟರ್‌ನ ಕೆಲ ಷರತ್ತುಗಳು, ನಿಯಮಗಳಿಗೆ ತಾಳೆಯಾಗಿರುವ ಖಾತೆಗಳಿಗೆ ವೆರಿಫಿಕೇಶನ್ ಸಿಗುತ್ತದೆ. ಟ್ವಿಟ್ಟರ್ ಖಾತೆ ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆ ಅಧಿಕೃತವಾಗಿರಬೇಕು, ಸಕ್ರಿಯವಾಗಿರಬೇಕು. ಸ್ಪಾಮ್ ಖಾತೆಗಳಿಗೆ ಬ್ಲೂಟಿಕ್ ಸಿಗುವುದಿಲ್ಲ. ವ್ಯಕ್ತಿ ನೈಜವಾಗಿಲ್ಲದೇ ಇದ್ದರೆ, ಅಂದರೆ ಪರೋಡಿ ಖಾತೆಗಳು, ನಕಲಿ ಖಾತೆಗಳಾಗಿದ್ದರೆ ಬ್ಲೂಟಿಕ್ ಸಿಗುವುದಿಲ್ಲ. ಪ್ರಚೋದನಕಾರಿ, ಧ್ವೇಷಭರಿತ ವಿಷಯಗಳನ್ನು ಹೆಚ್ಚು ಟ್ವೀಟ್ ಮಾಡುವ ಅಕೌಂಟ್‌ಗಳಿಗೂ ವೆರಿಫಿಕೇಶನ್ ಸಿಗುವುದಿಲ್ಲ.
ನೈಜವಾದ ಟ್ವಿಟ್ಟರ್ ಬಳಕೆದಾರರು ತಮ್ಮ ಖಾತೆಗೆ ಬ್ಲೂಟಿಕ್ ಪಡೆಬೇಕೆಂದರೆ ಸೆಟಿಂಗ್ಸ್‌ಗೆ ಹೋಗಿ ಯುವರ್ ಅಕೌಂಟ್ ಹಾಗೂ ಆ ಮೂಲಕ ಅಕೌಂಟ್ ಇನ್‌ಫಾರ್ಮೇಶನ್ ಅನ್ನು ಆಯ್ದುಕೊಳ್ಳಬೇಕು. ಪಾಸ್‌ವರ್ಡ್ ಕೇಳಲಾಗುತ್ತೆ. ಅದನ್ನು ನಮೂದಿಸಬೇಕು. ಬಳಿಕ 'ವೆರಿಫೈಡ್' ಅಡಿಯಲ್ಲಿ 'ರಿಕ್ವೆಸ್ಟ್ ವೆರಿಫಿಕೇಶನ್' ಆಯ್ದುಕೊಂಡು, 'ಸ್ಟಾರ್ಟ್ ರಿಕ್ವೆಸ್ಟ್' ಕ್ಲಿಕ್ ಮಾಡಿದರೆ ಬ್ಲೂಟಿಕ್‌ಗೆ ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ.
ನಂತರ ಟ್ವಿಟ್ಟರ್ ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ಸೂಕ್ತವೆನಿಸಿದರೆ ನಿಮ್ಮ ಖಾತೆಗೆ ಬ್ಲೂಟಿಕ್ ದಯಪಾಲಿಸುತ್ತದೆ. ಇದಕ್ಕೆ ಯಾವ ಹಣವನ್ನೂ ಕೊಡುವ ಅಗತ್ಯ ಇರುವುದಿಲ್ಲ. ಮಾಸಿಕ ಸಬ್‌ಸ್ಕ್ರಿಪ್ಚನ್ ಇರಲಿ, ಒಮ್ಮೆ ಬ್ಲೂಟಿಕ್ ಪಡೆಯಲೂ ಹಣವನ್ನು ಟ್ವಿಟ್ಟರ್ ಕೇಳುವುದಿಲ್ಲ.
ಮಸ್ಕ್ ಮಾಡಹೊರಟಿರುವುದು ಏನು?
ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಬ್ಲೂಟಿಕ್ ಅನ್ನು ಮಾರಾಟಕ್ಕಿಡುವ ಆಲೋಚನೆಯಲ್ಲಿದ್ದಾರೆ. ಅವರ ಪ್ಲಾನ್ ಜಾರಿಗೆ ಬಂದರೆ ಟ್ವಿಟ್ಟರ್‌ನ ವೆರಿಫೈಡ್ ಖಾತೆಗೆ ಸಬ್‌ಸ್ಕ್ರೈಬ್ ಆಗಬೇಕಾಗುತ್ತದೆ. ಮಾಸಿಕ ಚಂದಾದಾರಿಕೆ ಪಡೆಯುವ ಖಾತೆಗಳಿಗೆ ಮಾತ್ರ ಬ್ಲೂಟಿಕ್ ಸಿಗುತ್ತದೆ. ಮೊದಲೇ ಬ್ಲೂಟಿಕ್ ಪಡೆದವರೂ ಕೂಡ ಸಬ್‌ಸ್ಕ್ರಿಪ್ಷನ್ ಹಣ ನೀಡಬೇಕಾಗುತ್ತದೆ. ಅದಕ್ಕಾಗಿ 90 ದಿನಗಳವರೆಗೂ ಕಾಲಾವಕಾಶ ಕೊಡಲಾಗುತ್ತದೆ. ಅಷ್ಟರೊಳಗೆ ಹಣ ನೀಡದೇ ಹೋದರೆ ಆ ಖಾತೆಯಿಂದ ಬ್ಲೂಟಿಕ್ ತೆಗೆದುಹಾಕಲಾಗುತ್ತದೆ ಎಂದು ಇತ್ತೀಚೆಗೆ ಪ್ರಕಟವಾದ ವರದಿಯಲ್ಲಿ ಹೇಳಲಾಗಿತ್ತು. ಇದು ನಿಜವಾಗುತ್ತಾ ಎಂಬುದನ್ನು ಕಾದು ನೋಡಬೇಕಷ್ಟೇ.
ಖರೀದಿ ಆಟ
ನಾಸಾಗೆ ರಾಕೆಟ್ ಬಾಡಿಗೆ ಕೊಡುವ ಹಾಗೂ ಮಂಗಳಗ್ರಹದಲ್ಲಿ ಮಾನವರ ವಸಾಹತು ನಿರ್ಮಿಸುವ ಮಹದ್ ಯೋಜನೆಗಳಲ್ಲಿ ತೊಡಗಿರುವ ಇಲಾನ್ ಮಸ್ಕ್ ಮೊನ್ನೆಮೊನ್ನೆ ಟ್ವಿಟ್ಟರ್ ಅನ್ನು ಖರೀದಿ ಮಾಡಿ ಅಚ್ಚರಿ ಹುಟ್ಟಿಸಿದ್ದರು. ಸುಮಾರು 44 ಬಿಲಿಯನ್ ಡಾಲರ್ (3.63 ಲಕ್ಷ ಕೋಟಿ ರೂಪಾಯಿ) ಹಣಕ್ಕೆ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಖರೀದಿ ಮಾಡುತ್ತಲೇ ಸಿಇಒ ಪರಾಗ್ ಅಗರ್ವಾಲ್, ಕಾನೂನು ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ ಮೊದಲಾದ ಟಾಪ್ ಎಕ್ಸಿಕ್ಯೂಟಿವ್‌ಗಳನ್ನು ಕೆಲಸದಿಂದ ವಜಾ ಮಾಡಿದ್ದಾರೆ. ನಂತರ, ಇಡೀ ಟ್ವಿಟ್ಟರ್ ಆಡಳಿತ ಮಂಡಳಿಯನ್ನೇ ವಜಾಗೊಳಿಸಿದ ಅವರು ಸದ್ಯ ಏಕೈಕ ಆಡಳಿತ ಮಂಡಳಿ ಸದಸ್ಯ, ಮುಖ್ಯಸ್ಥರಾಗಿದ್ದಾರೆ.
ಟ್ವಿಟ್ಟರ್‌ನಲ್ಲಿ ಶೇ. 70ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿ ಕಂಪನಿಯ ವೆಚ್ಚವನ್ನು ತಗ್ಗಿಸುವ ಆಲೋಚನೆಯಲ್ಲಿ ಮಸ್ಕ್ ಇದ್ದಾರೆ. ಯಾರನ್ನು ಲೇ ಆಫ್ ಮಾಡಬಹುದು ಎಂದು ಪಟ್ಟಿ ಮಾಡುವಂತೆ ಮ್ಯಾನೇಜರ್‌ವೊಬ್ಬರಿಗೆ ಮಸ್ಕ್ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಾಗಿ, ಟ್ವಿಟ್ಟರ್‌ನ 7 ಸಾವಿರ ಉದ್ಯೋಗಿಗಳಲ್ಲಿ ಈಗ ನಡುಕ ಶುರುವಾಗಿದೆ.


Click it and Unblock the Notifications