ನವದೆಹಲಿ, ಏಪ್ರಿಲ್ 7: ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಸಂಬಂಧ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ದಿನದಿಂದ ದಿನಕ್ಕೆ ಸೂಕ್ಷ್ಮವಾಗುತ್ತಿದೆ. ಹೀಗಾಗಿ ಎರಡೂ ದೇಶಗಳ ನಡುವೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಯಲಿ ಎಂದು ಹಲವು ದೇಶಗಳು ಸಲಹೆ ನೀಡುತ್ತಿವೆ. ಇದೇ ವೇಳೆ ಮಾಲ್ಡೀವ್ಸ್ ಭಾರತದ ಬಳಿ ಅಕ್ಕಿ ಮತ್ತು ಅಗತ್ಯ ವಸ್ತುಗಳು ಬೇಕು ಎಂದು ಬೇಡಿಕೆ ಇಟ್ಟಿದ್ದು ಅದಕ್ಕೆ ಭಾರತ ಕೂಡ ಅಸ್ತು ಎಂದಿದೆ.
ಭಾರತ ವಿರೋಧಿ ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ ಮಾಲ್ಡೀವ್ಸ್ ವಿಚಾರದಲ್ಲಿ ಭಾರತ ಅನುಕಂಪ ಮುಂದುವರಿಸಿದೆ. ವಿವಿಧ ಆಹಾರ ವಸ್ತುಗಳ ರಫ್ತಿಗೆ ನಿರ್ಬಂಧ ಇದ್ದರೂ, ಮಾಲ್ಡೀವ್ಸ್ ದೇಶಕ್ಕೆ ಭಾರತ ವಿನಾಯಿತಿ ನೀಡಿದೆ. ಸಕ್ಕರೆ, ಗೋಧಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್ ದೇಶಕ್ಕೆ ರಫ್ತು ಮಾಡಲು ಭಾರತದ ಸರ್ಕಾರ ಅನುಮತಿಯನ್ನು ನೀಡಿದೆ. ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು, ಬೇಳೆ ಕಾಳು ಇತ್ಯಾದಿ ಅಗತ್ಯ ಆಹಾರ ವಸ್ತುಗಳಿಗೂ ಶೇಕಡಾ 5ರಷ್ಟು ರಫ್ತು ಕೋಟಾ ಹೆಚ್ಚಿಸಲಾಗಿದೆ.

ಭಾರತ ಸಹಾಯ ಮಾಡಿದ್ದು ಏಕೆ?
ಮಾಲ್ಡೀವ್ಸ್ ಸರ್ಕಾರದ ಮನವಿ ಹಿನ್ನೆಲೆಯಲ್ಲಿ, 2024 ಹಾಗೂ 2025 ರ ವರ್ಷದಲ್ಲಿ ನಿರ್ದಿಷ್ಟ ಪ್ರಮಾಣದ ಅಗತ್ಯ ವಸ್ತು ರಫ್ತಿಗೆ ಈಗ ಅನುಮತಿ ನೀಡಿದೆ ಭಾರತ. ಈ ಮೂಲಕ ನೆರೆಯ ದೇಶವಾಗಿದ್ದರೂ ಭಾರತದ ವಿರುದ್ಧವೇ ಮಾತನಾಡುತ್ತಿದ್ದ ಮಾಲ್ಡೀವ್ಸ್‌ಗೆ ಸಹಾಯ ಸಿಕ್ಕಿದೆ. ಈಗಾಗಲೇ ಭಾರತ ಸಾವಿರಾರು ಕೋಟಿ ರೂಪಾಯಿ ಸಾಲವನ್ನ ನೀಡದೆ. ಈಗ ಅಗತ್ಯ ವಸ್ತುಗಳನ್ನು ರಫ್ತು ಮಾಡುವಲ್ಲಿ ಕೂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಭಾರತ & ಮಾಲ್ಡೀವ್ಸ್ ಸಂಬಂಧ ಸರಿಯಾಗುತ್ತಾ ಎಂಬ ಕುತೂಹಲ ಕೂಡ ಕೆರಳಿದೆ. 1981 ರಲ್ಲಿ ಚಾಲನೆಗೆ ಬಂದ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ನಿಷೇಧ ಇದ್ದರೂ ರಫ್ತು ಪಕ್ಕಾ!
ಭಾರತದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆ ತಪ್ಪಿಸಲು ಹಲವು ಬೆಳೆ ರಫ್ತಿಗೆ ನಿರ್ಬಂಧ ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಿದ್ದಾಗಲೇ ಮಾಲ್ಡೀವ್ಸ್ ದೇಶಕ್ಕೆ ವಿನಾಯಿತಿ ನೀಡಿರುವ ಭಾರತ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ. ಹೀಗೆ ಸಂಕಷ್ಟದ ಸಮಯದಲ್ಲಿ ಮಾಲ್ಡೀವ್ಸ್ ದೇಶಕ್ಕೆ ಹೊಸ ಹುಮ್ಮಸ್ಸು ಸಿಕ್ಕಂತಾಗಿದೆ. ಅಕ್ಕಿ & ಸಕ್ಕರೆ ಸೇರಿ ಈರುಳ್ಳಿ ರಫ್ತನ್ನು 2023 ರಿಂದಲೂ ಮುಂದುವರಿಸುತ್ತಿದೆ. ಆಹಾರ ಪದಾರ್ಥಗಳು ಮಾತ್ರವಲ್ಲ ಮಾಲ್ಡೀವ್ಸ್ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬೇಕಾದ ಅವಶ್ಯಕ ವಸ್ತುಗಳ ಕೋಟಾ ಕೂಡ ಏರಿಕೆ ಕಂಡಿದೆ. ನದಿ ಮರಳು & ಕಲ್ಲುಗಳ ಕೋಟಾ ಶೇಕಡಾ 25ರಷ್ಟು ಹೆಚ್ಚಿಸಲು ಇದೀಗ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇನ್ನು ಮಾಲ್ಡೀವ್ಸ್ ಅಧ್ಯಕ್ಷ ಸೇರಿ ಮಾಲ್ಡೀವ್ಸ್‌ನ ಸಚಿವರು, ಸಂಸದರು ಭಾರತದ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಚೀನಾದ ಜೊತೆಗೆ ಮಾಲ್ಡೀವ್ಸ್ ಆಪ್ತವಾಗಿದ್ದು, ಭಾರತದ ಜೊತೆಗೆ ಕಿರಿಕ್ ಮಾಡುತ್ತಿದೆ. ಆದರೂ ಈ ಸಮಯದಲ್ಲಿ ಭಾರತದಿಂದ ಸಹಾಯ ಪಡೆಯುತ್ತಿದೆ.


Click it and Unblock the Notifications