ರೈತರಿಂದ ನೇರವಾಗಿ ಗ್ರಾಹಕರಿಗೆ ತೋಟಗಾರಿಕೆ ಉತ್ಪನ್ನ ಲಭಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆರಂಭಿಸಿರುವ ತೋಟಗಾರಿಕಾ ಉತ್ಪಾದಕರ ಕೋಅಪರೇಶನ್ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಸೊಸೈಟಿ ಲಿಮಿಟೆಡ್ (ಹಾಪ್ ಕಾಮ್ಸ್) ಗೆ ಗ್ರಹಣ ಎದುರಾಗಿದ್ದು, ಬೆಂಗಳೂರಿನಲ್ಲಿ ಹಾಪ್ಕಾಮ್ಸ್ ಗೆ ಸದ್ಯ ಹಣಕಾಸಿನ ನಷ್ಟ, ಮೂಲಸೌಕರ್ಯ ಸಮಸ್ಯೆಗಳು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಮಳಿಗೆಗಳು ಮುಚ್ಚಲು ಆರಂಭಿಸಿದೆ. ಒಂದು ಹಂತದಲ್ಲಿ ಸುಮಾರು 316 ರಷ್ಟು ಇದ್ದ ಹಾಪ್ಕಾಮ್ಸ್ ಮಳಿಗೆಗಳು ಸದ್ಯ 200ಕ್ಕೆ ಇಳಿದಿದೆ. ಇದರ ನಡುವೆಯೂ ಹಾಪ್ ಕಾಮ್ಸ್ ನ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ.
ಮಧ್ಯವರ್ತಿಗಳ ಸಮಸ್ಯೆ ನಿವಾರಿಸಿದ್ದ ಹಾಪ್‌ಕಾಮ್ಸ್
ಒಂದು ಕಾಲದಲ್ಲಿ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಸೊಸೈಟಿ ಲಿಮಿಟೆಡ್ ಬೆಂಗಳೂರಿನಲ್ಲಿ ಜನಪ್ರಿಯವಾದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಪೂರೈಸುವ ಸಂಸ್ಥೆಯಾಗಿತ್ತು. ಮಧ್ಯವರ್ತಿಗಳ ಕಿರುಕುಳ ತಪ್ಪಿಸಿ, ಕೃಷಿ-ತಾಜಾ ಉತ್ಪನ್ನಗಳನ್ನು ನೀಡುವ ಗುರಿಯೊಂದಿಗೆ ಹಾಪ್ ಕಾಮ್ಸ್ ಆರಂಭಿಸಲಾಗಿತ್ತು. ಅಲ್ಲದೆ ಹಾಪ್ ಕಾಮ್ಸ್ ಒಂದು ಕಾಲದಲ್ಲಿ ಬೆಂಗಳೂರಿನ ಪ್ರಮುಖ ಕೃಷಿ ಪೂರೈಕೆ ವಿಭಾಗದಲ್ಲಿ ಪ್ರಮುಖ ಸಂಸ್ಥೆಯಾಗಿ ರೂಪುಗೊಂಡಿತ್ತು. ಅದೂ ಅಲ್ಲದೆ ಸರ್ಕಾರವೇ ಇದನ್ನು ನಿಯಂತ್ರಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಕೂಡ ಪಾತ್ರವಾಗಿತ್ತು. ಆದರೆ ಸದ್ಯ ಹಾಪ್ ಕಾಮ್ಸ್ ಮಳಿಗೆಗಳ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಗ್ರಾಹಕರಿಗೆ ಶಾಕ್ ನೀಡಿದೆ.

ಕುಸಿತಕ್ಕೆ ಕಾರಣವೇನು?
ಆರ್ಥಿಕ ನಷ್ಟ, ಸೂಕ್ತ ಮೂಲಸೌಕರ್ಯ ಕೊರತೆ, ಸಿಬ್ಬಂದಿಯ ಸಂಖ್ಯೆಯಲ್ಲಿ ಇಳಿಮುಖ, ಅಧಿಕಾರಿಗಳ ಕನಿಷ್ಠ ಗಮನ ಸೇರಿದಂತೆ ಹಲವು ಅಂಶಗಳಿಂದ ಹಾಪ್‌ಕಾಮ್ಸ್ ಮಳಿಗೆಗಳ ಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ. ಅದೂ ಅಲ್ಲದೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಯಿಂದಲೂ ಹಾಪ್ಕಾಮ್ಸ್ ಮಳಿಗೆಗಳ ಕುಸಿತಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಲ್ಲಿ ರಸ್ತೆ ವಿಸ್ತರಣೆ, ಮೇಲ್ಸೇತುವೆಗಳು ಮತ್ತು ಮೆಟ್ರೋ ಕಾಮಗಾರಿಗಳಂಥ ನಡೆಯುತ್ತಿರುವ ನಿರ್ಮಾಣ ಯೋಜನೆಗಳಿಂದಾಗಿ ಅನೇಕ ಮಳಿಗೆಗಳು ಮುಚ್ಚಲ್ಪಟ್ಟಿದೆ. ಅದೂ ಅಲ್ಲದೆ ಸದ್ಯ ಮಳಿಗೆಗಳಲ್ಲಿ ಸಿಬ್ಬಂದಿ ಕೊರೆತೆ ಕೂಡ ಮಳಿಗೆಗಳ ಮುಚ್ಚಲು ಕಾರಣವಾಗುತ್ತಿದೆ ಎಂದು ವರದಿ ತಿಳಿಸಿದೆ. ಮೂಲಗಳ ಪ್ರಕಾರ ಪ್ರತೀ ತಿಂಗಳು ಸರಾಸರಿ ಒಂದೆರಡು ಮಳಿಗೆಗಳು ಮುಚ್ಚುತ್ತಿವೆ ಎಂದು ಹಾಪ್‌ಕಾಮ್ಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅದೂ ಅಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವ ಕೂಡ ಎದ್ದು ಕಾಣುತ್ತಿದೆ ಎಂದರೆ ತಪ್ಪಾಗಲಾರದು. ಹಲವಾರು ವರ್ಷಗಳಿಂದ ಸಂಸ್ಥೆಯು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳದ ಕಾರಣ ಸಿಬ್ಬಂದಿ ಕೊರತೆಯು ಕೂಡ ಸದ್ಯ ಮಳಿಗೆಗಳ ಮುಚ್ಚಲು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
900 ಉದ್ಯೋಗಿಗಳನ್ನು ಹೊಂದಿದ್ದ ಹಾಪ್ ಕಾಮ್ಸ್
ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಹಾಪ್ ಕಾಮ್ಸ್ ಉತ್ತುಂಗದಲ್ಲಿದ್ದು, ಆ ಸಮಯದಲ್ಲಿ ಸುಮಾರು 900 ಉದ್ಯೋಗಿಗಳನ್ನು ಹೊಂದಿತ್ತು. ಆದರೆ ಹಲವು ಕಾರಣಗಳಿಂದಾಗಿ ಸದ್ಯ ಈ ಸಂಖ್ಯೆ 360ಕ್ಕೆ ಇಳಿದಿದೆ. ಸದ್ಯ ಉಳಿದಿರುವ 360 ಕಾರ್ಮಿಕರ ಪೈಕಿ ಹಲವರು ನಿವೃತ್ತಿಯ ಸಮೀಪದಲ್ಲಿದ್ದಾರೆ.
ಪುನಶ್ಚೇತನಕ್ಕೆ ಮುಂದಾದ ಹಾಪ್ ಕಾಮ್ಸ್
ಉದ್ಯೋಗಿಗಳ ಕೊರತೆಯ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯು ಮಳಿಗೆಗಳ ಪುನಶ್ಚೇತನಕ್ಕೆ ಸಹಾಯ ಮಾಡಲು 50 ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಿದೆ. ಅದೂ ಅಲ್ಲದೆ ಸಂಸ್ಥೆಯು ಕೆಲವು ಮುಚ್ಚಿದ ಔಟ್‌ಲೆಟ್‌ಗಳನ್ನು ಪುನಹ ತೆರೆಯಲು ಯೋಜಿಸಿದೆ ಮತ್ತು ಹೆಚ್ಚಿನ ಬೇಡಿಕೆಯ ಪ್ರದೇಶಗಳಲ್ಲಿ ಹೊಸದನ್ನು ಸ್ಥಾಪಿಸಲು ಯೋಜಿಸಿದೆ ಎಂದು ವರದಿ ತಿಳಿಸಿದೆ.
ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಗ್ರಾಹಕರಿಗೆ ತಾಜಾ ತರಕಾರಿ ಹಾಗೂ ಹಣ್ಣುಗಳ ಪೂರೈಕೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಹಾಪ್ ಕಾಮ್ಸ್ ಸದ್ಯ ಬಹುತೇಕ ಸಂಕಷ್ಟದಲ್ಲಿದೆ. ಆದರೂ ಸಮಸ್ಯೆಗೆ ಸಿಲುಕಿರುವ ಹಾಪ್ ಕಾಮ್ಸ್ ಪುನಶ್ಚೇತನಕ್ಕೆ ಅಧಿಕಾರಿಗಳು ಮುಂದಾಗಿರುವುದು ಉತ್ತಮ ಬೆಳವಣಿಗೆಯೇ ಸರಿ. ಇದರಿಂದ ಗ್ರಾಹಕರು ಹಾಗೂ ರೈತರಿಗೆ ಆಗುವ ಮಧ್ಯವರ್ತಿಗಳ ಸಮಸ್ಯೆಯನ್ನು ನೀಗಿಸಲಿದೆ.
ಹಾಪ್ ಕಾಮ್ಸ್ ಪುನಶ್ವೇತನಕ್ಕೆ ಸರ್ಕಾರ ಮುಂದಾಗಿರುವುದು ಗ್ರಾಹಕರಿಗೆ ಅದರಲ್ಲೂ ರೈತರಿಗೆ ಶುಭಸುದ್ದಿ ನೀಡಿದಂತಾಗಿದೆ. ಮಧ್ಯವರ್ತಿಗಳ ಕಾಟದಿಂದ ಆರ್ಥಿಕ ಸಮಸ್ಯೆ ಕಾಣುತ್ತಿದ್ದ ರೈತರಿಗೆ ಇದೀಗ ಹಾಪ್ ಕಾಮ್ಸ್ ಪುನಶ್ವೇತನದಿಂದ ತಮ್ಮ ಉತ್ಪನ್ನಗಳನ್ನು ನೇರವಾಗಿ ಸರ್ಕಾರ ನಿಯಂತ್ರಿತ ಹಾಪ್ ಕಾಮ್ಸ್‌ಗೆ ನೀಡಲು ಸಾಧ್ಯವಾಗಲಿದೆ. ಇದರಿಂದ ರೈತರಿಗೆ ಇದು ಶುಭಸುದ್ದಿಯಾಗಿದೆ.


Click it and Unblock the Notifications