ಇ ಕಾಮರ್ಸ್ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಉತ್ಪನ್ನಗಳು ಯಾವ ದೇಶದಲ್ಲಿ ತಯಾರಾಗಿದ್ದಾವೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಈಗ ಇ ಕಾಮರ್ಸ್ ಕಂಪನಿಗಳು ಆದೇಶವನ್ನು ಜಾರಿಗೆ ತರಲು ಕೇಂದ್ರ ಗಡುವು ಕೂಡ ನೀಡಿದೆ.
ಇದೀಗ ಕೇಂದ್ರ ಸರ್ಕಾರ ಇ ಕಾಮರ್ಸ್ ಕಂಪನಿಗಳು ವಿದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳಲ್ಲಿ ಆ ದೇಶದ ಹೆಸರನ್ನು ನಮೂದಿಸದಿದ್ದರೆ ಒಂದು ಲಕ್ಷ ರುಪಾಯಿವರೆಗೆ ದಂಡ ಹಾಗೂ ಜೈಲು ಶಿಕ್ಷೆಯನ್ನು ವಿಧಿಸಲು ಉದ್ದೇಶಿಸಿದೆ.
ವಿದೇಶದಿಂದ ಆಮದಾದ ಉತ್ಪನ್ನಗಳ ಮೇಲೆ ಉತ್ಪನ್ನ ಸಿದ್ದಗೊಂಡ ದೇಶದ ಹೆಸರು ನಮೂದಿಸವುದು ಕಡ್ಡಾಯವಾಗಿರುತ್ತದೆ. ಉಲ್ಲಂಘನೆ ಮಾಡಿದರೆ ಹಂತ ಹಂತವಾಗಿ ದಂಡ ವಿಧಿಸಲಾಗುತ್ತದೆ.
ಮೊದಲ ಬಾರಿಗೆ 25 ಸಾವಿರ ರುಪಾಯಿ ದಂಡ
ಮೊದಲ ಬಾರಿಯ ನಿಮಯ ಉಲ್ಲಂಘನೆಗೆ 25 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ 50 ಸಾವಿರ ರುಪಾಯಿ ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘನೆ ಮಾಡಿದರೆ ಒಂದು ಲಕ್ಷರ ರುಪಾಯಿಯನ್ನು ದಂಡವಾಗಿ ಇ ಕಾಮರ್ಸ್ ಕಂಪನಿಗಳು ಕಟ್ಟಬೇಕಾಗುತ್ತದೆ.
ಆಗಸ್ಟ್ 1 ರೊಳಗೆ
ಇ ಕಾಮರ್ಸ್ ಕಂಪನಿಗಳು ಆಗಸ್ಟ್ 1 ರೊಳಗೆ ಉತ್ಪನ್ನಗಳ ಮಾಹಿತಿ ಜೊತೆಗೆ ಆ ಉತ್ಪನ್ನ ತಯಾರಾಗುವ ದೇಶದ ಹೆಸರಿನ ಲೇಬಲ್ ಹಾಕಬೇಕು ಎಂದು ಆದೇಶ ಮಾಡಿದೆ. ಈಗಾಗಲೇ ಸಂಗ್ರಹಿಸಿರುವ ವಸ್ತುಗಳಿಗೂ ಅಕ್ಟೋಬರ್ 1ರೊಳಗೆ ಮೂಲದ ಬಗ್ಗೆ ಲೇಬಲ್ ಹಚ್ಚಬೇಕು ಎಂದು ತಿಳಿಸಿದೆ. ಈ ಕುರಿತು ಇ ಕಾಮರ್ಸ್ ಕಂಪನಿಗಳೊಂದಿಗೆ ವಾಣಿಜ್ಯ ಇಲಾಖೆ ಸಭೆ ನಡೆಸಿದೆ. ಆದರೆ, ಗಡುವಿಗೆ ಇನ್ನಷ್ಟು ಕಾಲಾವಕಾಶವನ್ನು ಕಂಪನಿಗಳು ಕೇಳಿವೆ ಎಂಬುದು ತಿಳಿದು ಬಂದಿದೆ.
ಕಾಲಾವಕಾಶವನ್ನು ಕಂಪನಿಗಳು ಕೋರಿವೆ
ಅನೇಕ ಉತ್ಪನ್ನಗಳು ಉತ್ಪಾದನೆ ಮತ್ತು ವಿತರಣೆಯ ನಾನಾ ಹಂತಗಳಲ್ಲಿ ಇರುವುದರಿಂದ ಕಾಲಾವಕಾಶವನ್ನು ಕಂಪನಿಗಳು ಕೋರಿವೆ. ಹೀಗಾಗಿ ಅಂತಿಮ ಗಡುವನ್ನು ಸರಕಾರ ಮುಂಬರುವ ದಿನಗಳಲ್ಲಿ ವಿಧಿಸಲಿದೆ.
ದಾಖಲಿಸಬೇಕಾಗಿಲ್ಲ
ನಿಯಮಾವಳಿಗಳ ಪ್ರಕಾರ ಪ್ಯಾಕೇಜ್ ಮಾಡದೆ ಮಾರುವ ಪದಾರ್ಥಗಳ ಮೇಲೆ ಯಾವ ರಾಷ್ಟ್ರದ ಮೂಲ ಎಂದು ದಾಖಲಿಸಬೇಕಾಗಿಲ್ಲ. ಬದಲಾದ ಸನ್ನಿವೇಶದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಕೈಗಾರಿಕಾಭಿವೃದ್ಧಿ ಮಂಡಳಿ (ಡಿಪಿಐಐಟಿ) ಪರಿಶೀಲಿಸಲಿದೆ. ಫ್ಲಿಪ್‌ಕಾರ್ಟ್ ಆಗಸ್ಟ್ 15ರ ತನಕ ಹಾಗೂ ಅಮೆಜಾನ್ 2-3 ತಿಂಗಳು ಕಾಲಾವಕಾಶ ಕೋರಿದೆ ಎಂದು ವರದಿಯಾಗಿದೆ.


Click it and Unblock the Notifications