ಈ ಬಾರಿ ರಜಾ ದಿನಕ್ಕೆ ಯುರೋ ಪ್ರವಾಸ ಮಾಡಬೇಕು ಅಂದುಕೊಂಡಿದ್ದರೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಶೆಂಜೆನ್ ವೀಸಾ ಶುಲ್ಕ 14 ವರ್ಷದ ನಂತರ ಹೆಚ್ಚು ಮಾಡಿದ್ದು, 60 ಯುರೋದಿಂದ 80 ಯುರೋಗೆ ಏರಿಸಲಾಗಿದೆ. ಶೆಂಜೆನ್ ವೀಸಾ ಅಂದರೆ ಅಲ್ಪಾವಧಿ ವೀಸಾ. ಪ್ರವಾಸ ಅಥವಾ ವಾಣಿಜ್ಯ ಉದ್ದೇಶಕ್ಕೆ ಒಬ್ಬ ವ್ಯಕ್ತಿ ಈ ಶೆಂಜೆನ್ ಪ್ರದೇಶದಲ್ಲಿ ತೊಂಬತ್ತು ದಿನದ ತನಕ ಇರಬಹುದು.
ಆಸ್ಟ್ರಿಯಾ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್ ಸೇರಿದಂತೆ ಯುರೋಪಿಯನ್ ದೇಶಗಳಿಗೆ ಶೆಂಜೆನ್ ವೀಸಾ ಬೇಕಾಗುತ್ತದೆ. ಯುರೋಪಿಯನ್ ಒಕ್ಕೂಟದಲ್ಲಿ ಇರುವ ದೇಶಗಳನ್ನು ಹೊರತುಪಡಿಸಿ, ಭಾರತ ಸೇರಿದಂತೆ ಇತರ ದೇಶಗಳಿಗೆ ಈ ವೀಸಾ ಶುಲ್ಕ ಅನ್ವಯ ಆಗುತ್ತದೆ. ಈ ಹೊಸ ವೀಸಾ ಶುಲ್ಕವು ಫೆಬ್ರವರಿ ಎರಡನೇ ತಾರೀಕಿನಿಂದ ಜಾರಿಗೆ ಬಂದಿದೆ.
ಆರರಿಂದ ಹನ್ನೆರಡನೇ ವಯಸ್ಸಿನ ತನಕದ ಮಕ್ಕಳ ವೀಸಾ ಶುಲ್ಕವನ್ನು ಮೂವತ್ತೈದರಿಂದ ನಲವತ್ತು ಯುರೋಗೆ ಏರಿಸಲಾಗಿದೆ. ಆರು ವರ್ಷ ತನಕದ ಮಕ್ಕಳಿಗೆ ಯಾವುದೇ ವೀಸಾ ಶುಲ್ಕ ಇರುವುದಿಲ್ಲ. ಇದೀಗ ಶೆಂಜೆನ್ ವೀಸಾದವನ್ನು ಸಹ ಪುನರ್ ರೂಪಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದ ವೀಸಾ ಶುಲ್ಕವನ್ನು ಹೋಲಿಸಿದರೆ ಇದು ಕಡಿಮೆ ಎನ್ನಲಾಗಿದೆ.

ವಿಶ್ವದಾದ್ಯಂತ ರಾಯಭಾರ ಸಹಾಯ ನೀಡಲು, ಐಟಿ ಸಲಕರಣೆಗಳನ್ನು ಮೇಲ್ದರ್ಜೆಗೆ ಏರಿಸಲು, ವೀಸಾ ಅರ್ಜಿದಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಇದರಿಂದ ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ. ಟೂರ್ ಅಪರೇಟರ್ ಮೂಲಕ ವಿದೇಶ ಪ್ರವಾಸಕ್ಕೆ ತೆರಳಿದರೆ ಐದು ಪರ್ಸೆಂಟ್ ತೆರಿಗೆಯನ್ನು ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.


Click it and Unblock the Notifications