ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಿತ್ ಬೆರೋಜ್ ಗಾರ್ ಯೋಜನಾ ಎಂಬ ಹೆಸರಿನ ಯೋಜನೆ ಶುರು ಮಾಡಿದ್ದು, ಆ ಮೂಲಕ ಪ್ರತಿ ರೇಷನ್ ಕಾರ್ಡ್ ದಾರರಿಗೆ 50 ಸಾವಿರ ರುಪಾಯಿ ಪರಿಹಾರ ಪ್ಯಾಕೇಜ್ ನೀಡಲಿದೆ ಎಂಬ ವದಂತಿ ಹರಿದಾಡುತ್ತಿರುವ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. "ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವದಂತಿ ಸುಳ್ಳು. ಸರ್ಕಾರ ಇಂಥ ಯಾವ ಯೋಜನೆಯನ್ನೂ ಮಾಡಿಲ್ಲ" ಎಂದು ತಿಳಿಸಿದೆ.
ಕೊರೊನಾದಿಂದ ಬಾಧಿತರಾಗಿರುವ ಬಡವರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಾರ್ಚ್ 26ರಂದು 1.7 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು. "rbsy.org" ಎಂಬ ವೆಬ್ ಸೈಟ್ ವೊಂದು, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಿತ್ ಬೆರೋಜ್ ಗಾರ್ ಯೋಜನಾ ಎಂಬ ಹೆಸರಿನ ಯೋಜನೆ ಅಡಿ ಪ್ರತಿ ರೇಷನ್ ಕಾರ್ಡ್ ದಾರರಿಗೆ 50 ಸಾವಿರ ರುಪಾಯಿ ನೀಡಲಿದೆ ಎಂದು ಹೇಳಿದೆ.
40 ಸಾವಿರ ಮಂದಿಗೆ ಹಣ
ಇನ್ನೂ ಮುಂದುವರಿದು, ಈ ಯೋಜನೆ ಕೇವಲ 40 ಸಾವಿರ ಮಂದಿ ಅರ್ಜಿದಾರರಿಗೆ ಎಂದು ಕೂಡ ಹೇಳಲಾಗಿದೆ. ಆನ್ ಲೈನ್ ಮೂಲಕ ಹಣ ವರ್ಗಾವಣೆ ಆಗಲಿದೆ ಎಂದು ತಿಳಿಸಿದ್ದು, ಇದರ ಜತೆಗೆ ವೆಬ್ ಸೈಟ್ ನಲ್ಲಿ ನೋಂದಣಿ ಮಾಡುವಂತೆ ಮಾಹಿತಿಯನ್ನು ನೀಡಲಾಗಿದೆ.
ಪಿಐಬಿಯಿಂದ ಫ್ಯಾಕ್ಟ್ ಚೆಕ್
ಪಿಐಬಿಯಿಂದ ಫ್ಯಾಕ್ಟ್ ಚೆಕ್ ಮಾಡಲಾಗಿದೆ. ಭಾರತ ಸರ್ಕಾರವು ಇಂಥ ಯಾವ ಯೋಜನೆಯನ್ನೂ ಆರಂಭಿಸಿಲ್ಲ. ಇಂಥ ಸುಳ್ಳು ಹಾಗೂ ವಂಚನೆ ವೆಬ್ ಸೈಟ್ ಗಳ ಬಗ್ಗೆ ಎಚ್ಚರಿಕೆ ಇರಲಿ. ಇವುಗಳು ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಶುಲ್ಕ ವಸೂಲಿ ಮಾಡುತ್ತವೆ ಎಂದು ಎಚ್ಚರಿಕೆಯನ್ನು ಟ್ವೀಟ್ ಮೂಲಕ ನೀಡಲಾಗಿದೆ.
ಪಿಎಂ ಮಾಸ್ಕ್ ಯೋಜನಾ ಎಂಬ ಸುಳ್ಳು ಮಾಹಿತಿ
ಯಾವಾಗ ಈ ವೆಬ್ ಸೈಟ್ ನ ಬಂಡವಾಳ ಬಯಲಿಗೆ ಬಂತೋ ಆ ನಂತರ ಅದು ಸಕ್ರಿಯವಾಗಿಲ್ಲ. ಆದರೂ ಉಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಲಾಗಿದೆ. ಇದೇ ರೀತಿ ಸೋಷಿಯಲ್ ಮೀಡಿಯಾಗಳಲ್ಲಿ "ಪಿಎಂ ಮಾಸ್ಕ್ ಯೋಜನಾ" ಎಂಬ ಸುಳ್ಳು ಮಾಹಿತಿ ಹರಿದಾಡಿತ್ತು. ಆ ನಂತರ, ಅದೆಲ್ಲ ಸುಳ್ಳು ಎಂಬುದನ್ನು ಫ್ಯಾಕ್ಟ್ ಚೆಕ್ ಮೂಲಕವೇ ಸರ್ಕಾರ ಸ್ಪಷ್ಟಪಡಿಸಿತ್ತು. ಮಾಸ್ಕ್ ಅನ್ನು ಉಚಿತವಾಗಿ ನೀಡುವ ಯಾವುದೇ ಯೋಜನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದಿತ್ತು.


Click it and Unblock the Notifications