ಎಲಾನ್ ಮಸ್ಕ್ ಅವರ ಟೆಸ್ಲಾ ಇಂಡಿಯಾ ಮೋಟಾರ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಪುಣೆಯಲ್ಲಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದಿದೆ. ಕಂಪನಿಯ ಅಧಿಕಾರಿಗಳು ದೇಶದಲ್ಲಿ ಉತ್ಪಾದನಾ ಎಲೆಕ್ಟ್ರಿಕ್ ವಾಹನ ಘಟಕವನ್ನು ಸ್ಥಾಪಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್‌ರನ್ನು ಭೇಟಿಯಾದ ಒಂದು ವಾರದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಪುಣೆಯ ವಿಮಾನ್ ನಗರದಲ್ಲಿರುವ ಪಂಚಶಿಲ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಕಚೇರಿ ಸ್ಥಳಕ್ಕಾಗಿ ಐದು ವರ್ಷಗಳ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕಳೆದ ವಾರ ವಾಣಿಜ್ಯ ಸಚಿವರೊಂದಿಗೆ ಟೆಸ್ಲಾ ಮತ್ತು ಭಾರತ ಸರ್ಕಾರದ ಉನ್ನತ ಮಟ್ಟದ ಚರ್ಚೆ ನಡೆದಿದೆ. ಇನ್ನು ಜೂನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎಲಾನ್ ಮಸ್ಕ್‌ರನ್ನು ಭೇಟಿಯಾಗಿದ್ದಾರೆ. ದೇಶದಲ್ಲಿ ಹೂಇಡಕೆ ಮಾಡುವ ಇಂಗಿತವನ್ನು ಭೇಟಿ ವೇಳೆ ವ್ಯಕ್ತಪಡಿಸಿದ್ದಾರೆ.

ಇವಿ ಸಂಸ್ಥೆ ಟೆಸ್ಲಾದ ಪ್ರತಿನಿಧಿಗಳು ಭಾರತದ ಮಾರುಕಟ್ಟೆ ಪ್ರವೇಶ ಮಾಡುವ ಬಗ್ಗೆ ಚರ್ಚೆಯಲ್ಲಿ ವಿವರಿಸಿದ್ದಾರೆ. ಪ್ರಸ್ತುತ ಬೆಲೆಗಿಂತ ಶೇಕಡ 25ರಷ್ಟು ಕಡಿಮೆ ದರದಲ್ಲಿ ಟೆಸ್ಲಾ ಇವಿಗಳನ್ನು ಮಾರಾಟ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿಯಿದೆ. ಭಾರತದ ಮಾರುಕಟ್ಟೆಯಲ್ಲಿ ಟೆಸ್ಲಾ ವಾಹನದ ಬೆಲೆ 24,000 ಡಾಲರ್ ಆಗಿರಬಹುದು ಎಂದು ಈ ತಿಂಗಳ ಆರಂಭದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
Elon Musk: ಒಂದು ದಿನದಲ್ಲಿ ನೀವು ನೋಡಬಹುದಾದ ಟ್ವೀಟ್‌ಗೆ ಮಿತಿ ಹೇರಿದ ಮಸ್ಕ್, ಸಿಇಒ ಸೈಲೆಂಟ್!
ಎಲೆಕ್ಟ್ರಿಕ್ ವಾಹನಗಳು ಪ್ರಸ್ತುತ ಭಾರತದಲ್ಲಿ ಒಟ್ಟು ವಾಹನ ಮಾರಾಟದಲ್ಲಿ ಶೇಕಡ 2ಕ್ಕಿಂತ ಕಡಿಮೆಯಿದೆ. ಹಾಗೆಯೇ ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಮೇ ತಿಂಗಳಲ್ಲಿ, ಟೆಸ್ಲಾ ಅಧಿಕಾರಿಗಳು ಭಾರತದಲ್ಲಿ ಕಾರುಗಳು ಮತ್ತು ಬ್ಯಾಟರಿಗಳ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡುವ ಕುರಿತು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಭಾರತದಲ್ಲಿ ಹೂಡಿಕೆಗೆ ಉತ್ಸುಕರಾಗಿದ್ದೇವೆ ಎಂದ ಮಸ್ಕ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್‌ನಲ್ಲಿ ಯುಎಸ್‌ನ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ. ಟೆಸ್ಲಾ ಹಾಗೂ ಟ್ವಿಟ್ಟರ್‌ನ ಮಾಲಿಕ ಎಲಾನ್ ಮಸ್ಕ್ ಅನ್ನು ಕೂಡಾ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಈ ಭೇಟಿಯ ಬಳಿಕ ಎಲಾನ್ ಮಸ್ಕ್, ಟೆಸ್ಲಾ ಭಾರತದಲ್ಲಿ ಹೂಡಿಕೆಗೆ ಉತ್ಸುಕವಾಗಿದೆ, ಭಾರತ ಇತರೆ ದೊಡ್ಡ ದೇಶಗಳಿಗಿಂತ ಹೆಚ್ಚಿನ ಭರವಸೆಯನ್ನು ಹೊಂದಿರುವ ದೇಶವಾಗಿದೆ ಎಂದು ಹೇಳಿಕೊಂಡಿದ್ದಾರೆ.
"ನಾವು ಯಾವುದೇ ದೇಶದಲ್ಲಿ ಆ ದೇಶದ ಕಾನೂನನ್ನು ಪಾಲನೆ ಮಾಡುವುದು ಉತ್ತಮ. ಅದಕ್ಕಿಂತ ಹೆಚ್ಚಿನದ್ದನ್ನು ಮಾಡಲು ನಮ್ಮಿಂದ ಸಾಧ್ಯವಾಗದು. ಎಲ್ಲ ದೇಶಗಳಲ್ಲಿ ಬೇರೆ ಬೇರೆಯಾದ ಕಾನೂನು, ನಿಯಮಗಳು ಇರುತ್ತದೆ. ಆ ಸರ್ಕಾರದ ಕಾನೂನನ್ನು ಪಾಲನೆ ಮಾಡುವ ಎಲ್ಲ ಪ್ರಯತ್ನವನ್ನು ನವು ಮಾಡುತ್ತೇವೆ," ಎಂದು ಎಲಾನ್ ಮಸ್ಕ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯ ಬಳಿಕವು ಮಾಧ್ಯಮಗಳು ಟೆಸ್ಲಾ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆಯೇ ಎಂಬ ಪ್ರಶ್ನೆಯನ್ನು ಕೇಳಿದೆ. ಇದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಭಾರತದಲ್ಕಿ ಟೆಸ್ಲಾ ಮಾರುಕಟ್ಟೆ ಪ್ರವೇಶದ ಸುಳಿವು ನೀಡಿದ್ದಾರೆ.
"ಭಾರತ ದೇಶಕ್ಕೆ ಮುಂದಿನ ವರ್ಷ ಭೇಟಿ ನೀಡುವ ಪ್ಲ್ಯಾನ್ ಅನ್ನು ಮಾಡಿದ್ದೇನೆ. ಟೆಸ್ಲಾ ಭಾರತದ ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ ಎಂಬ ನಂಬಿಕೆ ನನಗಿದೆ. ಅದಕ್ಕಾಗಿ ಬೇಕಾದ ಎಲ್ಲ ಪ್ರಯತ್ನಗಳನ್ನು ಟೆಸ್ಲಾ ಮಾಡುತ್ತಾ ಬರುತ್ತದೆ. ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸುತ್ತೇನೆ. ಶೀಘ್ರವೇ ಈ ಬಗ್ಗೆ ಒಂದು ಘೋಷಣೆಯನ್ನು ಮಾಡಲಾಗುತ್ತದೆ," ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.


Click it and Unblock the Notifications