ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಆದರೆ ಈ ಹಿಂದೆ ಅಮೆರಿಕದ ಅನೇಕ ಅಧ್ಯಕ್ಷರು ಭಾರತಕ್ಕೆ ಬಂದಿದ್ದಾರೆ. ಹಾಗೆ ಬಂದವರೆಲ್ಲ ಉಳಿದುಕೊಂಡಿರುವುದು ದೆಹಲಿಯಲ್ಲಿ ಇರುವ ಐಟಿಸಿ ಮೌರ್ಯ ಹೋಟೆಲ್ ನಲ್ಲಿ ಎಂಬುದು ಬಹಳ ಮಂದಿಗೆ ನೆನಪಿರಲಿಕ್ಕಿಲ್ಲ.
ಐಟಿಸಿ ಮೌರ್ಯದ ವಿಲಾಸಿ ಪ್ರೆಸಿಡೆನ್ಷಿಯಲ್ ಸ್ವೀಟ್ ಗೆ 'ಚಾಣಕ್ಯ' ಎಂದು ಹೆಸರಿಡಲಾಗಿದೆ. ಖಾಸಗಿ ಹಜಾರ, ಉಪ್ಪರಿಗೆ, ಜಿಮ್, ಡೈನಿಂಗ್ ಏರಿಯಾ, ಖಾಸಗಿ ಪ್ರವೇಶ, ಅತ್ಯಂತ ವೇಗದ ಎಲಿವೇಟರ್, ಅತ್ಯುನ್ನತ ಭದ್ರತಾ ವ್ಯವಸ್ಥೆ, ಪ್ರತ್ಯೇಕ ಬಾಣಸಿಗ ಹೀಗೆ ನಾನಾ ವ್ಯವಸ್ಥೆಗಳಿವೆ.
ಈ ಹಿಂದೆ ಇಲ್ಲಿ ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮ, ಜಿಮ್ಮಿ ಕಾರ್ಟನ್ ಉಳಿದುಕೊಂಡಿದ್ದರು. ಕ್ಲಿಂಟನ್ ಹಾಗೂ ಒಬಾಮಗೆ ಅಂತಲೇ ವಿಶಿಷ್ಟ ಅಡುಗೆ ತಯಾರಿಸಿ, ಅವರದೇ ಹೆಸರಿನಿಂದ ಅದನ್ನು ಕರೆಯಲಾಗಿತ್ತು. ಈಗ ಟ್ರಂಪ್ ಪ್ಲಾಟರ್ ಸಿದ್ಧವಾಗುತ್ತಿದೆ.

ಇಲ್ಲಿನ ರೆಸ್ಟೋರೆಂಟ್ ನಲ್ಲಿ ಟೋನಿ ಬ್ಲೇರ್, ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಚಿತ್ರ ಕಲಾವಿದ ಎಂ.ಎಫ್.ಹುಸೇನ್ ಮತ್ತಿತರ ಸೆಲಿಬ್ರಿಟಿಗಳು ಆಹಾರ ಖಾದ್ಯಗಳ ರುಚಿ ಸವಿದಿದ್ದಾರೆ. ದಲೈ ಲಾಮಾ, ರೋಜರ್ ಫೆಡರರ್, ವ್ಲಾಡ್ಮಿರ್ ಪುಟಿನ್, ಅರ್ನಾಲ್ಡ್ ಸ್ಕ್ವಾಷ್ನೆಗರ್, ಟೈಗರ್ ವುಡ್ಸ್ ಈ ಹೋಟೆಲ್ ನ ಅತಿಥಿಗಳಾಗಿದ್ದಾರೆ.
ಫೆಬ್ರವರಿ 24ನೇ ತಾರೀಕು ಅಹ್ಮದಾಬಾದ್ ಗೆ ಬರುವ ಡೊನಾಲ್ಡ್ ಟ್ರಂಪ್, 36 ಗಂಟೆಗಿಂತ ಕಡಿಮೆ ಸಮಯ ಭಾರತ ಪ್ರವಾಸ ಮಾಡಲಿದ್ದಾರೆ. ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ, ಮಗಳು ಇವಾಂಕಾ ಮತ್ತು ಅವರ ಪತಿ ಪ್ರವಾಸ ಕೈಗೊಂಡಿದ್ದಾರೆ.
ಎನ್ ಎಸ್ ಜಿ ಕಮ್ಯಾಂಡೋಗಳು ಎರಡು ವಾರಕ್ಕೆ ಮುಂಚಿನಿಂದಲೇ ಭದ್ರತಾ ವ್ಯವಸ್ಥೆಗಳನ್ನು ನಿಗಾ ಮಾಡುತ್ತಿದ್ದಾರೆ. ಪ್ರತಿ ದಿನವೂ ಹೋಟೆಲ್ ನ ಎಲ್ಲ ಅಂತಸ್ತುಗಳ ವೀಕ್ಷಣೆ ಮಾಡಿದ್ದಾರೆ. ಟ್ರಂಪ್ ಇಲ್ಲಿಗೆ ಭೇಟಿ ನೀಡುವ ವೇಳೆ ಅತಿಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಇರುವುದಿಲ್ಲ. ಅಂದಹಾಗೆ ಈ ಫೈವ್ ಸ್ಟಾರ್ ಹೋಟೆಲ್ ನ 438 ಕೊಠಡಿಗಳನ್ನೂ ಟ್ರಂಪ್ ಸಲುವಾಗಿಯೇ ಬುಕ್ ಮಾಡಲಾಗಿದೆ.
ಅಂದ ಹಾಗೆ, ಐಟಿಸಿ ಚಾಣಕ್ಯ ಸ್ವೀಟ್ ನಲ್ಲಿ ಒಂದು ರಾತ್ರಿಗೆ ಅಂದಾಜು 8 ಲಕ್ಷ ರುಪಾಯಿ ದರ ವಿಧಿಸಲಾಗುತ್ತದೆ. ಈ ಸ್ವೀಟ್ 4600 ಚದರಡಿ ಇದೆ.


Click it and Unblock the Notifications