ಕರ್ನಾಟಕದ ಕೋಳಿ ಸಾಕಾಣಿಕಾರರಿಗೆ ದೊಡ್ಡ ಮಟ್ಟದ ಟೆನ್ಶನ್ ಎದುರಾಗಿದೆ. ಕೆಲದು ವಾರಗಳಿಂದ ರಾಜ್ಯದ ಹಲವೆಡೆ ಮೊಟ್ಟೆ ದರ ತೀವ್ರ ಕುಸಿದಿದೆ. ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ನೀಡಿದ ಮಾಹಿತಿಯ ಪ್ರಕಾರ, ಪ್ರತಿ ಮೊಟ್ಟೆಯ ಬೆಲೆ ಸುಮಾರು ₹7.06ರಿಂದ ₹4.60ರವರೆಗೆ ಇಳಿದಿದೆ. ಕೇವಲ 15 ದಿನಗಳ ಅವಧಿಯಲ್ಲಿ ಈ ಮಟ್ಟದ ಕುಸಿತ ಕಂಡುಬಂದಿರುವುದು ಕೋಳಿ ಸಾಕಾಣಿಕಾರರಿಗೆ ಆತಂಕವನ್ನುಂಟು ಮಾಡಿದೆ.

ಅಂದಹಾಗೆ ಈ ಪರಿಯ ಬೆಲೆ ಇಳಿಕೆಗೆ ಬಲವಾದ ಕಾರಣ ಇದೆ.. ಅದೇನೆಂದರೆ ಗಲ್ಫ್ ರಾಷ್ಟ್ರಗಳಿಗೆ ಹೋಗುವ ಮೊಟ್ಟೆ ರಫ್ತಿನಲ್ಲಿ ಉಂಟಾದ ಅಡಚಣೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ, ಋತುಮಾನಕ್ಕೆ ಅನುಗುಣವಾಗಿ ಬೇಡಿಕೆಯಲ್ಲಿ ಆಗುವ ಬದಲಾವಣೆಗಳು ಹಾಗೂ ಧಾರ್ಮಿಕ ಆಚರಣೆಗಳ ಪರಿಣಾಮವೂ ಇದಕ್ಕೆ ಕಾರಣವಾಗಿದೆ ಎಂದು NECC ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ದಿನಕ್ಕೆ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಹೊಸಪೇಟೆ ರಾಜ್ಯದ ಪ್ರಮುಖ ಉತ್ಪಾದನಾ ಕೇಂದ್ರವಾಗಿದ್ದು, ಮೈಸೂರು ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳಲ್ಲಿ ಕೆಲವು ತಮಿಳುನಾಡಿನ ನಾಮಕ್ಕಲ್ ಪ್ರದೇಶದಲ್ಲಿರುವ ಘಟಕಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಗಲ್ಫ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಸಾಮಾನ್ಯವಾಗಿ ನಾಮಕ್ಕಲ್‌ನಿಂದ ಪ್ರತಿದಿನ ಸುಮಾರು 70 ಲಕ್ಷದಿಂದ ಒಂದು ಕೋಟಿ ಮೊಟ್ಟೆಗಳು ವಿದೇಶಗಳಿಗೆ ಸಾಗುತ್ತವೆ. ಆದರೆ ಇತ್ತೀಚಿನ ಅಂತರರಾಷ್ಟ್ರೀಯ ಪರಿಸ್ಥಿತಿಯಿಂದಾಗಿ ಈ ರಫ್ತು ಕಾರ್ಯ ತಾತ್ಕಾಲಿಕವಾಗಿ ನಿಂತಿದೆ. ಇದರಿಂದ ಮಾರುಕಟ್ಟೆಯಲ್ಲಿ ಮೊಟ್ಟೆಗಳ ಪ್ರಮಾಣ ಹೆಚ್ಚಾಗಿ ಬೆಲೆ ಕುಸಿತವಾಗುತ್ತಿದೆ.
ಇದೇ ಸಮಯದಲ್ಲಿ ರಂಜಾನ್ ಅವಧಿಯಲ್ಲೂ ಮೊಟ್ಟೆಯ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ಈಸ್ಟರ್ ಹಬ್ಬ ಹಾಗೂ ಬೇಸಿಗೆ ಆರಂಭದ ಸಮಯದಲ್ಲೂ ಸಾಮಾನ್ಯವಾಗಿ ಮೊಟ್ಟೆ ಸೇವನೆ ಕಡಿಮೆಯಾಗುತ್ತದೆ. ಈ ಕಾರಣಗಳಿಂದ ಬೆಂಗಳೂರು ಮತ್ತು ಮೈಸೂರಿನಂತಹ ನಗರಗಳಲ್ಲಿ ಬೆಲೆಗಳು ಇನ್ನಷ್ಟು ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ.
ಬೆಲೆ ಕಡಿಮೆಯಾದರೂ ಮೊಟ್ಟೆ ಉತ್ಪಾದನೆ ನಿಲ್ಲಿಲ್ಲ. ಪರಿಣಾಮವಾಗಿ ಹೆಚ್ಚುವರಿ ಮೊಟ್ಟೆಗಳು ಸಂಗ್ರಹವಾಗುತ್ತಿವೆ. ಉತ್ಪಾದಕರು ಅವುಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸುತ್ತಿದ್ದಾರೆ. ಈ ರೀತಿಯಾಗಿ ಮೊಟ್ಟೆಗಳನ್ನು ಮೂರು ತಿಂಗಳವರೆಗೆ ಸುರಕ್ಷಿತವಾಗಿ ಉಳಿಸಬಹುದು.
ಇನ್ನೂ ಕೆಲವು ಮೊಟ್ಟೆಗಳನ್ನು ಮೊಟ್ಟೆ ಪುಡಿಯಾಗಿ ಸಂಸ್ಕರಿಸಲಾಗುತ್ತಿದೆ. ಈ ಉತ್ಪನ್ನವನ್ನು ಸಾಮಾನ್ಯವಾಗಿ ತಾಜಾ ಮೊಟ್ಟೆಗಳು ಸುಲಭವಾಗಿ ದೊರೆಯದ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ನಾಮಕ್ಕಲ್, ಮುಂಬೈ ಮತ್ತು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮೊಟ್ಟೆ ಪುಡಿ ತಯಾರಿಸುವ ಘಟಕಗಳಿವೆ. ಮಾಲೂರಿನ ಘಟಕದಲ್ಲೇ ಪ್ರತಿದಿನ ಸುಮಾರು 12 ಲಕ್ಷ ಮೊಟ್ಟೆಗಳು ಸಂಸ್ಕರಣೆಯಾಗುತ್ತವೆ.
ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಯಿಂದಾಗಿ ಮೊಟ್ಟೆ ಪುಡಿಯ ರಫ್ತು ಕೂಡ ಇತ್ತೀಚೆಗೆ ನಿಧಾನವಾಗಿದೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಮೊಟ್ಟೆ ಬೆಲೆಯಲ್ಲಿ ಏರಿಳಿತ ಕಂಡುಬರುತ್ತದೆ. ಆದರೆ ಈ ವರ್ಷ ವಿದೇಶಿ ಮಾರುಕಟ್ಟೆಯ ಸಮಸ್ಯೆಗಳ ಪರಿಣಾಮ ಹೆಚ್ಚು ಕಾಣಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.


Click it and Unblock the Notifications