ಬೆಂಗಳೂರು: ವಾವ್..! ತ್ಯಾಜ್ಯದಿಂದ ಕಲೆ.. ಕಲೆಯ ಮೂಲಕ ಕರ್ನಾಟಕದ ಶ್ರೀಮಂತ ಜೀವವೈವಿಧ್ಯ ಅನಾವರಣ. ಹೌದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) 5ನೇ 'ಹಸಿರು ಸಂಗೀತ ಉತ್ಸವ'ಕ್ಕೆ ಸಜ್ಜಾಗಿದೆ. ವಿಶೇಷವೆಂದರೆ, ಈ ಬಾರಿಯ ಸಂಗೀತೋತ್ಸವದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಬಾರಿ 'ಎಕೋಸ್ ಆಫ್ ಅರ್ಥ್' ಹಸಿರು ಸಂಗೀತ ಉತ್ಸವಕ್ಕೆ ಸಾಥ್ ನೀಡಲಿದೆ. ಬನ್ನಿ, ಈ ಬಾರಿಯ ಉತ್ಸವ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇ-ತ್ಯಾಜ್ಯ ಸಂಗ್ರಹ ಅಭಿಯಾನ ನಡೆಯಲಿದೆ. ಇಲ್ಲಿ ಸಂಗ್ರಹಿಸಲಾದ ತ್ಯಾಜ್ಯದ ಮೂಲಕ ಕರುನಾಡಿನ ಶ್ರೀಮಂತ ಕಲೆ ಅನಾವರಣಗೊಳ್ಳಲಿದೆ. ಕಲಾವಿದರು ತ್ಯಾಜ್ಯವನ್ನು ಕಲಾಕೃತಿಗಳಾಗಿ ಪರಿವರ್ತಿಸಲಿದ್ದಾರೆ. ಮತ್ತು ವಿಮಾನ ನಿಲ್ದಾಣದಲ್ಲಿ ನಡೆಯುವ ಉತ್ಸವದ ಸ್ಥಳಗಳಲ್ಲಿ ಪ್ರದರ್ಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಕಲೆ, ಸಂಗೀತದ ಮೂಲಕ ಪರಿಸರ ಸಂರಕ್ಷಣೆಯ ಅರಿವು (ಜಾಗೃತಿ) ಮೂಡಿಸುವಲ್ಲಿ 'ಎಕೋಸ್ ಆಫ್ ಅರ್ಥ್' ಜೊತೆಗಿನ ಪಾಲುದಾರಿಕೆ ಮಹತ್ವದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇ-ತ್ಯಾಜ್ಯ ಸಂಗ್ರಹ ಅಭಿಯಾನವು ಈ ತಿಂಗಳ (ನವೆಂಬರ್) ಅಂತ್ಯದ ವರೆಗೂ ನಡೆಯಲಿದೆ. 080 ಲಾಂಜ್ಗಳು ಮತ್ತು ದಿ ಕ್ವಾಡ್ ಬೈ ಬಿಎಲ್ಆರ್ ಸೇರಿದಂತೆ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳಲ್ಲಿ ಎಕೋಸ್ನ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡಲಿದ್ದಾರೆ. ಈ ಪ್ರದರ್ಶನದಲ್ಲಿ ಕೋ ಹೌಜೆಲ್, ಆಂಚಲ್ ಬೊರ್ಡೊಲೊಯ್, ಎರಡು ಕಣ್ಣಿನ ಮಾಂತ್ರಿಕ, ತರಂಗ್ ಜೋಸೆಫ್, ಸಾಹಿಲ್ ಮದನ್, ಅನಿರುದ್ಧ್ ರವಿ ಮತ್ತು ಶಶಾಂಕ್ ವರ್ಮಾ ಸೇರಿದಂತೆ ಪ್ರಸಿದ್ಧ ಕಲಾವಿದರ ಕಲೆಯನ್ನು ಪ್ರದರ್ಶಿಸಲಾಗುವುದು. ಈ ಮೂಲಕ ಪ್ರಯಾಣಿಕರಿಗೆ ಕಲೆ ಮತ್ತು ಸಂಗೀತದ ರಸದೌತಣ ನೀಡಲಾಗುತ್ತದೆ.
ಕ್ಯುರೇಟೆಡ್ ಆರ್ಟ್ ಪ್ರಾಜೆಕ್ಟ್ ಇ-ತ್ಯಾಜ್ಯ ಸಂಗ್ರಹ ಅಭಿಯಾನ ಪ್ರಮುಖ ಭಾಗವಾಗಿದೆ. ಸಿದ್ಧಾರ್ಥ ಕರರ್ವಾಲ್, ಮೆಕ್ಯಾನಿಮಲ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಕೆಲಸ ಮಾಡಲಿದ್ದಾರೆ. ಮರುಬಳಕೆಯ ವಸ್ತುಗಳಿಂದ ರಚಿಸಲಾದ ಕಲೆಯ ಮೂಲಕ ಕರ್ನಾಟಕದ ಶ್ರೀಮಂತ ಜೀವವೈವಿಧ್ಯವನ್ನು ಪ್ರದರ್ಶಿಸಲಿದ್ದಾರೆ.


Click it and Unblock the Notifications