ನವದೆಹಲಿ, ಮಾರ್ಚ್ 6: ಈಜಿಪ್ಟ್ ಮತ್ತು ಅದರ ಇತಿಹಾಸವನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೀರಿ. ಈಜಿಪ್ಟ್ ಶತ- ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಭೂಮಿ. ಒಂದು ಕಾಲದಲ್ಲಿ ಈಜಿಪ್ಟ್ ಅನ್ನುಇತರ ಅನೇಕ ದೇಶದವರು ಸಂಪತ್ತಿನ ಸಮಾನಾರ್ಥಕವಾಗಿಯೇ ನೋಡುತ್ತಿದ್ದರು.
ಪ್ರಪಂಚದ ಅದ್ಭುತಗಳಲ್ಲಿ ಒಂದಾದ ಪಿರಮಿಡ್‌ಗಳು ಈಜಿಪ್ಟ್‌ನಲ್ಲಿವೆ. ಈ ಪಿರಮಿಡ್‌ಗಳಲ್ಲಿ ಇನ್ನೂ ಕೋಟಿಗಟ್ಟಲೆ ಹಣ ಹುದುಗಿಸಿಡಲಾಗಿದೆ ಎಂದು ನಂಬಲಾಗಿದೆ. ಒಂದು ಕಾಲದಲ್ಲಿ ಸಿರಿವಂತ ದೇಶ ಎಂದು ಕರೆಯಲ್ಪಟ್ಟ ಈಜಿಪ್ಟ್ ದೇಶ ಈಗ ತೀವ್ರ ಆರ್ಥಿಕ ಒತ್ತಡದಲ್ಲಿದೆ. ಆರ್ಥಿಕ ಬಿಕ್ಕಟ್ಟು ದೇಶದ ಪ್ರಮುಖ ನಗರಗಳನ್ನು ಒಂದೊಂದಾಗಿ ಮಾರಾಟ ಮಾಡುವಂತೆ ಮಾಡಿದೆ.

ಈ ಮಾರಾಟ ಸರಣಿ ಮುಂದುವರಿದಿದ್ದು, ಇದೀಗ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ ಅವರು ತಮ್ಮ ಮುಖ್ಯ ನಗರವಾದ ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ 'ರಾಸ್ ಅಲ್ ಹಿಕ್ಮಾ' ವನ್ನು ಕೂಡಾ ಮಾರಾಟ ಮಾಡಿದ್ದಾರೆ. ಈ ನಗರದ ಮಾರಾಟ ಮೌಲ್ಯ 2,90,241 ಕೋಟಿ ರೂ. ಆಗಿದ್ದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಈಗ ಈಜಿಪ್ಟ್ ನಗರದ ನೂತನ ಮಾಲೀಕರಾಗಿದ್ದಾರೆ.
'ರಾಸ್ ಅಲ್ ಹಿಕ್ಮಾ' ಸಮುದ್ರ ತೀರದಲ್ಲಿರುವ ಅತ್ಯಂತ ಸುಂದರವಾದ ನಗರವಾಗಿದೆ. ಅದರೂ ಈಜಿಪ್ಟ್ ಅನಿವಾರ್ಯವಾಗಿ ಈ ನಗರವನ್ನು ಮಾರಾಟ ಮಾಡಿದೆ. 'ರಾಸ್ ಅಲ್ ಹಿಕ್ಮಾ' ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹೀಗಾಗಿ ಮಾಧ್ಯಮ ವರದಿಗಳ ಪ್ರಕಾರ, ಈಜಿಪ್ಟ್ ನಗರವನ್ನು ಖರೀದಿಸಿದ ನಂತರ ಯುಎಇ ಶೀಘ್ರದಲ್ಲೇ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, ಶೀಘ್ರ ಕೆಲಸವನ್ನು ಪ್ರಾರಂಭಿಸಲಿದೆ.
ರಾಸ್ ಅಲ್ ಹಿಕ್ಮಾದಲ್ಲಿ ಸುಮಾರು 12,43,893 ಕೋಟಿ ರೂಪಾಯಿ ಹೂಡಿಕೆ ಮಾಡಲು ಯುಎಇ ಯೋಜನೆ ರೂಪಿಸಿದೆ. ಈ ಮೆಗಾ ಯೋಜನೆಯಲ್ಲಿ ಈಜಿಪ್ಟ್ ಕೂಡ ಶೇ.35 ರಷ್ಟು ಪಾಲು ಹೊಂದಿದೆ. ಈ ಯೋಜನೆ ಯಶಸ್ವಿಯಾದರೆ ಈಜಿಪ್ಟ್ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ಹೂಡಿಕೆಯಾಗಲಿದೆ. ಯುಎಇಯ ಹೊರತಾಗಿ, ಸೌದಿ ಅರೇಬಿಯಾ ಮತ್ತು ಕತಾರ್ ಸಹ ಅನೇಕ ಈಜಿಪ್ಟ್ ನಗರಗಳನ್ನು ಖರೀದಿಸಲು ಆಸಕ್ತಿ ತೋರಿಸಿವೆ.
ಪ್ರಸ್ತುತ ಈಜಿಪ್ಟ್‌ನ ಆರ್ಥಿಕ ಪರಿಸ್ಥಿತಿ ತುಂಬಾ ದಯನೀಯವಾಗಿದೆ. ಈಗಿನ ಸರ್ಕಾರಕ್ಕೆ ಬೇರೆ ದೇಶಗಳಿಂದ ಸಾಲವೂ ಸಿಗುತ್ತಿಲ್ಲ. ಇತ್ತೀಚೆಗೆ, ಈಜಿಪ್ಟ್ ಸೌದಿ ಅರೇಬಿಯಾ ಮತ್ತು ಯುಎಇಯಂತಹ ದೇಶಗಳಿಂದ ಸಾಲವನ್ನು ಕೋರಿತ್ತು, ಆದರೆ ಈ ಎರಡೂ ದೇಶಗಳಿಂದ ನಿರಾಶೆಗೊಂಡಿದೆ.ಈ ಕಾರಣದಿಂದ ಪ್ರಮುಖ ನಗರಗಳನ್ನು ಮಾರಾಟ ಮಾಡುವ ಅನಿವಾರ್ಯತೆಗೆ ಈ ದೇಶ ಒಳಗಾಗಿದೆ.


Click it and Unblock the Notifications