ಹಿಂಡನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್ ಸ್ಟಾಕ್‌ಗಳು ನಿರಂತರವಾಗಿ ಇಳಿಕೆ ಕಾಣುತ್ತಿದೆ. ಈ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅಧಿಕವಾಗಿ ಅದಾನಿ ಸಂಸ್ಥೆಗೆ ಸಾಲ ನೀಡಿದೆ, ಈ ಸಂಸ್ಥೆಗಳು ಅಪಾಯದಲ್ಲಿದೆ ಎಂದು ವರದಿಯಾಗಿದ್ದವು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಣೆಯನ್ನು ನೀಡಿದ್ದಾರೆ.
ಎಸ್‌ಬಿಐ ಆಗಲಿ ಅಥವಾ ಎಲ್‌ಐಸಿ ಆಗಲಿ ಅದಾನಿ ಗ್ರೂಪ್‌ಗೆ ಹೆಚ್ಚಿನ ಸಾಲವನ್ನು ನೀಡಿಲ್ಲ. ದೇಶದ ಅತೀ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ಮತ್ತು ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಈ ಬಗ್ಗೆ ಈಗಾಗಲೇ ವಿವರವಾದ ಮಾಹಿತಿಯನ್ನು ನೀಡಿದೆ. ಎರಡೂ ಸಂಸ್ಥೆಗಳು ನಿಯಮಕ್ಕೆ ಅನುಗುಣವಾಗಿ, ಲಾಭಕ್ಕೆ ಅನುಗುಣವಾಗಿ ಅದಾನಿ ಗ್ರೂಪ್ ಜೊತೆ ವಹಿವಾಟು ಹೊಂದಿದೆ ಎಂದು ಸ್ಪಷ್ಟಪಡಿಸಿದೆ ಎಂದು ಮತ್ತೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ.
ಭಾರತವು ಉತ್ತಮವಾದ ನಿಯಮಗಳನ್ನು ಹೊಂದಿರುವ ಮತ್ತು ಉತ್ತಮವಾದ ಸರ್ಕಾರಿಸ್ವಾಮ್ಯದ ಹಣಕಾಸು ಮಾರುಕಟ್ಟೆಯನ್ನು ಹೊಂದಿದೆ. ಈ ಬಗ್ಗೆ ನಿಯಂತ್ರಕ ಸಂಸ್ಥೆ ಗಂಭೀರವಾಗಿದೆ ಎಂದು ಕೂಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಹಿಂಡನ್‌ಬರ್ಗ್ ವರದಿಯಾದ ಬಳಿಕ ಎಲ್‌ಐಸಿ ಮತ್ತು ಎಸ್‌ಬಿಐ ಅಪಾಯದಲ್ಲಿದೆ, ದೇಶದ ಜನರ ಹೂಡಿಕೆ ಅಪಾಯದಲ್ಲಿದೆ ಎಂದು ವಿಪಕ್ಷ ನಾಯಕರುಗಳು ಆರೋಪ ಮಾಡಿದ್ದರು.

ವಿಪಕ್ಷ ನಾಯಕರುಗಳ ಆರೋಪವೇನು?
ಅದಾನಿ ಸಂಸ್ಥೆ ಮಾಡಿದೆ ಎಂದು ಹೇಳಲಾದ ವಂಚನೆಯ ಬಗ್ಗೆ ಮಾಡಲಾಗಿರುವ ಹಿಂಡನ್‌ಬರ್ಗ್ ವರದಿಯು ಪ್ರಸ್ತುತ ವಿಪಕ್ಷಗಳ ದಾಳವಾಗಿದೆ. "ಮೋದಿ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗಿನಿಂದ ಅದಾನಿ ಗ್ರೂಪ್‌ನ ಮುಖ್ಯಸ್ಥರು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆತ್ಮೀಯ ನಂಟನ್ನು ಹೊಂದಿದ್ದಾರೆ. ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಅದಾನಿ ಹೂಡಿಕೆಗಳಿದೆ, ಇದರಿಂದಾಗಿ ಕೋಟ್ಯಾಂತರ ಜನರ ಉಳಿತಾಯ ಈಗ ಆಪತ್ತಿನಲ್ಲಿರಬಹುದು," ಎಂದು ಕಾಂಗ್ರೆಸ್‌ನ ವಕ್ತಾರರು ಹೇಳಿಕೊಂಡಿದ್ದಾರೆ.
"ಎಲ್‌ಐಸಿ ಹಾಗೂ ಎಸ್‌ಬಿಐನಂತಹ ಸಂಸ್ಥೆಗಳು ಅದಾನಿ ಗ್ರೂಪ್ ಮೇಲೆ ಹೂಡಿಕೆ ಮಾಡಿದೆ. ಬೇರೆ ಬೇರೆ ಸಂಸ್ಥೆಗಳು ಖಾಸಗಿ ವಲಯದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸುವಾಗಲೂ ಈ ಸಂಸ್ಥೆಗಳು ಮಾತ್ರ ಅದಾನಿ ಗ್ರೂಪ್‌ಗೆ ಉದಾರವಾಗಿ ಹಣಕಾಸು ಒದಗಿಸಿದೆ. ಎಲ್‌ಐಸಿ ಶೇಕಡ 8ರಷ್ಟು ಈಕ್ವಿಟಿಯನ್ನು ಸಂಸ್ಥೆಯು ಹೊಂದಿದೆ," ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. "ಅದಾನಿ ಗ್ರೂಪ್ ವಿರುದ್ಧದ ಈ ಆರೋಪವು ಸಾಬೀತಾದರೆ ಇದು ತಮ್ಮ ಭವಿಷ್ಯಕ್ಕಾಗಿ ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಉಳಿತಾಯ ಮಾಡಿಕೊಂಡು ಬಂದಿರುವ ಕೋಟ್ಯಾಂತರ ಭಾರತೀಯರ ಜೀವನವನ್ನೇ ನಾಶ ಮಾಡಲಿದೆ," ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಮ್ ಯೆಚ್ಯೂರಿ ಹೇಳಿದ್ದಾರೆ.
ಏನಿದು ಹಿಂಡನ್‌ಬರ್ಗ್ ವರದಿ?
ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಭಾರೀ ವಂಚನೆ ಆರೋಪ ಮಾಡಿದೆ. ಲೆಕ್ಕಪತ್ರ ವಂಚನೆಯಲ್ಲಿ ಹಾಗೂ ಸ್ಟಾಕ್ ಮ್ಯಾನಿಪ್ಯುಲೇಷನ್‌ನಲ್ಲಿ ಅದಾನಿ ಗ್ರೂಪ್ ಭಾಗವಹಿಸಿದೆ ಎಂದು ಹಿಂಡೆನ್‌ಬರ್ಗ್ ತನಿಖಾ ವರದಿ ಹೇಳಿದೆ. ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ತೆರಿಗೆ ಡಾಲರ್ ಕಳ್ಳತನ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಕೂಡ ಹಿಂಡನ್‌ಬರ್ಗ್ ತನಿಖಾ ವರದಿ ಮಾಡಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications