ನವದೆಹಲಿ, ಮಾರ್ಚ್ 16: ಇತ್ತೀಚೆಗೆ ಭಾರೀ ವಿವಾದಾತ್ಮಕತೆಯಿಂದ ಸುದ್ದಿಯಲ್ಲಿದ್ದ ಕೇಂದ್ರ ಚುನಾವಣಾ ಆಯೋಗವು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಎಸ್‌ಬಿಐನ ಚುನಾವಣಾ ಬಾಂಡ್ ಗಳ ಅಂಕಿಅಂಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಪ್ರಕಟಿಸಿದ ಚುನಾವಣಾ ಬಾಂಡ್‌ಗಳ ಅಂಕಿಅಂಶಗಳ ಪ್ರಕಾರ, ಭಾರತೀಯ ಜನತಾ ಪಕ್ಷವು ಚುನಾವಣಾ ಬಾಂಡ್‌ಗಳ ಯೋಜನೆಯ ಅತಿದೊಡ್ಡ ಫಲಾನುಭವಿಯಾಗಿದೆ.
ಒಟ್ಟಾರೆಯಾಗಿ, ಕಳೆದ ಐದು ವರ್ಷಗಳಲ್ಲಿ 24 ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿದ್ದು ಇದೆಲ್ಲವನ್ನು ಲೆಕ್ಕಚಾರ ಹಾಕಿದ್ರೆ ಬರೋಬ್ಬರಿ 12,769 ಕೋಟಿ ರೂ. ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾರ್ಚ್ 14 ರಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ 6,061 ಕೋಟಿ ರೂಪಾಯಿಗಳನ್ನು ಬಿಜೆಪಿ ರಾಜಕೀಯ ದೇಣಿಗೆಯಾಗಿ ಸ್ವೀಕರಿಸಿದೆ. ಎರಡನೇ ಸ್ಥಾನದಲ್ಲಿ ತೃಣಮೂಲ ಕಾಂಗ್ರೆಸ್ ಇದ್ದು 1,610 ಕೋಟಿ ರೂ., ಹಾಗೂ ಮೂರನೇ ಸ್ಥಾನದಲ್ಲಿ 1,422 ಕೋಟಿ ರೂ. ದೇಣಿಗೆ ಸ್ವೀಕರಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಿದೆ.
ನಂತರ ಸ್ಥಾನಗಳಲ್ಲಿ ಹಿಂದೆ ತೆಲಂಗಾಣ ರಾಷ್ಟ್ರಸಮಿತಿ ಎಂದು ಕರೆಯಲ್ಪಡುತ್ತಿದ್ದ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಚುನಾವಣಾ ಬಾಂಡ್‌ಗಳ ಮೂಲಕ 1,214.70 ಕೋಟಿ ರೂ.,ಮತ್ತು ಬಿಜು ಜನತಾ ದಳ ರೂ 776 ಕೋಟಿ, ಡಿಎಂಕೆ 639 ಕೋಟಿ ರೂ., ಪಡೆದುಕೊಂಡಿದೆ.
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK), ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, J&K ನ್ಯಾಷನಲ್ ಕಾನ್ಫರೆನ್ಸ್, ಮತ್ತು ಗೋವಾ ಫಾರ್ವರ್ಡ್ ಪಾರ್ಟಿ ಈ ಐದು ಪಕ್ಷಗಳು ಒಟ್ಟಾಗಿ ಏಪ್ರಿಲ್ 2019 ರಿಂದ 2024 ರವರೆಗೆ ಕೇವಲ 13 ಕೋಟಿ ರೂಪಾಯಿ ಮೌಲ್ಯದ ದೇಣಿಗೆಯನ್ನು ಪಡೆದಿವೆ ಎಂದು ಅಂಕಿಅಂಶಗಳು ತೋರಿಸಿವೆ.
ಇತರ ರಾಷ್ಟ್ರೀಯ ಪಕ್ಷಗಳಾದ ಬಿಎಸ್‌ಪಿ, ಸಿಪಿಐ(ಎಂ) ಮತ್ತು ಎನ್‌ಪಿಪಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ಹಣವನ್ನು ಸ್ವೀಕರಿಸಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದ ರಾಜಕೀಯ ಫಲಿತಾಂಶವಾಗಿ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ(ಎಎಪಿ )ವೂ ದೇಣಿಗೆ ಸ್ವೀಕರಿಸಲು ಹಿಂದೆ ಬೀಳದೆ 65.45 ಕೋಟಿ ರೂ. ದೇಣಿಗೆ ಗಳಿಸಿದೆ ಎಂಬುವುದು ಉಲ್ಲೇಖನೀಯ.


Click it and Unblock the Notifications