ನವದೆಹಲಿ, ನ. 19: ಉಕ್ಕಿನ ಉತ್ಪನ್ನಗಳ ರಫ್ತಿಗೆ ಹೇರಲಾಗಿದ್ದ ಸುಂಕವನ್ನು ಹಿಂಪಡೆಯಲು ಇತ್ತೀಚೆಗೆ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಉಕ್ಕು ಉದ್ಯಮದವರು ಸ್ವಾಗತಿಸಿದ್ದಾರೆ. ಉಕ್ಕು ಪದಾರ್ಥಗಳು ಮತ್ತು ಕಬ್ಬಿಣ ಅದಿರು ಮೇಲೆ ಸರ್ಕಾರ ಮೇ 21ರಂದು ರಫ್ತು ಸುಂಕ ವಿಧಿಸಿತ್ತು. ಆರು ತಿಂಗಳ ಬಳಿಕ ತನ್ನ ನಿರ್ಧಾರವನ್ನು ಸರ್ಕಾರ ಹಿಂಪಡೆದಿದೆ. ಇದು, ನವೆಂಬರ್ 19, ಶನಿವಾರದಿಂದ ಜಾರಿಗೆ ಬರುತ್ತಿದೆ.
ಹಣಕಾಸು ಸಚಿವಾಲಯ ನಿನ್ನೆ ಶುಕ್ರವಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ, ಕೆಲ ನಿರ್ದಿಷ್ಟ ಉಕ್ಕು ಮತ್ತು ಕಬ್ಬಿಣ ಉತ್ಪನ್ನಗಳು ಮತ್ತು ಕಬ್ಬಿಣ ಅದಿರುಗಳಿಗೆ ಶೂನ್ಯ ರಫ್ತು ತೆರಿಗೆ ಇರುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರದ ಈ ಕ್ರಮವನ್ನು ಉಕ್ಕು ಕ್ಷೇತ್ರದ ಉದ್ಯಮಿಗಳು ಸ್ವಾಗತಿಸಿದ್ದು, ಉದ್ಯಮದ ಆರೋಗ್ಯಕ್ಕೆ ಇದರಿಂದ ಪುಷ್ಟಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ದೇಶೀಯವಾಗಿ ಉಕ್ಕಿಗೆ ಮತ್ತೆ ಬೇಡಿಕೆ ಸೃಷ್ಟಿಸಲು ಈ ಕ್ರಮ ಬಹಳ ಸಹಾಯಕವಾಗುತ್ತದೆ. ಅದರಲ್ಲೂ ಜಾಗತಿಕವಾಗಿ ಉಕ್ಕಿಗಿರುವ ಬೇಡಿಕೆ ಬಹಳ ಇಳಿಮುಖವಾಗಿರುವ ಹೊತ್ತಿನಲ್ಲಿ ಈ ಕ್ರಮ ಬಂದಿರುವುದು ಸ್ವಾಗತಾರ್ಹ" ಎಂದು ಬೆಂಗಳೂರು ಮೂಲದ ಜೆಎಸ್‌ಡಬ್ಲ್ಯೂ ಸ್ಟೀಲ್ ಸಂಸ್ಥೆಯ ಜಂಟಿ ಎಂಡಿ ಮತ್ತು ಗ್ರೂಪ್ ಸಿಎಫ್‌ಒ ಶೇಷಗಿರಿ ರಾವ್ ಹೇಳಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನೂ ಹಲವರ ಸ್ವಾಗತ
ಹಣದುಬ್ಬರವು ತುಸು ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಉದ್ಯಮವಲಯ ಮತ್ತು ಸಾಮಾನ್ಯ ಜನರ ಬಗ್ಗೆ ಸರ್ಕಾರಕ್ಕಿರುವ ಕಾಳಜಿ ವ್ಯಕ್ತವಾಗುತ್ತಿದೆ ಎಂದು ಇಂಡಿಯನ್ ಸ್ಟೀಲ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಅಲೋಕ್ ಸಹಾಯ್ ಹೇಳಿದ್ದಾರೆ.
ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳಿಗೆ ವಿದಿಸಿದ್ದ ರಫ್ತು ಸುಂಕವನ್ನು ತೆಗೆದುಹಾಕಿದ ಸರ್ಕಾರದ ಕ್ರಮವನ್ನು ಆರ್ಸೆಲಾರ್ ಮಿತ್ತಲ್ ನಿಪ್ಪೋನ್ ಸ್ಟೀಲ್ ಸಂಸ್ಥೆಯ ಸಿಇಒ ಮತ್ತು ಇಂಡಿಯನ್ ಸ್ಟೀಲ್ ಅಸೋಷಿಯಲ್‌ನ ಅಧ್ಯಕ್ಷರೂ ಆದ ದಿಲೀಪ್ ಊಮ್ಮನ್ ಕೂಡ ಪ್ರಶಂಸಿಸಿದ್ದಾರೆ. ಉಕ್ಕು ಕ್ಷೇತ್ರ ಸರ್ವಾಂಗೀಣ ಬೆಳವಣಿಗೆಯತ್ತ ಸಾಗಲು ಇದು ಪೂರಕ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ದೇಶೀಯ ಉತ್ಪಾದಕರು ಜಾಗತಿಕವಾಗಿ ಸ್ಪರ್ಧೆ ಮಾಡಲು ಇದು ಬಹಳ ಅಗತ್ಯದ ಕ್ರಮವಾಗಿತ್ತು. ಇದು ಮೇಕ್ ಇನ್ ಇಂಡಿಯಾ ಯೋಜನೆಗೆ ಪಷ್ಟಿ ಕೊಡುವುದಲ್ಲದೇ ಲೋಕಲ್ ಟು ಗ್ಲೋಬಲ್ ಎಂಬ ಸರ್ಕಾರದ ವಿಷನ್ ಸಾಕಾರಗೊಳ್ಳಲೂ ಸಹಾಯವಾಗುತ್ತದೆ" ಎಂದು ಜಿಂದಾಲ್ ಸ್ಟೇನ್‌ಲೆಸ್ ಸಂಸ್ಥೆಯ ಎಂಡಿ ಅಭ್ಯುದಜ್ ಜಿಂದಾಲ್ ಪ್ರತಿಕ್ರಿಯಿಸಿದ್ದಾರೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ಚೇತರಿಕೆ ಸಾಧ್ಯತೆ
ಉದ್ಯಮ ತಜ್ಞರ ಪ್ರಕಾರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಉಕ್ಕು ಉತ್ಪನ್ನ ತಯಾರಕರಿಗೆ ತುಸು ಶುಭ ದಿನಗಳಾಗಿರಲಿವೆ. ಉಕ್ಕಿಗೆ ಬೇಡಿಕೆ ಹೆಚ್ಚುತ್ತಿದ್ದು, ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತಿದೆ. ಈ ಹೊತ್ತಿನಲ್ಲಿ ಸರ್ಕಾರ ರಫ್ತು ಸುಂಕವನ್ನು ಇಳಿಸಿರುವುದು ಗಮನಾರ್ಹ.
ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಉಕ್ಕು ಕಂಪನಿಗಳು ನಿರಾಸೆಯ ವ್ಯವಹಾರ ನಡೆಸಿದ್ದವು. ಭಾರತದ ಉಕ್ಕು ಉದ್ಯಮದ ಶೇ. 60 ಭಾಗದ ಮಾರುಕಟ್ಟೆ ಸ್ವಾಮ್ಯ ಹೊಂದಿರುವ ಟಾಪ್-5 ಸ್ಟೀಲ್ ಕಂಪನಿಗಳು ಒಂದೋ ನಷ್ಟ ಹೊಂದಿವೆ, ಇಲ್ಲಾ ಲಾಭದಲ್ಲಿ ಭಾರೀ ಕುಸಿತ ಕಂಡಿವೆ.
ಉಕ್ಕಿನ ದರಗಳು ಒಂದೆಡೆ ಕುಸಿತ ಕಾಣುತ್ತಿದ್ದರೆ, ಇನ್ನೊಂದೆಡೆ ಕಲ್ಲಿದ್ದಲು ಮತ್ತಿತರ ಕಚ್ಛಾ ವಸ್ತುಗಳ ಬೆಲೆ ಏರಿಕೆ ಆಗುತ್ತಿತ್ತು. ಆದರೆ, ಈಗ ಚಾಲನೆಯಲ್ಲಿರುವ ತ್ರೈಮಾಸಿಕ ಅವಧಿಯಲ್ಲಿ ಕೋಕಿಂಗ್ ಕೋಲ್‌ನ ಬೆಲೆ ಕಡಿಮೆ ಇದೆ. ಆಂತರಿಕವಾಗಿ ಉಕ್ಕು ಉತ್ಪನ್ನಗಳಿಗೆ ಬೇಡಿಕೆ ಇದೆ.
ರಫ್ತು ಬಹಳ ಮುಖ್ಯ
ಉಕ್ಕು ಕಂಪನಿಗಳು ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೆ ಮಾತ್ರ ಸಾಲದು. ಅವುಗಳ ಪೂರ್ಣ ಸಾಮರ್ಥ್ಯ ಬಳಕೆಯಾಗಬೇಕಾದರೆ ರಫ್ತು ಬಹಳ ಮುಖ್ಯ ಎಂಬುದು ಉದ್ಯಮ ಪರಿಣಿತರ ಅನಿಸಿಕೆ. ಈ ಹಿನ್ನೆಲೆಯಲ್ಲೂ ಕೇಂದ್ರ ಸರ್ಕಾರದ ರಫ್ತು ಸುಂಕ ರದ್ದು ಕ್ರಮ ಉಕ್ಕು ಉದ್ಯಮಕ್ಕೆ ಸಂತಸ ತಂದಿದೆ.
ಸರ್ಕಾರ ದೇಶದಲ್ಲಿ 300 ಮೆಗಾಟನ್ (ಎಂಟಿ) ಉಕ್ಕು ತಯಾರಿಕೆ ಸಾಮರ್ಥ್ಯ ರೂಪಿಸುವ ಗುರಿ ಹೊಂದಿದೆ. ಇಲ್ಲಿ ಒಂದು ಮೆಗಾ ಟನ್ ಎಂದರೆ 100 ಕೋಟಿ ಕಿಲೋ. ಸರ್ಕಾರದ ಈ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಟಾಟಾ ಸ್ಟೀಲ್, ಜೆಎಸ್‌ಡಬ್ಲಯೂ ಸ್ಟೀಲ್, ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್), ಜೆಎಸ್‌ಪಿಎಲ್ ಮೊದಲಾದ ಸಂಸ್ಥೆಗಳು ತಮ್ಮ ಉತ್ಪಾದಕ ಸಾಮರ್ಥ್ಯ ಹೆಚ್ಚಿಸುವ ಹಾದಿಯಲ್ಲಿವೆ.


Click it and Unblock the Notifications