ಬೆಂಗಳೂರು, ಫೆ. 01: ಜಾಗತಿಕ ಮಟ್ಟದ ತೈಲ ನಿಕ್ಷೇಪ ಹೊರ ತೆಗೆಯುವ ಡ್ರಿಲ್ಮೆಕ್ ಎಸ್ಪಿಎ ಸಂಸ್ಥೆ ಭಾರತದಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಈ ಸಂಬಂಧ ತೆಲಂಗಾಣ ಸರ್ಕಾರದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫಾಸ್ಟ್ರಕ್ಷರ್ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಡ್ರಿಲ್ಮೆಕ್ ಎಸ್ಪಿಎ ಈ ಒಪ್ಪಂದದಿಂದಾಗಿ ತನ್ನೆಲ್ಲಾ ಜಾಗತಿಕ ಬಹುವಲಯ ಸಂಘಟಿತ ಕಾರ್ಯಾಚರಣೆಯನ್ನು ಭಾರತಕ್ಕೆ ವರ್ಗಾಯಿಸಲಿದೆ.
ಜಾಗತಿಕ ಮಟ್ಟದಲ್ಲಿ ಇಂಧನ ಕೊರೆಯುವಿಕೆಯಲ್ಲಿ ಮುಂಚೂಣಿಯಲ್ಲಿರುವ ಎಂಇಐಎಲ್- ಡ್ರಿಲ್ಮೆಕ್ ಸಂಸ್ಥೆಯು ಹೈದರಾಬಾದ್ ನಲ್ಲಿ ನಿರ್ಮಾಣ, ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಶ್ರೇಷ್ಠ ತರಬೇತಿ ನೀಡಲಿದ್ದು, ಇದಕ್ಕಾಗಿ 200 ಮಿಲಿಯನ್ ಡಾಲರ್ ಮೊತ್ತವನ್ನು ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.

ಡ್ರಿಲ್ಮೆಕ್ ತೆಲಂಗಾಣದಲ್ಲಿ ಆಯಿಲ್ರಿ ರಿಗ್ ನಿರ್ಮಾಣ ಮತ್ತು ಅದರ ಬಿಡಿ ಭಾಗಗಳ ತಯಾರಿಕಾ ಕೇಂದ್ರವನ್ನು ಆರಂಭಿಸುವ ಸಂಬಂಧ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜತೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದೆ.
ಕಡಲ ತೀರ ಮತ್ತು ಕಡಲಾಚೆಗಿನ ಇಂಧನ ನಿಕ್ಷೇಪ ಕೊರೆಯುವಿಕೆಯಲ್ಲಿ ಮತ್ತು ಅಂತಹ ಉತ್ಪನ್ನಗಳ ತಯಾರಿಕೆಯಲ್ಲಿ ಜಾಗತಿಕ ನಾಯಕ ಎನಿಸಿಕೊಂಡಿರುವ ಡ್ರಿಲ್ಮೆಕ್ ಮಾರಾಟ ಮತ್ತು ಮಾರಾಟದ ನಂತರದ ಸೇವೆಗೆ ವಿಶ್ವದಾದ್ಯಂತ ವಿಶ್ವಾಸಾರ್ಹ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಡ್ರಿಲ್ಮೆಕ್ ಸಂಸ್ಥೆಯು ಜಾಗತಿಕವಾಗಿ 600 ಡ್ರಿಲ್ ರಿಗ್ಗಳನ್ನು ನಿರ್ಮಿಸಿದ್ದು, ಇಂಧನ ನಿಕ್ಷೇಪ ಕೊರೆಯುವಿಕೆಯಲ್ಲಿ ನೂತನ ಅವಿಷ್ಕಾರಗಳನ್ನು ಮಾಡಿದೆ. ಇಟಲಿಯ ಪೊಡೆನ್ಜಾನೋ-ಪಿಸಿ ಎಂಬಲ್ಲಿಂದ ಕಾರ್ಯನಿರ್ವಹಿಸುತ್ತಿದ್ದ ಈ ಜಾಗತಿಕ ಸಂಸ್ಥೆಯನ್ನು 2020ರಲ್ಲಿ ಎಂಇಐಎಲ್ ತನ್ನದಾಗಿಸಿಕೊಂಡಿತ್ತು.
ಈ ಮಹತ್ವಾಕಾಂಕ್ಷಿ ಉತ್ಪಾದನಾ ಘಟಕ ತ್ವರಿತ ಸ್ಥಾಪನೆಗೆ ಅನುವಾಗುವಂತೆ ತೆಲಂಗಾಣದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ವಿಶೇಷ ಜಾರಿ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದೆ. ಈ ಸಂಬಂಧ ಡ್ರಿಲ್ಮೆಕ್-ಎಸ್ಪಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಮೋನೆ ಟ್ರೇವಿಸಾನಿ ಮತ್ತು ತೆಲಂಗಾಣ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಉತ್ಪಾದನಾ ಘಟಕವು ಕನಿಷ್ಠ 2500 ಮಂದಿಗೆ ಉದ್ಯೋಗ ಒದಗಿಸಲಿದೆ. ದೇಶದ ಇಂಧನ ಸಕ್ಷಮತೆಯನ್ನು ಹೆಚ್ಚಿಸಲಿದೆ ಎಂದು ಡ್ರಿಲ್ಮೆಕ್ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಡ್ರಿಲ್ಮೆಕ್ ಸಿಇಓ ಸಿಮೋನೆ ಟ್ರೆವಿಸಾನಿ, ಭಾರತದ ಹೈಡ್ರೋಜನ್ ಇಂಧನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಂಸ್ಥೆ ಆಸಕ್ತವಾಗಿದೆ. ಪ್ರಸ್ತುತ ಸಂಸ್ಥೆಯು ಇಟಲಿ, ಅಮೇರಿಕದ ಹೌಸ್ಟನ್ ಮತ್ತು ಬೆಲಾರಸ್ಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಭಾರತದಲ್ಲಿನ ಈ ಉತ್ಪಾದನಾ ಘಟಕದಲ್ಲಿ ಉತ್ಪಾದನೆ, ಸಂಶೋಧನೆ ಮತ್ತು ವಿಶ್ವ ದರ್ಜೆಯ ತರಬೇತಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಿಸಿದರು.
ಡ್ರಿಲ್ಮೆಕ್ ಸಂಸ್ಥೆಯ ಅಂತರಾಷ್ಟ್ರೀಯ ಮಾರುಕಟ್ಟೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾ ಮಹೇಶ್ವರ್ ರೆಡ್ಡಿ ಮಾತನಾಡಿ, "ಹೈದರಾಬಾದ್ ಈ ಘಟಕ ದೇಶದ ಜಾಗತಿಕ ಉತ್ಪಾದನಾ ಘಟಕ ಸ್ಥಾಪನೆಯ ಮೊದಲ ಹೆಜ್ಜೆ ಆಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿದೆ. ಪ್ರಸ್ತುತ 1 ಬಿಲಿಯನ್ ಡಾಲರ್ ಮೊತ್ತದ ಕಾರ್ಯಾದೇಶ ಸಂಸ್ಥೆಯ ಬಳಿ ಇದೆ ಎಂದರು.
ಈ ಸಂದರ್ಭದಲ್ಲಿ ತೆಲಂಗಾಣ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Click it and Unblock the Notifications