ಗೂಗಲ್ ಬೆಂಬಲಿತ, ಬೆಂಗಳೂರಿನಲ್ಲಿ ಅತೀ ಜನಪ್ರಿಯವಾದ ಆಹಾರ ಸಾಮಾಗ್ರಿ ತ್ವರಿತವಾಗಿ ಡೆಲಿವರಿ ಮಾಡುವ ಸಂಸ್ಥೆಯಾದ ಡೊನ್ಜೊ ತಮ್ಮ ಉದ್ಯೋಗಿಗಳ ಪೈಕಿ ಶೇಕಡ 50ರಷ್ಟು ಉದ್ಯೋಗಿಗಳಿಗೆ ವೇತನವನ್ನು ಮುಂದೂಡಿದೆ. ಸಂಸ್ಥೆಯಲ್ಲಿ ನಗದು ಕೊರತೆ ಕಾಣಿಸಿಕೊಂಡ ಬೆನ್ನಲ್ಲೇ ಡೊನ್ಜೊ ಸಂಸ್ಥೆಯು ಜೂನ್‌ನಲ್ಲಿ ಅರ್ಧದಷ್ಟು ಉದ್ಯೋಗಿಗಳಿಗೆ ವೇತನವನ್ನು ನೀಡಿಲ್ಲ ಎಂದು ಮಾಧ್ಯಮಗಳ ವರದಿಯು ಹೇಳುತ್ತದೆ.
ಅತೀ ಹೆಚ್ಚು ಬೇಡಿಕೆಯನ್ನು ಹೊಂದಿರುವ ಡೆಲಿವರಿ ಸಂಸ್ಥೆಯು ಸುಮಾರು 1000 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಸುಮಾರು 500 ಉದ್ಯೋಗಿಗಳಿಗೆ ಡೊನ್ಜೊ ವೇತನವನ್ನು ಮುಂದಿನ ತಿಂಗಳಿನಲ್ಲಿ ನೀಡುವುದಾಗಿ ತಿಳಿಸಿದೆ. ಡೆಲಿವರಿಯಲ್ಲಿ ಪ್ರಮುಖ ಉಸ್ತುವಾರಿಯನ್ನು ವಹಿಸುವ ಟಾಪ್ ಉದ್ಯೋಗಿಗಳಿಗೆ ಇದರ ಅಧಿಕ ಪ್ರಭಾವ ಉಂಟಾಗಿದೆ ಎಂದು ವರದಿಯು ಹೇಳುತ್ತದೆ.

ರಿಲಯನ್ಸ್ ರಿಟೇಲ್ಸ್‌ನಿಂದ ಬೆಂಬಲವನ್ನು ಕೂಡಾ ಪಡೆದುಕೊಂಡಿರುವ ಈ ತ್ವರಿತ ವಾಣಿಜ್ಯ ಸಂಸ್ಥೆಯು, ಮ್ಯಾನೆಜೇರಿಯಲ್ ಸ್ಥಾನವನ್ನು ಹೊಂದಿರುವವರಿಗೆ ವೇತನ ಮುಂದೂಡಿಕೆಯ ಬಗ್ಗೆ ಮಾಹಿತಿ ನೀಡಿದೆ. ಬಾಕಿ ಇರುವ ವೇತನವನ್ನು ಜುಲೈ 15ರ ಬಳಿಕ ನೀಡಲಾಗುವುದು ಎಂದು ಡೊನ್ಜೊ ತಿಳಿಸಿದೆ. ಜೂನ್‌ನಲ್ಲಿ ಗರಿಷ್ಠವೆಂದರೆ ಉದ್ಯೋಗಿಗಳಿಗೆ 75,000 ರೂಪಾಯಿಯನ್ನು ವೇತನವಾಗಿ ನೀಡಲಾಗಿದೆ ಎಂದು ವರದಿಯು ಹೇಳುತ್ತದೆ.
ಮೂರನೇ ಹಂತದ ಉದ್ಯೋಗ ಕಡಿತ?
ಲಾಜಿಸ್ಟಿಕ್ಸ್ ಆಂಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಡೊನ್ಜೊ ಈ ಹಿಂದೆ ಒಟ್ಟು ಎರಡು ಬಾರಿ ಉದ್ಯೋಗ ಕಡಿತವನ್ನು ಮಾಡಿದೆ. ಈಗ ಮತ್ತೆ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಕಂಡು ಬಂದಿದೆ. ಈ ಹಿಂದೆ ಈ ವರ್ಷದ ಮೊದಲಾರ್ಧದಲ್ಲಿ 400 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ. ಏಪ್ರಿಲ್‌ನಲ್ಲಿ 75 ಮಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾದ ಬಳಿಕ ಸಂಸ್ಥೆಯು ಮತ್ತೆ ಶೇಕಡ 30ರಷ್ಟು ಉದ್ಯೋಗ ಕಡಿತವನ್ನು ಮಾಡಿದೆ.
ಮಾಹಿತಿ ಪ್ರಕಾರ ಈಗ ಡೊನ್ಜೊ ಮೂರನೇ ಹಂತದ ಉದ್ಯೋಗ ಕಡಿತ ಮಾಡುವ ಸಾಧ್ಯತೆಯಿದೆ. ಅದು ಕೂಡಾ ಈ ತಿಂಗಳಿನಲ್ಲೇ!. ಎರಡನೇ ಹಂತದ ಉದ್ಯೋಗ ಕಡಿತವನ್ನು ಮಾಡಿದ ಬಳಿಕ ಸಂಸ್ಥೆಯ ಸಿಇಒ ಕಬೀರ್ ಬಿಸ್ವಾಸ್ ಸಂಸ್ಥೆಯು ದೇಶದಲ್ಲಿ ಸುಮಾರು ಅರ್ಧದಷ್ಟು ಡಾರ್ಕ್ ಸ್ಟೋರ್‌ಗಳನ್ನು ಬಂದ್ ಮಾಡಲಿದೆ ಎಂದು ತಿಳಿಸಿದ್ದಾರೆ. ಕಡಿಮೆ ಸಮಯದಲ್ಲಿ ಆರ್ಡರ್‌ಗಳನ್ನು ತಲುಪಿಸಲು ಅಗತ್ಯ ವಸ್ತುಗಳನ್ನು ಇರಿಸಲಾಗುವ ಸಣ್ಣ ಗೋದಾಮಿಗೆ ಡಾರ್ಕ್ ಸ್ಟೋರ್ ಎಂದು ಕರೆಯಲಾಗುತ್ತದೆ.
ಹಣಕಾಸು ವರ್ಷ 2021-22ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹಣಕಾಸು ದಾಖಲೆಗಳು 67.7 ಕೋಟಿ ರೂಪಾಯಿಯ ಒಟ್ಟು ಆದಾಯವನ್ನು ನೋಂದಾಯಿಸಿದ್ದರೂ, ವೆಚ್ಚಗಳು 531.7 ಕೋಟಿ ರೂಪಾಯಿ ಆಗಿದೆ ಎಂದು ತೋರಿಸುತ್ತದೆ ಎಂದು ವರದಿಯಾಗಿದೆ. ಕಂಪನಿಯು 464 ಕೋಟಿ ರೂಪಾಯಿಗಳ ನಷ್ಟವನ್ನು ಕೂಡಾ ಕಂಡಿದೆ. ಇದು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ನಷ್ಟವಾಗಿದೆ.
ಸಂಸ್ಥೆಗೆ ಅತೀ ದೊಡ್ಡ ಖರ್ಚು ಉದ್ಯೋಗಳಿಗೆ ನೀಡುವ ಪ್ರಯೋಜನಗಳು ಆಗಿದೆ. ಉದ್ಯೋಗಿಗಳಿಗೆ ನೀಡುವ ಪ್ರಯೋಜನಗಳಿಗಾಗಿ ಸಂಸ್ಥೆಯು 138 ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಖರ್ಚುಗಳ ವಿಚಾರಕ್ಕೆ ಬಂದಾಗ ಜಾಹೀರಾತಿಗೆ ತಗುಲುವ ಖರ್ಚು ಎರಡನೇ ಸ್ಥಾನದಲ್ಲಿದೆ. ಸಂಸ್ಥೆಯು ಜಾಹೀರಾತಿಗಾಗಿ 64.4 ಕೋಟಿ ರೂಪಾಯಿ ವೆಚ್ಚ ಮಾಡುತ್ತದೆ. ಪ್ರಸ್ತುತ ರಿಲಯನ್ಸ್ ರಿಟೇಲ್ ಡೊನ್ಜೊದ ಶೇಕಡ 25.8ರಷ್ಟು ಮತ್ತು ಗೂಗಲ್ ಶೇಕಡ 20ರಷ್ಟು ಪಾಲುದಾರಿಕೆಯನ್ನು ಹೊಂದಿದೆ.


Click it and Unblock the Notifications