ಬೆಂಗಳೂರು, ಜುಲೈ 9: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಸಹ-ಮಾಲೀಕತ್ವದ One8 ಕಮ್ಯೂನ್ ಹೋಟೆಲ್ ಅನುಮತಿಸಲಾದ ಸಮಯವನ್ನು ಮೀರಿ ಕಾರ್ಯಾಚರಣೆ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಜುಲೈ 6 ರಂದು ಮಧ್ಯರಾತ್ರಿ 1 ಗಂಟೆಗೆ ಕಡ್ಡಾಯವಾಗಿ ಮುಚ್ಚುವ ಸಮಯವನ್ನು ಉಲ್ಲಂಘಿಸಿ ಸಂಸ್ಥೆಯು 1:20 ಕ್ಕೆ ಗ್ರಾಹಕರಿಗೆ ಸೇವೆ ನೀಡುತ್ತಿರುವುದು ಕಂಡುಬಂದಿದೆ ಎಂದು ತಿಳಿದು ಬಂದಿದೆ.

ರಾತ್ರಿ ಗಸ್ತು ನಡೆಸುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಅವರಿಗೆ ರಾತ್ರಿ 1:20 ಆದರೂ ಹೋಟೆಲ್ ತೆರೆದಿರುವುದು ಕಂಡು ಬಂದ ಹಿನ್ನೆಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರದೇಶದಲ್ಲಿನ ಇತರ ಮೂರು ಪಬ್‌ಗಳ ವಿರುದ್ಧ ಅಧಿಕಾರಿಗಳು ಇದೇ ರೀತಿಯ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿಯ ಯೋಜನೆಯಾದ One8 ಕಮ್ಯೂನ್, ಕೋಲ್ಕತ್ತಾ, ದೆಹಲಿ, ಮುಂಬೈ, ಪುಣೆ ಮತ್ತು ಇತರ ಪ್ರಮುಖ ನಗರಗಳಲ್ಲಿ ಸ್ಥಳಗಳನ್ನು ಒಳಗೊಂಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರು ಔಟ್‌ಲೆಟ್ ಆರಂಭಿಸಲಾಗಿತ್ತು. ಇದು ರತ್ನಂ ಕಾಂಪ್ಲೆಕ್ಸ್‌ನ ಆರನೇ ಮಹಡಿಯಲ್ಲಿರುವ ಕಸ್ತೂರಬಾ ರಸ್ತೆಯಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇದೆ.
ಕಳೆದ ವರ್ಷ ತಮಿಳುನಾಡಿನ ವ್ಯಕ್ತಿಯೊಬ್ಬರು ಪಂಚೆ ಧರಿಸಿದ್ದಕ್ಕಾಗಿ One8 ಕಮ್ಯೂನ್‌ನ ಮುಂಬೈ ಶಾಖೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗ ವಿವಾದವಾಗಿತ್ತು.


Click it and Unblock the Notifications