ಭಾರತೀಯ ಆಹಾರ ನಿಗಮವು ಈವರೆಗೂ 7 ಲಕ್ಷ ಟನ್ ಗೋಧಿಯನ್ನು ಈಗಾಗಲೇ ಸಂಗ್ರಹ ಮಾಡಿಕೊಂಡಿದೆ. ಈ ವರ್ಷ 342 ಲಕ್ಷ ಟನ್ ಗೋಧಿಯನ್ನು ಸಂಗ್ರಹ ಮಾಡಿಕೊಟ್ಟುಕೊಳ್ಳಲು ಸಿದ್ಧವಾಗಿದೆ ಎಂದು ಎಫ್‌ಸಿಐ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ. ನಿರೀಕ್ಷೆಗಿಂತ ಉತ್ತಮವಾದ ಗೋಧಿ ಉತ್ಪಾದನೆ, ಅಂದಾಜುಗಳು ಮತ್ತು ಇತ್ತೀಚಿನ ಅಕಾಲಿಕ ಮಳೆಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಸರ್ಕಾರ ಬೆಂಬಲ ನೀಡುವ ಭರವಸೆಯ ಆಧಾರದಲ್ಲಿ ನಾವು ಈ ಅಂದಾಜನ್ನು ತಿಳಿಸಿದ್ದೇವೆ ಎಂದು ಕೂಡಾ ಹೇಳಿದ್ದಾರೆ.
"ಜಾಗತಿಕವಾಗಿ ಹಲವಾರು ಸವಾಲುಗಳು ಇದೆ. ಈ ನಡುವೆಯೂ ಗೋಧಿ ಹಾಗೂ ಗೋಧಿ ಹಿಟ್ಟಿನ ದರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಖಾಸಗಿ ವಲಯದ ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಣೆ ಮಾಡುವುದು ಈ ಸಂದರ್ಭದಲ್ಲಿ ಅತೀ ಮುಖ್ಯವಾಗಿದೆ. ಎಲ್ಲ ಬೆಳವಣಿಗೆಗಳನ್ನು ನಾವು ಗಮನಿಸಿ ಈ ವರ್ಷ ಈ ಹಿಂದಿನ ವರ್ಷಕ್ಕಿಂತ ಅಧಿಕ ಉತ್ಪಾದನೆಯ ಅಂದಾಜು ಇದೆ," ಎಂದು ಕೂಡಾ ತಿಳಿಸಿದ್ದಾರೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಕುಮಾರ್ ಸಿಂಗ್, "ಮಾರ್ಚ್-ಏಪ್ರಿಲ್ 2023 ರಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯ ಪ್ರಭಾವವಿದ್ದರೂ ಕೂಡಾ ಸಚಿವಾಲಯ ಮತ್ತು ಖಾಸಗಿ ಏಜೆನ್ಸಿಗಳ ಅಂದಾಜುಗಳು ಈ ವರ್ಷ ಹೆಚ್ಚು ಗೋಧಿ ಉತ್ಪಾದನೆಯಾಗಲಿದೆ," ಎಂದಿದ್ದಾರೆ.
ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾದ ಮೊದಲ ಸಾಮಾನ್ಯ ಸಭೆ ಮತ್ತು ನಿರ್ದೇಶಕರ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಅಶೋಕ್ ಕುಮಾರ್ ಮೀನಾ ಮತ್ತು ಸುಬೋಧ್ ಕುಮಾರ್ ಈ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲೇ '2022-23 ರ ವ್ಯವಸಾಯ ವರ್ಷದ ಗೋಧಿ ಬೆಳೆ ಮತ್ತು ಉತ್ಪಾದನಾ ಅಂದಾಜುಗಳು ಎಂಬ ಸಮೀಕ್ಷೆಯ ವರದಿಯನ್ನು ಸಹ ಅನಾವರಣಗೊಳಿಸಲಾಯಿತು.
ಫೆಡರೇಶನ್ ಪರವಾಗಿ ಅಗ್ರಿ ವಾಚ್ ಈ ವರದಿಯನ್ನು ಸಿದ್ಧಪಡಿಸಿದೆ. ಮಾರ್ಚ್ 2023 ರ ಅಂತ್ಯದ ವೇಳೆಗೆ ಗೋಧಿ ಉತ್ಪಾದಿಸುವ ರಾಜ್ಯಗಳು ಎದುರಿಸುತ್ತಿರುವ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆ, ಬಿರುಗಾಳಿಯ ನಡುವೆಯೂ 102.89 ಲಕ್ಷ ಟನ್‌ಗಳಷ್ಟು ಗೋಧಿ ಉತ್ಪಾದನೆಯನ್ನು ನಿರೀಕ್ಷೆ ಇದೆ. ಇದು 104.24 ಲಕ್ಷ ಟನ್‌ಗಳಿಗಿಂತ ಕಡಿಮೆಯಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಹಿಂದೆ ಬೆಲೆ ಏರಿಕೆ, ಬೆಲೆ ನಿಯಂತ್ರಣಕ್ಕೆ ಕ್ರಮ
ಈ ಹಿಂದೆ ಗೋಧಿ ಬೆಲೆ ಏರಿಕೆಯಾಗಿದೆ. ಈ ಸಂದರ್ಭ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮಕೈಗೊಂಡಿದೆ. ಒಎಂಎಸ್‌ಎಸ್ ಅಡಿಯಲ್ಲಿ ಸ್ಟಾಕ್‌ನಿಂದ ಮೂರು ಮಿಲಿಯನ್ ಟನ್ ಗೋಧಿಯನ್ನು ಇ-ಹರಾಜು ಇಲ್ಲದೆ ಈ ಸಂಸ್ಥೆಗಳಿಗೆ ನೀಡಲಾಗುತ್ತದೆ. ತಲಾ ಒಂದು ಲಕ್ಷ ಟನ್‌ಗಳನ್ನು ಕೇಂದ್ರೀಯ ಭಂಡಾರ, ಎನ್‌ಎಎಫ್‌ಇಡಿ ಮತ್ತು 50,000 ಟನ್‌ಗಳನ್ನು ಎನ್‌ಸಿಸಿಎಫ್‌ಗೆ ಹಂಚಿಕೆ ಮಾಡಲಾಗುತ್ತದೆ. ಈ ಗೋಧಿಯನ್ನು ಹಿಟ್ಟಾಗಿಸಿ ಪ್ರತಿ ಕೆಜಿಗೆ 29.50 ರೂ.ಗೆ ನಿಗದಿತ ಬೆಲೆಗೆ ಮಾರಾಟ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 38 ರೂಪಾಯಿ ಆಗಿದೆ. ಆದರೆ ಈ ಬೆಲೆಗಿಂತ ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯವಾಗುವ ಕಾರಣ ಜನರಿಗೆ ಸಹಾಯವಾಗಲಿದೆ.
ಭಾರತದ ದೇಶೀಯ ಉತ್ಪಾದನೆ ಕುಸಿಯುತ್ತಿದ್ದು, ಇದರಿಂದ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗಿದೆ. ಹಿಟ್ಟಿನ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಕಡಿಮೆ ಬೆಲೆಗೆ ಜನರಿಗೆ ಗೋಧಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಕ್ರಮಕೈಗೊಂಡಿದೆ. ಈ ನಿರ್ಧಾರದಿಂದಾಗಿ ಬೆಲೆ ಏರಿಕೆಯಿಂದಾಗಿ ಉಂಟಾಗುವ ಆರ್ಥಿಕ ಒತ್ತಡವನ್ನು ಕಡಿಮೆ ಆಗಲಿದೆ. ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವ ಸರ್ಕಾರದ ಪ್ರಯತ್ನಗಳು ಜನರಿಗೆ ಸಹಾಯಕವಾಗಲಿದೆ.


Click it and Unblock the Notifications