ದಿನಸಿ ಡೆಲಿವರಿ ಆಪ್ ಆದ ಡೊನ್ಜೊ ನಗದು ಕೊರತೆ ಕಾರಣದಿಂದಾಗಿ ಜೂನ್ ತಿಂಗಳಿನಿಂದ ವೇತನವನ್ನು ತಡೆ ಹಿಡಿದಿದೆ. ಸೆಪ್ಟೆಂಬರ್‌ವರೆಗೂ ಸಂಸ್ಥೆಯು ಉದ್ಯೋಗಿಗಳಿಗೆ ವೇತನ ನೀಡದು ಎಂದು ವರದಿಯಾಗಿದೆ. ಈ ನಡುವೆ ಡೊನ್ಜೊ ತನ್ನ ಉದ್ಯೋಗಿಗಳ ಭರವಸೆಯನ್ನು ಪಡೆಯುವ ಪ್ರಯತ್ನವನ್ನು ಮಾಡುತ್ತಿದೆ. ಡೊನ್ಜೊ ಬಾಕಿ ಇರುವ ತನ್ನ ವೇತನದ ಮೇಲೆ ಶೇಕಡ 12 ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುವ ಭರವಸೆಯನ್ನು ನೀಡಿದೆ.
ಇನ್ನು ಸೆಪ್ಟೆಂಬರ್ 4 ರ ಒಳಗಾಗಿ ಡೊನ್ಜೊ ತನ್ನ ಉದ್ಯೋಗಿಗಳಿಗೆ ವೇತನವನ್ನು ನೀಡುವ ಭರವಸೆಯನ್ನು ನೀಡಿದೆ. ಈ ವೇತನಕ್ಕೆ ಶೇಕಡ 12ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುವ ಭರವಸೆಯನ್ನು ಕೂಡಾ ಡೊನ್ಜೊ ನೀಡಿದೆ. ಡೊನ್ಜೊ ವೇತನದಾರರ ತಂಡವು ಜುಲೈ 27 ರಂದು ಉದ್ಯೋಗಿಗಳಿಗೆ ಇಮೇಲ್ ಮೂಲಕ ಭರವಸೆಯನ್ನು ನೀಡಿದೆ.

"ನಿಮ್ಮ ತಾಳ್ಮೆ ಹಾಗೂ ನಿಮ್ಮ ಬೆಂಬಲಕ್ಕಾಗಿ ನಾವು ಧನ್ಯವಾದವನ್ನು ತಿಳಿಸುತ್ತೇವೆ. ಸಂಬಳದಲ್ಲಿ ವಿಳಂಬದಿಂದಾಗಿ ನಿಮಗೆ ಉಂಟಾದ ಸಮಸ್ಯೆಯನ್ನು, ಅನಾನುಕೂಲತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಅದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ನಾವು ವಿಳಂಬಕ್ಕೆ ಬೆಂಬಲವಾಗಿ ಬಡ್ಡಿದರ ನೀಡಲು ನಿರ್ಧಾರ ಮಾಡಿದ್ದೇವೆ," ಎಂದು ಮನಿಕಂಟ್ರೋಲ್ ಇಮೇಲ್ ಅನ್ನು ಉಲ್ಲೇಖಿಸಿ ವರದಿ ಮಾಡಿದೆ.
ಹಣಕಾಸಿನ ಸವಾಲನ್ನು ಎದುರಿಸುತ್ತಿರುವ ಡೊನ್ಜೊ
ಪ್ರಸ್ತುತ ಡೊನ್ಜೊ ಹಣಕಾಸಿನ ಸವಾಲನ್ನು ಎದುರಿಸುತ್ತಿದೆ. ನಗದು ಕೊರತೆಯ ಕಾರಣದಿಂದಾಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಡೊನ್ಜೊದಲ್ಲಿ ವೇತನವನ್ನು ವಿಳಂಬ ಮಾಡಲಾಗುತ್ತಿದೆ. ಜುಲೈ 3 ರಂದು ಡೊನ್ಜೊ ತನ್ನ ಉದ್ಯೋಗಿಗಳ ಪೈಕಿ 500 ಮಂದಿಗೆ ಸಂಬಳವನ್ನು ಮುಂದೂಡಿದೆ. 500 ಉದ್ಯೋಗಿಗಳಿಗೆ ವೇತನವನ್ನು ನೀಡಿದೆ.
ಜೂನ್‌ನಿಂದ ವ್ಯಕ್ತಿಯ ವೇತನ ಪ್ಯಾಕೇಜ್ ಅನ್ನು ಲೆಕ್ಕಿಸದೆಯೇ 75,000 ರೂಪಾಯಿಯಷ್ಟು ಪಾವತಿಯನ್ನು ಮಾಡಿದೆ. ಈ ಮೊದಲು, ಜುಲೈ 20 ರೊಳಗೆ ಡೊನ್ಜೊ ತನ್ನ ಬಾಕಿಯನ್ನು ಪಾವತಿ ಮಾಡುವ ನಿರ್ಧಾರ ಮಾಡಿತ್ತು. ಆದರೆ ಇದನ್ನು ಸೆಪ್ಟೆಂಬರ್‌ವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ಇಮೇಲ್ ಅನ್ನು ಗುಡ್‌ರಿಟರ್ನ್ಸ್ ಕನ್ನಡವು ಖಚಿತಪಡಿಸಿಕೊಂಡಿಲ್ಲ.
ಪಾವತಿ ವಿಳಂಬ ಮಾಡಿದ ಕಾರಣಕ್ಕಾಗಿ ಗೂಗಲ್, ಫೇಸ್‌ಬುಕ್, ನಿಲೆನ್ಸೊ, ಇಂಡಿಯಾ ಆನ್‌ಲೈನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಬಿಐ), ಕಪ್‌ಶಪ್, ಕೂ, ಗ್ಲಾಂಸ್‌ನೊಂದಿಗೆ ಡೊನ್ಜೊ ಪ್ರಸ್ತುತ ಕಾನೂನು ಹೋರಾಟದಲ್ಲಿದೆ ಎಂದು ವರದಿ ಹೇಳಿದೆ. ಡೊನ್ಜೊ ಭಾರತದಲ್ಲಿ ತ್ವರಿತ ವಾಣಿಜ್ಯ ವಿಭಾಗದಲ್ಲಿ ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಸಂಸ್ಥೆಯಾಗಿದೆ.
ಡೊನ್ಜೊ 50 ಬಿಲಿಯನ್ ಡಾಲರ್‌ಗೂ ಅಧಿಕ ಮಾರುಕಟ್ಟೆ ಅವಕಾಶವನ್ನು ಹೊಂದಿದೆ. ಕಬೀರ್ ಬಿಸ್ವಾಸ್, ಮುಕುಂದ್ ಝಾ, ದಲ್ವಿರ್ ಸೂರಿ ಮತ್ತು ಅಂಕುರ್ ಅಗರ್ವಾಲ್ ಅವರಿಂದ ಸ್ಥಾಪಿಸಲ್ಪಟ್ಟ ಡೊನ್ಜೊ, ಕೊರಿಯರ್, ಇ-ಕಾಮರ್ಸ್ ಮತ್ತು ಮರ್ಚೆಂಟ್ ಲಾಜಿಸ್ಟಿಕ್ಸ್‌ನ ವಹಿವಾಟುಗಳನ್ನು ಸುಗಮಗೊಳಿಸಲು ವ್ಯಾಪಾರಿಗಳು, ಪಾಲುದಾರರು ಮತ್ತು ಬಳಕೆದಾರರನ್ನು ಸಂಪರ್ಕಿಸುತ್ತದೆ.
ಮೂರನೇ ಹಂತದ ಉದ್ಯೋಗ ಕಡಿತ?
ಲಾಜಿಸ್ಟಿಕ್ಸ್ ಆಂಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಡೊನ್ಜೊ ಈ ಹಿಂದೆ ಒಟ್ಟು ಎರಡು ಬಾರಿ ಉದ್ಯೋಗ ಕಡಿತವನ್ನು ಮಾಡಿದೆ. ಈಗ ಮತ್ತೆ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಕಂಡು ಬಂದಿದೆ. ಈ ಹಿಂದೆ ಈ ವರ್ಷದ ಮೊದಲಾರ್ಧದಲ್ಲಿ 400 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಏಪ್ರಿಲ್‌ನಲ್ಲಿ 75 ಮಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾದ ಬಳಿಕ ಸಂಸ್ಥೆಯು ಮತ್ತೆ ಶೇಕಡ 30ರಷ್ಟು ಉದ್ಯೋಗ ಕಡಿತವನ್ನು ಮಾಡಿದೆ. ಮಾಹಿತಿ ಪ್ರಕಾರ ಈಗ ಡೊನ್ಜೊ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆಯಿದೆ.


Click it and Unblock the Notifications