ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾದ ರಜನೀಶ್ ಕುಮಾರ್ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವಮಾನಿಸಿರುವ ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿದೆ. ಎಸ್ ಬಿಐ ಅನ್ನು "ಹೃದಯಹೀನ ಬ್ಯಾಂಕ್" ಎಂದು ನಿರ್ಮಲಾ ಜರೆದಿರುವುದು ಕೇಳಿಬರುತ್ತದೆ. ಈ ಘಟನೆ ನಡೆದಿರುವುದು ಇತ್ತೀಚೆಗೆ, ಗುವಾಹತಿಯಲ್ಲಿ.
ಆಡಿಯೋ ಕ್ಲಿಪ್ ಹೊರಬರುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಸ್ ಬಿಐನ ಕಾರ್ಯಕ್ರಮದಲ್ಲಿ ಫೆಬ್ರವರಿ 27ನೇ ತಾರೀಕಿನಂದು ಸಚಿವೆ ಭಾಗವಹಿಸಿದ್ದ ವೇಳೆ ರಜನೀಶ್ ಕುಮಾರ್ ಇದ್ದರು. ರಾಜ್ಯ ಸರ್ಕಾರಿ ನೌಕರರು, ಇತರ ಬ್ಯಾಂಕ್ ಗಳ ಮುಖ್ಯಸ್ಥರು ಸಹ ಪಾಲ್ಗೊಂಡಿದ್ದರು.
ನಿಮ್ಮದು ಹೃದಯಹೀನ ಬ್ಯಾಂಕ್
ಟೀ ತೋಟಗಳಲ್ಲಿ ಕೆಲಸ ಮಾಡುವವರಿಗೆ ಸಾಲ ನೀಡದ ಕಾರಣವನ್ನು ಮುಂದೆ ಮಾಡಿಕೊಂಡು, ಬ್ಯಾಂಕ್ ನ ವೈಫಲ್ಯಕ್ಕೆ ರಜನೀಶ್ ಕಾರಣ ಎಂದು ಸಾರ್ವಜನಿಕವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. "ನಿಮ್ಮದು ಅತಿ ದೊಡ್ಡ ಬ್ಯಾಂಕ್ ಅಂತ ಹೇಳಿಕೊಳ್ಳಬೇಡಿ. ನಿಮ್ಮದು ಹೃದಯಹೀನ ಬ್ಯಾಂಕ್. ಯಾವ ಎಸ್ ಎಲ್ ಬಿಸಿಗಳೂ ಈ ರೀತಿ ಕಾರ್ಯ ನಿರ್ವಹಿಸಲ್ಲ" ಎಂದು ಹೇಳಿರುವುದಾಗಿ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಕೇಳಿಬಂದಿದೆ. "ಇವೆಲ್ಲ ನಡೆಯಲ್ಲ" ಎಂದು ಎರಡು ಬಾರಿ ರಜನೀಶ್ ಗೆ ಹೇಳಿದ್ದಾರೆ.
ಅಸಮರ್ಥತೆ ಮುಚ್ಚಿಡಲು ಆಗಲ್ಲ
ನಾನಿಷ್ಟು ಕಟುವಾಗಿ ಮಾತನಾಡುತ್ತಿರುವುದಕ್ಕೆ ಕ್ಷಮಿಸಿ. ನೀವು ಇಲಾಖೆಗಳನ್ನು ಭೇಟಿ ಮಾಡಿ, ಆ ಇಲಾಖೆಗಳು ಆರ್ ಬಿಐ ಜತೆ ಮಾತನಾಡುವಂತೆ ಮಾಡಬೇಕಿತ್ತು. ಆರ್ ಬಿಐ ಜತೆ ಏನು ಮಾಡಲು ಸಾಧ್ಯವೋ ನಾನು ನೋಡ್ತೀನಿ. ನಿಮ್ಮ ಅಸಮರ್ಥತೆಯನ್ನು ಯಾವುದೂ ಮುಚ್ಚಿಹಾಕಲು ಸಾಧ್ಯವಿಲ್ಲ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ವೈಫಲ್ಯಕ್ಕೆ ನೀವೇ ಸಂಪೂರ್ಣ ಹೊಣೆ
ನಿಮ್ಮ ಅಸಮರ್ಥತೆಯಿಂದ ಹೀಗಾಗಿದೆ. ಎಲ್ಲವೂ ಆಗುತ್ತದೆ ಎಂಬುದನ್ನು ಖಾತ್ರಿ ಪಡಿಸಿ. ಮುಂದಿನ ಗೇಮ್ ಪ್ಲಾನ್ ಏನು, ಎಷ್ಟು ಸಮಯ ಬೇಕು ತಿಳಿಸಿ ಎಂದಿದ್ದಾರೆ ನಿರ್ಮಲಾ. "ಕೆಲವೇ ಸಮಯದಲ್ಲಿ ಮಾಡಲಾಗುವುದು" ಎಂದು ರಜನೀಶ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ, ಎಷ್ಟು ಬೇಗ ಎಂಬುದನ್ನು ತಿಳಿಸಿ ಎಂದಿದ್ದಾರೆ. ಆಗ ರಜನೀಶ್, ಒಂದು ವಾರದಲ್ಲಿ ಎಂದು ಹೇಳಿದ್ದಾರೆ. ಆ ಮಾತಿಗೆ ಸಿಟ್ಟಾದ ನಿರ್ಮಲಾ, ನನಗೆ ಸಮಯ ಹೇಳಿ ತಪ್ಪಿಸಿಕೊಳ್ಳುವುದಕ್ಕೆ ನೋಡಬೇಡಿ ಸರ್. ನೀವು ದೆಹಲಿಯಲ್ಲಿ ನನ್ನನ್ನು ಭೇಟಿಯಾಗಿ. ಇದು ಕೆಲಸದಿಂದ ತಪ್ಪಿಸಿದ್ದೀರಿ. ಈ ವೈಫಲ್ಯಕ್ಕೆ ಸಂಪೂರ್ಣವಾಗಿ ನಿಮ್ಮನ್ನೇ ಹೊಣೆ ಮಾಡುತ್ತೇನೆ. ನಿಮ್ಮ ಜತೆ ಕೂಲಂಕಷವಾಗಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್ ಆಕ್ರೋಶ
ಆರ್ ಬಿಐ ಸುತ್ತೋಲೆ ಬರಬೇಕು ಎಂದು ಹೇಳುತ್ತಾ ಬಹಳ ಚತುರರಂತೆ ನಟಿಸಬೇಡಿ. ನೀವು ಬಹಳ ಹಿರಿಯ ಅಧಿಕಾರಿ ಇರಬಹುದು. ನನ್ನ ಕ್ಷಮಿಸಿ. ನಿಮ್ಮಿಂದಾಗಿ ನನ್ನ, ಭಾರತ ಸರ್ಕಾರದ ಹಾಗೂ ಅಸ್ಸಾಂ ಸರ್ಕಾರದ ಮಾನ ಹೋಗುವಂತೆ ಆಗಿದೆ. ಎಲ್ಲ ಖಾತೆಗಳೂ ಸರಿಯಾಗಿ ಕೆಲಸ ನಿರ್ವಹಿಸಿವೆಯಾ ಮತ್ತು ಯಾವುದೇ ಟೀ ತೋಟದ ನೌಕರರಿಗೆ ತೊಂದರೆ ಆಗಿಲ್ಲವಾ ಎಂಬುದನ್ನು ಖಾತ್ರಿಪಡಿಸಿ ಎಂದು ನಿರ್ಮಲಾ ಸೂಚಿಸಿದ್ದಾರೆ. ಈ ವಿಚಾರವಾಗಿ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್ ನಿಂದ ಕೇಂದ್ರ ಹಣಕಾಸು ಸಚಿವೆ ವರ್ತನೆಯನ್ನು ಖಂಡಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಆಕ್ಷೇಪಿಸಲಾಗಿದೆ. ಇನ್ನು ಎಸ್ ಬಿಐ ಕಾರ್ಯಕ್ರಮದ ಈ ಆಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ತನಿಖೆಗಾಗಿ ಒತ್ತಾಯಿಸಲಾಗಿದೆ.


Click it and Unblock the Notifications