ಇಂಜಿನಿಯರ್ ಆದ್ರೂ ಮಿಡಿ ಸೌತೆ ಬೆಳೆದು ಲಾಭ ಕಂಡ ಕೆ.ಆರ್.ಪೇಟೆಯ ಅರವಿಂದ್

ಕೃಷಿ ಕ್ಷೇತ್ರ ಲಾಭದಾಯಕವಲ್ಲ, ಹೆಚ್ಚು ವಿದ್ಯಾವಂತರಲ್ಲದವರು ಮಾಡುವ ಕೆಲಸ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಈ ಕ್ಷೇತ್ರಕ್ಕೂ ವಿದ್ಯಾವಂತರು ಕಾಲಿಟ್ಟು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಕೃಷಿಯಲ್ಲೂ ಲಾಭ ಗಳಿಸಬಹುದು ಎಂಬುದನ್ನು ಕೆ.ಆರ್.ಪೇಟೆ ತಾಲೂಕಿನ ಆಘಲಯ ಸಮೀಪದ ಇಂಜಿನಿಯರ್ ಅರವಿಂದ್ ಎಂಬುವರು ತೋರಿಸಿಕೊಟ್ಟಿದ್ದಾರೆ.

ಇಂಜಿನಿಯರ್ ಪದವಿ ಮಾಡಿದ ಬಳಿಕ ಬೆಂಗಳೂರಿನಲ್ಲಿ ಉತ್ತಮ ವೇತನ ಬರುವ ಕೆಲಸದಲ್ಲಿದ್ದರೂ ಅದನ್ನು ಬಿಟ್ಟು ಬಂದು ತಮ್ಮ ಊರಿನಲ್ಲಿ ತಂದೆ ಮಾಡಿಟ್ಟಿದ್ದ ಜಮೀನಿನಲ್ಲಿ ಕೃಷಿ ಮಾಡುತ್ತೇನೆಂದು ಹೊರಟವರು ಇವರು. ಇವರ ಈ ನಡೆಗೆ ಜನ ಅಚ್ಚರಿ ವ್ಯಕ್ತಪಡಿಸಿದ್ದರು. ಈಗಾಗಲೇ ರೈತರು ಕೃಷಿ ಮಾಡಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವಾಗ ಇದ್ದ ಕೆಲಸವನ್ನು ಬಿಟ್ಟು ಬಂದು ಕೃಷಿ ಮಾಡುತ್ತೇನೆ ಎನ್ನುತ್ತಾನಲ್ಲ ಎಂದು ಮಾತನಾಡಿಕೊಂಡವರೇ ಹೆಚ್ಚು. ಆದರೆ ಅಂದುಕೊಂಡಿದ್ದನ್ನು ಮಾಡಿ ತೋರಿಸಿದ್ದಾರೆ ಅರವಿಂದ್.

ಹೊಳೆಯಿತು ಮಿಡಿ ಸೌತೆ ಬೆಳೆಯುವ ಆಲೋಚನೆ

ಹೊಳೆಯಿತು ಮಿಡಿ ಸೌತೆ ಬೆಳೆಯುವ ಆಲೋಚನೆ

ಅರವಿಂದ್ ಬೆಂಗಳೂರಿನಿಂದ ಬರುವ ಮುನ್ನ ಸರ್ವ ರೀತಿಯಲ್ಲಿಯೂ ತಯಾರಾಗಿಯೇ ಬಂದಿದ್ದರು. ಇತರೆ ರೈತರು ಮಾಡದ ರೀತಿಯಲ್ಲಿ ಕೃಷಿ ಮಾಡುವುದು ಅವರ ಉದ್ದೇಶವಾಗಿತ್ತು. ಯಾವ ತರಕಾರಿ ಬೆಳೆದರೆ ಅದರಿಂದ ಲಾಭ ಬರುತ್ತದೆ ಮತ್ತು ಅದು ಯಾವುದಕ್ಕೆ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಆಗ ಅವರಿಗೆ ಹೊಳೆದದ್ದು ಮಿಡಿ ಸೌತೆ ಬೆಳೆಯುವ ಆಲೋಚನೆ.

ಮಿಡಿ ಸೌತೆಯನ್ನು ಔಷಧಿಗೆ ಉಪಯೋಗಿಸುವುದರಿಂದ ಅದನ್ನು ಬೆಳೆಯುವ ಆಲೋಚನೆ ಮಾಡಿದರು. ಆ ಆಲೋಚನೆಯನ್ನು ಕಾರ್ಯರೂಪಕ್ಕೂ ತಂದರು. ಮಿಡಿ ಸೌತೆ ಬೆಳೆದು ಅದನ್ನು ನೇರವಾಗಿ ಔಷಧಿ ಕಂಪನಿಗೆ ಸರಬರಾಜು ಮಾಡುವ ಬಗ್ಗೆ ತೀರ್ಮಾನಕ್ಕೆ ಬಂದರು.

 

12 ಲಕ್ಷ ರೂಪಾಯಿ ಆದಾಯ

12 ಲಕ್ಷ ರೂಪಾಯಿ ಆದಾಯ

ತಮ್ಮ ಆಲೋಚನೆಯಂತೆ ಹತ್ತು ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯ ಸಹಾಯ ಧನದಿಂದ ಪಾಲಿಹೌಸ್ ನಿರ್ಮಾಣ ಮಾಡಿ ಅದರಲ್ಲಿ ಮಿಡಿ ಸೌತೆಯನ್ನು ಬೆಳೆಯಲು ಮುಂದಾದರು. ಮಿಡಿಸೌತೆಯನ್ನು ವೈಜ್ಞಾನಿಕವಾಗಿ ಬೆಳೆದ ಅವರು ಸುಮಾರು ಆರು ತಿಂಗಳಲ್ಲಿ 20 ರಿಂದ 25 ಟನ್ ಮಿಡಿಸೌತೆಯನ್ನು ಬೆಳೆದರಲ್ಲದೆ, ಇದನ್ನು ನೇರವಾಗಿ ಔಷಧಿ ತಯಾರಿಸುವ ಕಂಪನಿಗಳಿಗೆ ಸರಬರಾಜು ಮಾಡುವ ಮೂಲಕ ಅಂದಾಜು 12 ಲಕ್ಷ ರೂ ಆದಾಯ ಪಡೆದರು. ಈ ಮೂಲಕ ಮಿಡಿಸೌತೆಯನ್ನು ಬೆಳೆದು ಲಾಭಗಳಿಸಬಹುದು ಎಂಬ ಸಂದೇಶವನ್ನು ಇತರೆ ರೈತರಿಗೆ ರವಾನಿಸಿ ಮಾದರಿಯಾಗಿದ್ದಾರೆ.

ಮಿಡಿಸೌತೆ ಜೊತೆ ತೇಗ, ತೆಂಗು

ಮಿಡಿಸೌತೆ ಜೊತೆ ತೇಗ, ತೆಂಗು

ಅರವಿಂದ್ ಅವರು ಮಿಡಿಸೌತೆಯೊಂದಿಗೆ ಜಮೀನಿನ ಸುತ್ತಲೂ ತೇಗದ ಸಸಿ ಹಾಗೂ ತೆಂಗಿನ ಸಸಿಗಳನ್ನು, ಪಪ್ಪಾಯಿ, ದಾಳಿಂಬೆ ಸಸಿಗಳನ್ನು ನೆಟ್ಟಿದ್ದಾರೆ. ಕೊಳವೆ ಬಾವಿ ಮತ್ತು ಕೃಷಿ ಹೊಂಡದ ಮೂಲಕ ಹನಿ ನೀರಾವರಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ. ಮಿಶ್ರ ಬೇಸಾಯಕ್ಕೆ ಒತ್ತು ನೀಡಿರುವ ಅವರು ಅರ್ಧ ಎಕರೆ ಜಾಗದಲ್ಲಿ ಚೆಂಡು ಹೂ, ಸೇವಂತಿಗೆ ಹೂಗಳನ್ನು ಬೆಳೆದಿದ್ದಾರೆ. ಇದರಿಂದಲೂ ಆದಾಯ ಪಡೆಯುತ್ತಿದ್ದಾರೆ. ಇನ್ನು ಹತ್ತು ಹಸುಗಳನ್ನು ಸಾಕುವುದರೊಂದಿಗೆ ಪಶುಸಂಗೋಪನೆಗೂ ಒತ್ತು ನೀಡಿದ್ದಾರೆ. ಪ್ರತಿದಿನವೂ ಸುಮಾರು 100 ಲೀಟರ್ ಹಾಲನ್ನು ಉತ್ಪಾದಿಸಿ ಗ್ರಾಹಕರಿಗೆ ನೇರವಾಗಿ ತಲುಪಿಸುತ್ತಿದ್ದಾರೆ.

ಮಗನ ಕೃಷಿ ಕೆಲಸಕ್ಕೆ ತಂದೆ ತಾಯಿ ಸಾಥ್

ಮಗನ ಕೃಷಿ ಕೆಲಸಕ್ಕೆ ತಂದೆ ತಾಯಿ ಸಾಥ್

ಮುಂದಿನ ದಿನಗಳಲ್ಲಿ ಮೇಕೆ ಮತ್ತು ಕುರಿ ಫಾರಂ ಆರಂಭಿಸುವ ಉದ್ದೇಶವೂ ಇವರಿಗಿದೆ. ಅರವಿಂದ್ ಅವರ ಕೃಷಿ ಕಾರ್ಯಕ್ಕೆ ತಂದೆ ವೆಂಕಟೇಶ್ ಹಾಗೂ ತಾಯಿ ಪದ್ಮಮ್ಮ ಕೂಡ ಆಸರೆಯಾಗಿ ನಿಂತಿದ್ದಾರೆ. ತಂದೆ ವೆಂಕಟೇಶ್ ಅವರು ಹಿಂದೆ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದರಿಂದ ಮಗನ ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಕೃಷಿ ಚಟುವಟಿಕೆಗಾಗಿ ಹತ್ತು ಮಂದಿ ಕೆಲಸಗಾರರನ್ನಿಟ್ಟುಕೊಂಡು ಅವರಿಗೆ ಮಾಸಿಕ 15 ಸಾವಿರ ವೇತನ ನೀಡುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳ ಮೂಲಕ ಲಾಭ ಕಾಣುತ್ತಿರುವ ಅರವಿಂದ್ ಅವರ ಸಾಧನೆ ಇತರೆ ರೈತರಿಗೆ ಮಾದರಿಯಾಗಲಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+