ಕೋಲಾರ, ಜನವರಿ 08: ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕರ್ನಾಟಕ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಮತ್ತು ಅವರ ಕೆಲವು ಸಂಬಂಧಿತ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ಬೆಳಗ್ಗೆ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಶಾಸಕ ಕೆವೈನಂಜೇಗೌಡ ಅವರಿಗೆ ಸೇರಿದ ಬೆಂಗಳೂರು ನಿವಾಸ, ಮಾಲೂರು ಕೋಚಿಮುಲ್ ಕಚೇರಿ ಸೇರಿ ಹತ್ತಕ್ಕೂ ಹೆಚ್ಚು ಕಡೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದ ಶೋಧ ಮುಂದುವರಿಸಿದೆ. ಕೆ.ವೈ. ನಂಜೇಗೌಡ ಅವರು ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ಅಧ್ಯಕ್ಷರೂ ಆಗಿದ್ದು, ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿರುವ ಕೆ.ವೈ.ನಂಜೇಗೌಡರ ಮನೆ, ಹುತ್ತೂರು ಹೋಬಳಿ ಕೋಚಿಮುಲ್ ಕಚೇರಿ, ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಶೋಧ ನಡೆಸಿದೆ. ಕೆ.ವೈ.ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ಮೂರ್ತಿ ನಿವಾಸದ ಮನೆ ಮೇಲೂ ಸಹ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇನ್ನೊಂದೆಡೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಸೋಮವಾರ ಬೆಳಗ್ಗೆಯೇ ದಾಳಿ ನಡೆಸಿದೆ. ಅಶ್ವತ್ಥನಾರಾಯಣ ಬಾಬು ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಪಕ್ಷದ ಜತೆಗೆ ಗುರುತಿಸಿಕೊಳ್ಳದೇ ಕೋಚಿಮುಲ್ ಚುನಾವಣೆ ಗೆದ್ದ ಅಶ್ವತ್ಥನಾರಾಯಣ ಬಾಬು ಎರಡು ಸಲ ಕೋಚಿಮುಲ್‌ನ ನಿರ್ದೇಶಕರಾಗಿದ್ದಾರೆ.
ಸುಧಾಕರ್ ಅವರು ಕಾಂಗ್ರೆಸ್ ಸೇರಿದ ಬಳಿಕ, ಬಾಬು ಕೂಡ ಕಾಂಗ್ರೆಸ್ ಸೇರಿದರು. ಈ ಹಿಂದೆ ಒಮ್ಮೆ ತಾಲೂಕು ಪಂಚಾಯಿತಿ ಸದಸ್ಯೂ ಆಗಿದ್ದರು. ಕೋಚಿಮುಲ್ ನೇಮಕ ಹಗರಣದಲ್ಲಿ ಅಶ್ವತ್ಥನಾರಾಯಣ ಬಾಬು ಹೆಸರು ಕೂಡ ಕೇಳಿಬಂದಿತ್ತು.


Click it and Unblock the Notifications