ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟವು (ಇಪಿಎಫ್ ಒ) ಪ್ರಸಕ್ತ ಆರ್ಥಿಕ ವರ್ಷದಲ್ಲಿ 8.50 ಪರ್ಸೆಂಟ್ ಬಡ್ಡಿ ದರವನ್ನು ಪಾವತಿಸಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವರ್ ಗುರುವಾರ ಹೇಳಿದ್ದಾರೆ. ಈ ಮೂಲಕ ಹಿಂದೆ ದೊರೆಯುತ್ತಿದ್ದ 8.65 ಪರ್ಸೆಂಟ್ ಬಡ್ಡಿದರದಲ್ಲಿ 0.15 ಪರ್ಸೆಂಟ್ ಇಳಿಕೆಯಾದಂತೆ ಆಗುತ್ತದೆ. 2018-19ರ ಆರ್ಥಿಕ ವರ್ಷದಲ್ಲಿ 8.65 ಪರ್ಸೆಂಟ್ ಪಾವತಿ ಮಾಡಲಾಗಿತ್ತು.
ಬಡ್ಡಿ ಇಳಿಕೆ ಮಾಡುವ ನಿರ್ಧಾರದಿಂದ ಭವಿಷ್ಯ ನಿಧಿ ಯೋಜನೆಯ ಆರು ಕೋಟಿಗೂ ಹೆಚ್ಚಿನ ಚಂದಾದಾರರ ಮೇಲೆ ಪರಿಣಾಮ ಆಗಲಿದೆ. "ದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ (ಸಿಬಿಟಿ) ಕಾರ್ಮಿಕರ ಭವಿಷ್ಯ ನಿಧಿ ದರವನ್ನು ಇಳಿಕೆ ಮಾಡಲು ನಿರ್ಧರಿಸಿದೆ" ಎಂದು ಗಂಗ್ವರ್ ಅವರು ಹೇಳಿದ್ದಾರೆ.
ಅಂದ ಹಾಗೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟದ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಇರುವುದು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಗೆ. ಇಪಿಎಫ್ ಬಡ್ಡಿ ದರ 8.50 ಪರ್ಸೆಂಟ್ ಗೆ ಇಳಿಕೆ ಆಗುತ್ತಿರುವುದು ಇದೇ ಮೊದಲು. ಈ ಹಿಂದೆ 2012-13ನೇ ಸಾಲಿನಲ್ಲಿ ಬಡ್ಡಿ ದರ ಇಳಿಕೆ ಆಗಿತ್ತು.

ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಒಪ್ಪಿಗೆ ನೀಡಿದ ಮೇಲೆ ಆ ಪ್ರಸ್ತಾವವನ್ನು ಕೇಂದ್ರ ಹಣಕಾಸು ಸಚಿವಾಲಯದ ಮಂಜೂರಾತಿಗಾಗಿ ಕಳುಹಿಸಲಾಗುತ್ತದೆ. ಸಚಿವಾಲಯವು ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರದ ಪಿಎಫ್ ಚಂದಾದಾರರ ಖಾತೆಗಳಿಗೆ ಹೊಸ ಬಡ್ಡಿ ದರದಲ್ಲಿ ಮೊತ್ತ ಜಮೆ ಆಗುತ್ತದೆ.
2017-18ನೇ ಸಾಲಿನಲ್ಲಿ ಬಡ್ಡಿ ದರವನ್ನು 8.55 ಪರ್ಸೆಂಟ್ ಗೆ ನಿಗದಿ ಮಾಡಲಾಗಿತ್ತು. ಆ ಸಮಯದಲ್ಲಿ ಅದು 5 ವರ್ಷಗಳಲ್ಲೇ ಕನಿಷ್ಠ ಬಡ್ಡಿ ದರವಾಗಿತ್ತು. 2015-16ನೇ ಸಾಲಿನಲ್ಲಿ ವಾರ್ಷಿಕ 8.8 ಪರ್ಸೆಂಟ್ ದರ ನಿಗದಿ ಮಾಡಲಾಗಿತ್ತು. ಅದು ಕಳೆದ ದಶಕದಲ್ಲಿನ ದಾಖಲೆ ಬಡ್ಡಿದರವಾಗಿ ಉಳಿದುಕೊಂಡಿದೆ.
ವೇತನ ಪಡೆಯುವ ಪಿಎಫ್ ಚಂದಾದಾರರ ಬಡ್ಡಿ ದರವನ್ನು ಸದ್ಯಕ್ಕೆ ಸರ್ಕಾರವು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸುತ್ತದೆ.


Click it and Unblock the Notifications