ಕರ್ನಾಟಕದಲ್ಲಿ (Karnataka) ಹಲವಾರು ಜನಪ್ರಿಯ ದೇವಾಲಯಗಳಿವೆ. ಆದರೆ ಕೆಲವು ದೇವಾಲಯಗಳಿಗಂತೂ ದಿನಂಪ್ರತಿ ಲಕ್ಷಗಟ್ಟಲೆ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಲಕ್ಷಾಂತರ, ಕೋಟ್ಯಾಂತರ ದೇಣಿಗೆಗಳು ಕೂಡಾ ಬರುತ್ತದೆ. ಇದೀಗ ಮುಜರಾಯಿ ಇಲಾಖೆ ಕರ್ನಾಟಕ ರಾಜ್ಯದ ಅತ್ಯಂತ ದೇವಸ್ಥಾನಗಳ ಪಟ್ಟಿ ಬಿಡುಗಡೆ ಮಾಡಿದೆ. ಆ ಪ್ರಕಾರ ರಾಜ್ಯದ 'A' ಗ್ರೇಡ್ ದೇವಸ್ಥಾನಗಳೆಂದಯೆ ಕರಾವಳಿ ಭಾಗದ ದೇವಾಲಯಗಳು ಗುರುತಿಸಿಕೊಂಡಿದೆ. ಅಲ್ಲದೇ ಅತ್ಯಂತ ಶ್ರೀಮಂತ ದೇವಾಲಯವೆಂದು (Richest Temples) ಕರಾವಳಿಯ ಭಾಗದ ದೇವಸ್ಥಾನವೊಂದು ಗುರುತಿಸಿಕೊಂಡಿದೆ.

ಸಾಮಾನ್ಯವಾಗಿ ಯಾವುದೇ ಹಬ್ಬಗಳು, ವರ್ಷಾಂತ್ಯದಲ್ಲಿ ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ದೈವಾರಾಧನ, ದೇವತಾರಾಧನೆ, ನಾಗಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಕರಾವಳಿಗರು, ಮೊದಲಿನಿಂದಲೂ ಆಧ್ಯಾತ್ಮದ ಬಗ್ಗೆ ಭಾರೀ ಒಲವು ಹೊಂದಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಹಲವಾರು ಕಾರಣಿಕ ಮೆರೆದ ದೈವಸ್ಥಾನಗಳು, ದೇವಸ್ಥಾನಗಳಿವೆ. ಅದೇ ಕಾರಣದಿಂದ ದೇಶ ವಿದೇಶಗಳಿಂದ, ರಾಜ್ಯ, ಹೊರ ರಾಜ್ಯಗಳಿಂದ ಅದೆಷ್ಟೋ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಆದಾಯದಲ್ಲಿ ಪ್ರಗತಿ!
ಇತ್ತೀಚೆಗೆ ಕರಾವಳಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಇದೇ ವೇಳೆ ದೇವಾಲಯಗಳಿಗೂ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಅದೇ ಕಾರಣದಿಂದ ಸದ್ಯ ದೇವಾಲಯಗಳ ಆದಾಯದಲ್ಲಿ ಏರಿಕಯಾಗಿದ್ದು, ವರದಿ ಪ್ರಕಾರ, ವರ್ಷಾಂತ್ಯದ ಸಂದರ್ಭದಲ್ಲಿ ಕರಾವಳಿಯ ದೇವಸ್ಥಾನಗಳ ಆದಾಯದಲ್ಲಿಯೂ ಶೇ.5% ರಿಂದ 10% ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಕರ್ನಾಟಕದ ಶ್ರೀಮಂತ ದೇವಾಲಯ ಯಾವುದು?
ಮುಜರಾಯಿ ಇಲಾಖೆಯ ವರದಿ ಪ್ರಕಾರ, ಕರಾವಳಿ ಜಿಲ್ಲೆಗಳ ಮೂರು ದೇವಸ್ಥಾನಗಳು ಟಾಪ್ 3 ಪಟ್ಟಿಯಲ್ಲಿ ಹೆಚ್ಚಿನ ಆದಾಯ ತಂದುಕೊಟ್ಟಿದೆ. ಅದರಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮೂರನೇ ಸ್ಥಾನದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳು ಇದೆ.
ಆದಾಯ ಎಷ್ಟು?
ವರದಿ ಪ್ರಕಾರ, 2023 ಮತ್ತು 2024 ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು 146.01 ಕೋಟಿ ಆದಾಯವನ್ನು ಗಳಿಸಿದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ 2024 ಮತ್ತು 2025ರಲ್ಲಿ ಈ ದೇವಾಲಯ 155.95 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದೆ.
ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು 2023 ಮತ್ತು 2024 ರಲ್ಲಿ 63.23 ಕೋಟಿ ಆದಾಯ ಸಂಗ್ರಹಿಸಿದರೆ, 2024 ಮತ್ತು 2025 ರಲ್ಲಿ 71.93 ಕೋಟಿ ಆದಾಯ ಗಳಿಸಿದೆ. ಇನ್ನು ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಆದಾಯವು 2024-25ನೇ ಸಾಲಿನಲ್ಲಿ 50.68 ಕೋಟಿ ಪಡೆದುಕೊಂಡಿದೆ.
ಇದೀಗ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಇದೆ. ಇದು 2024-25 ರಲ್ಲಿ 36.12 ಕೋಟಿ ಆದಾಯ ಪಡೆದಿದೆ.
ನಂಬರ್ ಒನ್ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ನಾಗದೋಷಕ್ಕೆ ಸಂಬಂಧಿಸಿದ ಪೂಜೆಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ಮುಖ್ಯವಾಗಿ ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರದಂತಹ ಪೂಜೆಯನ್ನು ಹೆಚ್ಚಾಗಿ ನೆರವೇರಿಸಲಾಗುತ್ತದೆ.


Click it and Unblock the Notifications