ಟ್ವಿಟ್ಟರ್‌ನ ಮಾಲೀಕ, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್, ಟ್ವಿಟ್ಟರ್ ಸಿಇಒ ಲಿಂಡಾ ಯಾಕರಿನೊ ಟ್ವಿಟ್ಟರ್ ಬಳಕೆ ಮಾಡುವುದಕ್ಕೂ ಅಧಿಕವಾಗಿ ಟ್ವಿಟ್ಟರ್ ಅನ್ನು ಬಳಕೆ ಮಾಡುತ್ತಾರೆ. ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಈ ಮೈಕ್ರೋ ಬ್ಲಾಗಿಂಗ್ ಆಪ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿರುವ ಎಲಾನ್ ಮಸ್ಕ್ ಈಗ ಪ್ರತಿ ದಿನ ನಾವು ನೋಡಬಹುದಾದ ಅಥವಾ ಓದಬಹುದಾದ ಟ್ವೀಟ್‌ಗೂ ಮಿತಿಯನ್ನು ಹೇರಿದ್ದಾರೆ.
ಎಲಾನ್ ಮಸ್ಕ್ ತನ್ನ ಈ ನಡೆಯನ್ನು ಸಮರ್ಥನೆ ಕೂಡಾ ಮಾಡಿಕೊಂಡಿದ್ದಾರೆ. ಅತೀ ಅಧಿಕ ಮಟ್ಟದಲ್ಲಿ ಡೇಟಾ ಬಳಕೆ ಮತ್ತು ಸಿಸ್ಟಮ್ ಮ್ಯಾನಿಪ್ಯುಲೇಷನ್‌ಗೆ ಈ ನೂತನ ನಿರ್ಧಾರವು ತಡೆಯೊಡ್ಡುತ್ತದೆ ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ. ಆದರೆ ಈ ನಡುವೆ ಟ್ವಿಟ್ಟರ್‌ನ ಸಿಇಒ ಲಿಂಡಾ ಯಾಕರಿನೊ ಮಾತ್ರ ಸೈಲೆಂಟ್ ಆಗಿದ್ದಾರೆ. ಪ್ರಸ್ತುತ ನಾವು ದಿನಕ್ಕೆ ಎಷ್ಟು ಟ್ವೀಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ?, ಇಲ್ಲಿದೆ ವಿವರ ಮುಂದೆ ಓದಿ.....

ದಿನಕ್ಕೆ ನಾವೆಷ್ಟು ಟ್ವೀಟ್‌ಗಳನ್ನು ನೋಡಬಹುದು?
ಎಲಾನ್ ಮಸ್ಕ್ ಪ್ರಕಾರ ವೆರಿಫೈ ಆದ ಖಾತೆಗಳು ದಿನಕ್ಕೆ 600 ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ಹೊಸದಾಗಿ ತೆರೆಯಲಾಗಿರುವ ವೆರಿಫೈ ಆಗದ ಖಾತೆಗಳು ದಿನಕ್ಕೆ 300 ಟ್ವೀಟ್‌ಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತದೆ. ಇನ್ನು ವೆರಿಫೈ ಆಗಿರುವ ಟ್ವಿಟ್ಟರ್ ಖಾತೆಗಳು ದಿನಕ್ಕೆ ಗರಿಷ್ಠವಾಗಿ 6000 ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ಈ ಮಿತಿಯನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಕೂಡಾ ಮಸ್ಕ್ ಹೇಳಿಕೊಂಡಿದ್ದಾರೆ.
ಶೀಘ್ರವೇ ಈ ಮಿತಿಯನ್ನು ಹೆಚ್ಚಳ ಮಾಡಲಾಗುತ್ತದೆ. ವೆರಿಫೈಡ್ ಖಾತೆಗಳು ದಿನಕ್ಕೆ 8000 ಪೋಸ್ಟ್‌ಗಳು, ವೆರಿಫೈ ಆಗದ ಖಾತೆಗಳು 800 ಪೋಸ್ಟ್‌ಗಳು, ಹೊಸದಾಗಿ ತೆರೆಯಲಾದ ವೆರಿಫೈ ಆಗದ ಖಾತೆಗಳು ದಿನಕ್ಕೆ 400 ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗುವಂತೆ ಶೀಘ್ರವೇ ಮಿತಿ ಏರಿಕೆ ಮಾಡಲಾಗುತ್ತದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಟ್ವೀಟ್ ಮಾಡಿರವ ಎಲಾನ್ ಮಸ್ಕ, "ಈ ಮಿತಿಯನ್ನು 10 ಸಾವಿರ, 1 ಸಾವಿರ, 0.5 ಸಾವಿರಕ್ಕೆ ಏರಿಸಲಾಗುತ್ತದೆ," ಎಂದು ತಿಳಿಸಿದ್ದಾರೆ. ಅಂದರೆ ಶೀಘ್ರವೇ ಒಂದು ದಿನದಲ್ಲಿ ನೋಡಬಹುದಾದ ಪೋಸ್ಟ್‌ಗಳ ಮಿತಿಯನ್ನು ವೆರಿಫೈಡ್ ಖಾತೆಗಳಿಗೆ 10 ಸಾವಿರಕ್ಕೆ, ವೆರಿಫೈ ಆಗದ ಖಾತೆಗಳಿಗೆ ಒಂದು ಸಾವಿರಕ್ಕೆ, ಹೊಸದಾಗಿ ತೆರೆಯಲಾದ ವೆರಿಫೈ ಆಗದ ಖಾತೆಗಳು ದಿನಕ್ಕೆ 500ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಸೈಲೆಂಟ್ ಆಗಿರುವ ಸಿಇಒ ಯಾಕರಿನೊ
ಟ್ವಿಟರ್‌ನ ಹೊಸ ಸಿಇಒ ಲಿಂಡಾ ಯಾಕರಿನೊ ಪ್ರಸ್ತುತ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ ಬಳಿಕ ಪ್ಲಾಟ್‌ಫಾರ್ಮ್ ಅನ್ನು ತ್ಯಜಿಸಿದ ಜಾಹೀರಾತುದಾರರನ್ನು ಮತ್ತೆ ಟ್ವಿಟ್ಟರ್‌ಗೆ ಕರೆತರುವ ಮಾರ್ಗವನ್ನು ರೂಪಿಸುವಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಎಲಾನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಕಡಿಮೆ ಸಮಯವನ್ನು ಕಳೆಯುವಂತೆ ಆಗುವ ನಿಯಮ ಇದಾಗಿದೆ. ಒಂದು ದಿನದಲ್ಲಿ ಎಷ್ಟು ಪೋಸ್ಟ್‌ಗಳನ್ನು ನೋಡಬಹುದು ಎಂಬ ಮಿತಿ ಇರುವಾಗ ಸಾಮಾನ್ಯವಾಗಿಯೇ ಪ್ಲಾಟ್‌ಫಾರ್ಮ್ ಬಳಕೆ ಕಡಿಮೆಯಾಗಲಿದೆ. ಈ ನಡುವೆ ಜಾಹೀರಾತುದಾರರು ಹೇಗೆ ಪಾವತಿ ಮಾಡಿ ಸಂಸ್ಥೆಗೆ ಜಾಹೀರಾತು ನೀಡಲು ಮುಂದಾಗುತ್ತಾರೆ ಎಂಬುವುದು ಪ್ರಶ್ನಾರ್ಹವಾಗಿದೆ.
ಎಲಾನ್ ಮಸ್ಕ್ ಘೋಷಣೆ ಮಾಡಿರುವ ಈ ನೂತನ ನಿಯಮ ಬದಲಾವಣೆಯಲ್ಲಿ ಟ್ವಿಟ್ಟರ್‌ನ ಸಿಇಒ ಲಿಂಡಾ ಯಾಕರಿನೊ ಕೂಡಾ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿದೆ. ಲಿಂಡಾ ಯಾಕರಿನೊ ಈ ನೂತನ ನಿಯಮದ ಬಗ್ಗೆ ಸಾರ್ವಜನಿಕವಾಗಿ ಆಗಲಿ ಅಥವಾ ಟ್ವೀಟ್‌ಗಳ ಮೂಲಕವಾಗಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಟ್ವಿಟ್ಟರ್ ಚಟವಾಗುತ್ತದೆ!
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಎಲಾನ್ ಮಸ್ಕ್ ಈ ವೀವ್ ಲಿಮಿಟ್ ಅನ್ನು ಮಾಡಲು ಕಾರಣವೆಂದರೆ ನಾವೆಲ್ಲರೂ ಟ್ವಿಟರ್ ವ್ಯಸನಿಗಳು ಆಗುತ್ತಿರುವುದು ಎಂದಿದ್ದಾರೆ. "ನಾವೆಲ್ಲ ಟ್ವಿಟ್ಟರ್‌ನ ವ್ಯಸನಿಗಳಾಗುತ್ತಿದ್ದಾರೆ, ನಾವು ಕೊಂಚ ಹೊರಗೆ ಹೋಗಬೇಕಾಗಿದೆ. ನಾನು ಮಿತಿ ಹೇರುವ ಮೂಲಕ ಜಗತ್ತಿಗೆ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದೇನೆ. ಈ ಟ್ವೀಟ್ ಅನ್ನು ಓದುವ ಮೂಲಕ ನೀವು ಇನ್ನೊಂದು ವೀವ್ಸ್ ಅನ್ನು ಕಳೆದುಕೊಂಡಿದ್ದೀರಿ," ಎಂದು ತಿಳಿಸಿದ್ದಾರೆ.


Click it and Unblock the Notifications