ವಿಶ್ವದಲ್ಲೇ ಅಪರೂಪದ, ಒಂದು ಮೊಟ್ಟೆ ಗಾತ್ರದ ಅಥವಾ ಲಾಲಿಪಾಪ್ ನಂತೆ ಕಾಣುವ ವಜ್ರವೊಂದು ಮುಂದಿನ ತಿಂಗಳಲ್ಲಿ ಹರಾಜು ಆಗಲಿದೆ. ಇದರ ಮಾರಾಟದ ಮೂಲಕ 1.2 ಕೋಟಿ USDಯಿಂದ 3 ಕೋಟಿ USD ಬರಬಹುದು ಎಂದು ಅಂದಾಜು ಮಾಡಲಾಗಿದೆ. ಸೊತೆಬೈ ಈ ಬಗ್ಗೆ ಗುರುವಾರ ಮಾಹಿತಿ ನೀಡಿದೆ.
102.39 ಕ್ಯಾರೆಟ್ ತೂಕದ ಬಿಳಿ ಶುದ್ಧ ವಜ್ರ ಇದು. ಈ ವರೆಗೆ ಹರಾಜಾದ ಮೊಟ್ಟೆಯಾಕಾರದ ವಜ್ರದ ಗಾತ್ರಗಳ ಪೈಕಿ ಎರಡನೇ ಅತಿ ದೊಡ್ಡ ವಜ್ರ ಇದಾಗಿದೆ. ಈ ಹಿಂದೆ 118.28 ಕ್ಯಾರೆಟ್ ಇತ್ತು. ಅದಕ್ಕೆ 2013ರಲ್ಲಿ 3.08 ಕೋಟಿ ಅಮೆರಿಕನ್ ಡಾಲರ್ ಸಂಗ್ರಹ ಆಗಿತ್ತು.
ಯಾವುದೇ ದೋಷ ಇಲ್ಲದ, D ಬಣ್ಣದ ದೋಷರಹಿತ ಅಥವಾ ಒಳಗಿಂದ ಶುದ್ಧವಾದ- ನೂರು ಕ್ಯಾರೆಟ್ ಮೇಲ್ಪಟ್ಟ ಬಿಳಿ ಬಣ್ಣದ ವಜ್ರ ಇಂಥವು ಏಳು ಮಾತ್ರ ಹರಾಜು ವ್ಯಾಪಾರ ಆಗಿವೆ. ಯಾವುದೇ ಒಂದು ಮೊತ್ತ ನಿಗದಿ ಮಾಡದೆ, ಒಂದೇ ಸಲಕ್ಕೆ ಅಕ್ಟೋಬರ್ ಐದನೇ ತಾರೀಕಿನಂದು ಹಾಂಕಾಂಗ್ ನಲ್ಲಿ ಹರಾಜು ಹಾಕಲಾಗುತ್ತದೆ.

"ಇಂಥ ಗಾತ್ರ ಹಾಗೂ ಮೌಲ್ಯದ ವಜ್ರಗಳು 11.9ರಿಂದ 33.7 ಮಿಲಿಯನ್ ಅಮೆರಿಕನ್ ಡಾಲರ್ ಗೆ ಮಾರಾಟ ಆಗಬಹುದು," ಎಂದು ಸೊತೆಬೈ ನ್ಯೂಯಾರ್ಕ್ ಜ್ಯುವೆಲ್ಲರಿ ಮುಖ್ಯಸ್ಥ ಕ್ವಿಗ್ ಬ್ರುನ್ನಿಂಗ್ ಅಭಿಪ್ರಾಯ ಪಡುತ್ತಾರೆ. ಕೆನಡಿಯನ್ ಪ್ರಾಂತ್ಯವಾದ ಒಂಟಾರಿಯೋದ ವಿಕ್ಟರ್ ಗಣಿಯಲ್ಲಿ 2018ರಲ್ಲಿ ಈ ವಜ್ರ ಸಿಕ್ಕಿತ್ತು. 271 ಕ್ಯಾರೆಟ್ ನಷ್ಟಿದ್ದ ಈ ವಜ್ರವನ್ನು ಕತ್ತರಿಸಿ ಮತ್ತು ಪಾಲಿಷ್ ಮಾಡಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ.
ವಿಶ್ವದಲ್ಲಿ ಎರಡು ಹೆಸರಾಂತ ವಜ್ರಗಳಿವೆ. ಕೊಹ್-ಇ-ನೂರ್ ಹಾಗೂ ಕಲಿನನ್ 1 ಎಂಬುದು ಆ ವಜ್ರಗಳ ಹೆಸರು. ಆ ಎರಡು ಸಹ ಬ್ರಿಟಿಷ್ ರಾಜ ಮನೆತನಕ್ಕೆ ಸೇರಿದ್ದು, ಬ್ರಿಟಿಷ್ ಕಿರೀಟದಲ್ಲಿ ಆಭರಣದಂತೆ ಬಳಕೆ ಆಗಿದೆ. ಇದುವರೆಗೆ ವಜ್ರಕ್ಕೆ ಹರಾಜಿನಲ್ಲಿ ದೊರೆತಿರುವ ದಾಖಲೆ ಮೊತ್ತ ಅಂದರೆ 71.2 ಮಿಲಿಯನ್ ಅಮೆರಿಕನ್ ಡಾಲರ್. ಅದು 2017ನೇ ಇಸವಿಯಲ್ಲಿ.
ಆಗ 59.60 ಕ್ಯಾರೆಟ್ ಪಿಂಕ್ ಡೈಮಂಡ್ ಹರಾಜು ಹಾಕಲಾಗಿತ್ತು. ಅದನ್ನು ಹಾಂಕಾಂಗ್ ನ ಜ್ಯುವೆಲ್ಲರಿ ಕಂಪೆನಿ ಚೌ ಟೈ ಫೂಕ್ ಖರೀದಿ ಮಾಡಿತ್ತು ಎಂದು ಸೊತೆಬೈ ತಿಳಿಸಿದೆ.


Click it and Unblock the Notifications