ಬೆಂಗಳೂರು, ಮಾರ್ಚ್ 29: ಏ. 26ರಂದು ನಡೆಯುವ ರಾಜ್ಯದ 14 ಲೋಕ ಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾ.28 ರಿಂದ ಆರಂಭವಾಗಿದ್ದು, ಇದರೊಂದಿಗೆ ರಾಜ್ಯದ ಚುನಾವಣಾ ಕಣ ರಂಗೇರಿದೆ. ಇನ್ನು ನಾಮಪತ್ರ ಸಲ್ಲಿಕೆಯ ಮೊದಲ ದಿನ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾಗಿರುವ ಹಾಸನ ಜಿಲ್ಲಾಧಿಕಾರಿ ಅವರಿಗೆ ಪ್ರಜ್ವಲ್ ರೇವಣ್ಣ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
2019 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಸಂಸತ್ ಮೆಟ್ಟಿಲೇರಿದ ಪ್ರಜ್ವಲ್ ರೇವಣ್ಣ ಇಂದು ಸಲ್ಲಿಸಿದ ನಾಮಪತ್ರದಲ್ಲಿ 40.84 ಕೋಟಿ ರೂ. ಮೌಲ್ಯದ ಸಂಪತ್ತು ಇರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದರಲ್ಲಿ 5.44 ಕೋಟಿ ರೂ. ಮೊತ್ತದ ಚರಾಸ್ತಿ ಹಾಗೂ 35.40 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಸೇರಿದೆ.

ಹಾಸನ ಕ್ಷೇತ್ರದ ಹಾಲಿ ಸಂಸದರಾಗಿರುವ ಪ್ರಜ್ವಲ್ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ BE - ಮೆಕ್ಯಾನಿಕಲ್ ಪದವಿ ಪಡೆದಿದ್ದು, ಕೃಷಿ ಮತ್ತು ಉದ್ಯಮ ತಮ್ಮ ಆದಾಯದ ಮೂಲ ಎಂದು ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ 2018-19ರಲ್ಲಿ ತಮ್ಮ ಸಾಮಾನ್ಯ ಆದಾಯ 6.48 ಲಕ್ಷ ರೂ. ಹಾಗೂ ಕೃಷಿ ಆದಾಯ 26.98 ಲಕ್ಷ ರೂ. ಎಂದು ಘೋಷಿಸಿದ್ದಾರೆ. 2022-23ರಲ್ಲಿ 36.14 ಲಕ್ಷ ರೂ. ಸಾಮಾನ್ಯ ಆದಾಯ ಹಾಗೂ 42.41 ಲಕ್ಷ ರೂ. ಕೃಷಿ ಆದಾಯ ಗಳಿಸಿರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಸಾಲ ಪಡೆದಿರುವ ವಿವರ:
ಪ್ರಜ್ವಲ್ ರೇವಣ್ಣ 4.48 ಕೋಟಿ ರೂ. ಸಾಲ ಹೊಂದಿದ್ದು, ತಂದೆ ರೇವಣ್ಣ ಅವರಿಂದ 86.21 ಲಕ್ಷ ರೂ., ಕುಪೇಂದ್ರ ರೆಡ್ಡಿಯಿಂದ 1 ಕೋಟಿ ರೂ. , ಡಾ ಸಿಎನ್ ಮಂಜುನಾಥ್ ಪತ್ನಿ ಅನುಸೂಯಾ ಅವರಿಂದ 22 ಲಕ್ಷ ರೂ. ಸಾಲವನ್ನು ಪಡೆದಿದ್ದಾರೆ. 3.04 ಕೋಟಿ ರೂ. ತೆರಿಗೆ ಸರ್ಕಾರಕ್ಕೆ ಬಾಕಿ ಇದೆ.
ಸಾಲ ನೀಡಿರುವ ವಿವರ:
ಪ್ರಜ್ವಲ್ ರೇವಣ್ಣ ತಾವು ಸಾಲ ಪಡೆದಿರುವುದಲ್ಲದೇ, ಅಜ್ಜಿ ಚನ್ನಮ್ಮ ದೇವೇಗೌಡರಿಗೆ 23 ಲಕ್ಷ ರೂ. ಸಾಲ ನೀಡಿದ್ದಾರೆ. ತಮ್ಮ ಸಹೋದರ ಸೂರಜ್ ರೇವಣ್ಣನಿಗೆ 1.56 ಕೋಟಿ ರೂ. ಸಾಲ ನೀಡಿದ್ದಾರೆ.
ಆಸ್ತಿಯ ವಿವರ:
20 ಕೃಷಿ ಭೂಮಿ, 3 ಕೃಷಿಯೇತರ ಜಮೀನು, 2 ವಾಣಿಜ್ಯ ಸಂಕೀರ್ಣ ಸೇರಿ 35.40 ಕೋಟಿ ರೂ. ಮೊತ್ತದ ಸ್ಥಿರಾಸ್ತಿಯನ್ನೂ ಹೊಂದಿರುವ ಸಂಸದರು 17.48 ಲಕ್ಷ ರೂ. ಮೌಲ್ಯದ 23 ಕೆಜಿ ಬೆಳ್ಳಿ, 67.26 ಲಕ್ಷ ರೂ. ಮೌಲ್ಯ 1.1 ಕೆಜಿ ಬಂಗಾರ, 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, 2.68 ಲಕ್ಷ ರೂ. ಮೌಲ್ಯದ ರೈಫಲ್, ಹಾಗೂ 1.04 ಲಕ್ಷ ರೂ. ಮೌಲ್ಯದ ಪಿಸ್ತೂಲ್ ನ್ನು ಹೊಂದಿದ್ದಾರೆ. ಇದಲ್ಲದೇ ಸುಮಾರು 23.25 ಲಕ್ಷ ರೂ. ಮೌಲ್ಯದ 31 ಜಾನುವಾರು, 2.40 ಲಕ್ಷ ರೂ. ಮೌಲ್ಯದ 4 ಹೋರಿಗಳನ್ನೂ ಹೊಂದಿದ್ದಾರೆ.
ನಗದು ಹಣ 9.29 ಲಕ್ಷ ರೂ. ತಮ್ಮ ಕೈಯಲ್ಲಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ಹೂಡಿಕೆ, ನೀಡಿದ ಸಾಲ, ವಾಹನಗಳ ಮೌಲ್ಯ ಸೇರಿ ಒಟ್ಟು 5.44 ಕೋಟಿ ರೂ. ಮೊತ್ತದ ಚರಾಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.


Click it and Unblock the Notifications