ಅದೆಷ್ಟೋ ಯುವಕರಿಗೆ ಜೀವನ ಕೊಟ್ಟ ನಗರ ಎಂದರೆ ಅದು ಸಿಲಿಕಾನ್ ಸಿಟಿ ಬೆಂಗಳೂರು (Bengaluru). ಉದ್ಯೋಗ ಹುಡುಕಿಕೊಂಡು ಬಂದವರಿಗೆ, ವ್ಯಾಪಾರ ಆರಂಭಿಸುವವರಿಗೆ, ಮನೆ ಹುಡುಕಿಕೊಂಡು ಬಂದವರಿಗೆ ಆಶ್ರಯ ತಾಣವಾಗಿ ಇಂದು ಬೆಂಗಳೂರು ಗುರುತಿಸಿಕೊಂಡಿದೆ. ಕೆಂಪೇಗೌಡ ಏರ್‌ಪೋರ್ಟ್‌ನಿಂದ ಹಿಡಿದು, ನಮ್ಮ ಮೆಟ್ರೋ (Metro) ಸೇವೆ ತನಕ ಹಲವಾರು ಅಭಿವೃದ್ಧಿಗಳನ್ನು ಮಾಡುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಇದೇ ಅಭಿವದ್ಧಿಯಿಂದ ಇದೀಗ ಬೆಂಗಳೂರಿಗೆ ಹೊಸ ಬಿರುದು ಸಿಕ್ಕಿದೆ.

ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿ ಇದೀಗ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಕೂಡಾ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗಿದ್ರೆ ಬೆಂಗಳೂರಿಗೆ ಎಷ್ಟನೇ ಸ್ಥಾನ? ಅತ್ಯುತ್ತಮ ನಗರ ಎಂದು ಬೆಂಗಳೂರು ಏಕೆ ಸ್ಥಾನ ಪಡೆದಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಇಪ್ಪೋಸ್ ಜೊತೆಗಿನ ಸಹಭಾಗಿತ್ವದಲ್ಲಿ ರೆಸೋನೆನ್ಸ್ ಕನ್ಸಲ್ಟೆನ್ಸಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದ ಅತ್ಯುತ್ತಮ ನಗರಗಳ ಪೈಕಿ ಬೆಂಗಳೂರು ಕೂಡಾ ಒಂದು. ರೆಸೋನೆನ್ಸ್ ಕನ್ಸಲ್ಟೆನ್ಸಿ ಹಲವಾರು ರಿಸರ್ಚ್‌ಗಳನ್ನು ಮಾಡಿ ಈ ವರದಿಯನ್ನು ಬಿಡುಗಡೆ ಮಾಡಿದೆ.
ಸತತ 11 ವರ್ಷ ಲಂಡನ್‌ಗೆ ಅಗ್ರಸ್ಥಾನ!
ರೆಸೋನೆನ್ಸ್ ಕನ್ಸಲ್ಟೆನ್ಸಿ ಪ್ರಕಾರ, ಸತತ 11 ನೇ ವರ್ಷವೂ ವಿಶ್ವದ ಅತ್ಯುತ್ತಮ ನಗರವೆಂದು ಗುರುತಿಸಿಕೊಂಡಿದೆ. ಇನ್ನು ಎರಡನೇ ಸ್ಥಾಣದಲ್ಲಿ ಅಮೆರಿಕಾದ ನ್ಯೂಯಾರ್ಕ್ ಪಡೆದುಕೊಂಡಿದೆ. ಪ್ಯಾರಿಸ್ ಮೂರನೇ ಸ್ಥಾನದಲ್ಲಿದ್ದರೆ, ಟೋಕಿಯೋ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಮ್ಯಾಡ್ರಿಡ್ ಐದನೇ ಸ್ಥಾನ ಮತ್ತು ಸಿಂಗಾಪುರ ಆರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ರೋಮ್, ಪಶ್ಚಿಮ ಏಷ್ಯಾದ ನಗರಗಳಲ್ಲಿ ಒಂದಾದ ದುಬೈಗೆ ಎಂಟನೇ ಸ್ಥಾನ, ಬರ್ಲಿನ್ ಒಂಬತ್ತನೇ ಸ್ಥಾನ ಮತ್ತು ಬಾರ್ಸಿಲೋನಾ ಹತ್ತನೇ ಸ್ಥಾನ ಪಡೆಯುವ ಮೂಲಕ ಟಾಪ್ 10 ಅತ್ಯುತ್ತಮ ನಗರಗಳೆಂದು ಸ್ಥಾನ ಪಡೆದಿದೆ.
ಏಷ್ಯಾದ ನಗರಗಳು ಟಾಪ್ 10ರ ಪಟ್ಟಿಯಲ್ಲಿ!
ಏಷ್ಯಾದ ನಗರಗಳಾದ ಟೋಕಿಯೋ ಮತ್ತು ಸಿಂಗಾಪುರ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದೆ.
ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ "ಬೆಂಗಳೂರು"!
ದೇಶದ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿರುವ ಬೆಂಗಳೂರನ್ನು "ಭಾರತದ ಸಿಲಿಕಾನ್ ಸಿಟಿ" ಎಂದೇ ಕರೆಯಲಾಗುತ್ತದೆ. ಪ್ರಸ್ತುತ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರು 29ನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರಿನ ತಂತ್ರಜ್ಞಾನ ಪ್ರಗತಿ, ಹಸಿರು, ವಿಜ್ಞಾನಕ್ಕೆ ಪ್ರೋತ್ಸಾಹ, ಆಹಾರ ಪದ್ದತಿಗಳು, ಪ್ರವಾಸಿ ಸ್ಥಳಗಳು, ಸುರಕ್ಷತೆಯನ್ನೆಲ್ಲಾ ನೋಡಿಕೊಂಡು ಈ ಸ್ಥಾನಗಳನ್ನು ನೀಡಲಾಗಿದೆ.
ಪ್ರಪಂಚದಾದ್ಯಂತ 270ಕ್ಕೂ ಅಧಿಕ ನಗರಗಳನ್ನು ಅಧ್ಯಯನ ಮಾಡಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಯಾವ ನಗರಗಳು ಒಟ್ಟಾರೆಯಾಗಿ ಉತ್ತಮ ಅನುಭವ ನೀಡುತ್ತದೆ ಎಂದು ಪರಿಗಣಿಸಿ ಸ್ಥಾನ ನೀಡಲಾಗಿದೆ. ಶಿಕ್ಷಣ, ಸಂಸ್ಕೃತಿ, ಸಂಪರ್ಕ, ರಾತ್ರಿ ಜೀವನ, ಸುರಕ್ಷತೆ, ಹೀಗೆ ಹಲವಾರು ವಿಷಯಗಳನ್ನು ಅಧ್ಯಯನ ಮಾಡಿ ಸ್ಥಾನ ನೀಡಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಬೆಂಗಳೂರು ಈ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ಕರ್ನಾಟಕ ಮಾತ್ರವಲ್ಲದೇ, ಇಡೀ ದೇಶಕ್ಕೆ ಹೆಮ್ಮೆಯ ವಿಷಯ.


Click it and Unblock the Notifications