ಜೈಪುರ: ಜಗತ್ತಿನಲ್ಲಿ ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾವೈರಸ್ ಮಾರಿಗೆ ಔಷಧಿ ಕಂಡು ಹಿಡಿಯುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ, ಕೊರೊನಾವೈರಸ್ ಗೆ ನಾವು ಔಷಧಿ ಕಂಡು ಹಿಡಿದಿದ್ದೇವೆ ಎಂದು ಭಾರತದ ಯೋಗ ಗುರು ಬಾಬಾ ರಾಮದೇವ್ ಹೇಳಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸಂಚನವನ್ನುಂಟು ಮಾಡಿತ್ತು.
ಕೊರೊನಾವೈರಸ್ ಗೆ ಕೊರೊನಿಲ್ ಮಾತ್ರೆಗಳನ್ನು ತಯಾರಿಸಿದ್ದೇವೆ ಎಂದು ಹೇಳಿದ ಬೆನ್ನಲ್ಲೇ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರ ಪತಂಜಲಿ ಸಂಸ್ಥೆಯ ವಿರುದ್ಧ ಗರಂ ಆಗಿದ್ದವು. ಅನುಮತಿ ಪಡೆಯದೇ, ಔಷಧಿ ಕಂಡು ಹಿಡಿದಿದ್ದೇವೆ ಎಂದು ಹೇಳಿರುವುದರ ಬಗ್ಗೆ ನೋಟಿಸ್ ನೀಡಲಾಗಿತ್ತು.
ಇದೀಗ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಗೆ ಮತ್ತೊಂದು ಸಂಕಷ್ಟ ಬಂದಿದ್ದು, ಕೊರೊನಾವೈರಸ್‌ಗೆ ಔಷಧಿ ಕಂಡು ಹಿಡಿದಿದ್ದೇವೆ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬಾಬಾ ರಾಮದೇವ್ ಹಾಗೂ ಇತರ ನಾಲ್ವರ ವಿರುದ್ಧ ಜೈಪುರದಲ್ಲಿ ಎಫ್‌ಐಆರ್ ದಾಖಲಾಗಿದೆ.
ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ
ಯೋಗ ಗುರು ರಾಮದೇವ್, ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ, ವಿಜ್ಞಾನಿ ಅನುರಾಗ್ ವರ್ಷ್ನಿ, ನಿಮ್ಸ್ ಅಧ್ಯಕ್ಷ ಬಲ್ಬೀರ್ ಸಿಂಗ್ ತೋಮರ್ ಮತ್ತು ನಿರ್ದೇಶಕ ಅನುರಾಗ್ ತೋಮರ್ ವಿರುದ್ಧ ಜೈಪುರದ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.
ಸೆಕ್ಷನ್ 420 ರಲ್ಲಿ ಪ್ರಕರಣ ದಾಖಲು
ಕೊರೊನಿಲ್ ಪ್ರಚಾರದಲ್ಲಿ ತೊಡಗಿದ್ದಕ್ಕಾಗಿ ರಾಮ್‌ದೇವ್ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸೆಕ್ಷನ್ 420 ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜ್ಯೋತಿ ನಗರ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.
ಅನುಮತಿ ಪಡೆಯಲಾಗಿದೆ
ರೋಗಿಗಳ ಮೇಲೆ ವಿಚಾರಣೆ ನಡೆಸಲು ನಮಗೆ ಎಲ್ಲ ಅನುಮತಿಗಳಿವೆ. ಐಸಿಎಂಆರ್ ಸಂಸ್ಥೆಯಾದ ಸಿಟಿಆರ್ಐನಿಂದ ಪರೀಕ್ಷೆಗೆ ಮೊದಲು ಅನುಮತಿ ಪಡೆಯಲಾಗಿದೆ. ಅನುಮತಿ ನೀಡಿದ್ದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಜೈಪುರ ನಿಮ್ಸ್ ಅಧ್ಯಕ್ಷ ಬಲ್ಬೀರ್ ಸಿಂಗ್ ತೋಮರ್ ಪತಂಜಲಿ ಪರವಾಗಿ ಹೇಳಿದ್ದಾರೆ. ಜೈಪುರದ ನೀಮ್ಸ್‌ನಲ್ಲಿ 100 ಕೊರೊನಾ ರೋಗಿಗಳ ಮೇಲೆ ಪ್ರಯೋಗ ನಡೆಸಲಾಯಿತು. ಅವರಲ್ಲಿ 69 ಪ್ರತಿಶತದಷ್ಟು ರೋಗಿಗಳು ಮೂರು ದಿನಗಳಲ್ಲಿ ಗುಣಮುಖರಾಗಿದ್ದರೆ, 100 ಪ್ರತಿಶತದಷ್ಟು ರೋಗಿಗಳನ್ನು ಏಳು ದಿನಗಳಲ್ಲಿ ಗುಣಪಡಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಮಾತ್ರೆಗೆ 545 ರುಪಾಯಿ
ಕೊರೊನಿಲ್ ಆಯುರ್ವೇದ ಮಾತ್ರೆಗಳ ಕಿಟ್‌ನ್ನು ಪತಂಜಲಿ ಕೋವಿಡ್ 19 ರೋಗಿಗಳಿಗೆ ರೂಪಿಸಿದೆ. ಈ ಕಿಟ್‌ನಲ್ಲಿ ಹತ್ತು ಮಾತ್ರೆಗಳು ಇರುತ್ತವೆ. ಒಂದು ಮಾತ್ರೆಗೆ 545 ರುಪಾಯಿ. ಈ ಮಾತ್ರೆಗಳು ಕೋವಿಡ್ 19 ರೋಗಿಗಳನ್ನು ಗುಣಪಡಿಸಲು ಸಮರ್ಥವಾಗಿದೆ ಎಂದು ಬಾಬಾ ರಾಮದೇವ್ ಅವರು ಹೇಳಿದ್ದಾರೆ.


Click it and Unblock the Notifications