ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಮೇ 14) 2ನೇ ಹಂತದಲ್ಲಿ ಪ್ಯಾಕೇಜ್ ಪರಿಹಾರ ವಿವರಿಸಿದ್ದು, ಕೃಷಿಗೆ ನೀಡಿರುವ ಕೊಡುಗೆಯನ್ನು ತಿಳಿಸಿದ್ದಾರೆ.
ರೈತರಿಗೆ ಬೃಹತ್ ಪ್ರಮಾಣದ ಸಾಲ ಯೋಜನೆ ಜೊತೆಗೆ ಸಣ್ಣ ರೈತರಿಗೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಹೊಸದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಯೋಜನೆ ರೂಪಿಸಲಾಗಿದೆ
2 ತಿಂಗಳಿನಲ್ಲಿ ರೈತರಿಗೆ 86,600 ಕೋಟಿ ರುಪಾಯಿ ಸಾಲ
ಕೇಂದ್ರ ಸರ್ಕಾರವು ಲಾಕ್‌ಡೌನ್ ಆರಂಭದಿಂದಲೇ ದೇಶದ ಮೂಲೆ ಮೂಲೆಯಲ್ಲಿ ರೈತರಿಗೆ 63,86,600 ಕೋಟಿ ರುಪಾಯಿ ಸಾಲ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಬಾರ್ಡ್ ಮೂಲಕ 29,500 ಕೋಟಿ ರುಪಾಯಿ ಸಾಲ ವಿತರಣೆಯಾಗಿದೆ. ಮಾರ್ಚ್ ಒಂದೇ ತಿಂಗಳಿನಲ್ಲಿ ಈ ಸಾಲ ನೀಡಲಾಗಿದೆ ಎಂದು ಹೇಳಲಾಗಿದೆ.
ಈ ಬೃಹತ್ ಸಾಲ ಯೋಜನೆಯಿಂದ 4 ಲಕ್ಷ ಕೋಟಿ ರೈತರು ಪ್ರಯೋಜನ ಪಡೆದಿದ್ದಾರೆ. ಒಟ್ಟಾರೆ ಎರಡು ತಿಂಗಳಿನಲ್ಲಿ 86,600 ಕೋಟಿ ರುಪಾಯಿ ಸಾಲ ವಿತರಣೆಯಾಗಿದೆ. ಇದರ ಜೊತೆಗೆ 30 ಸಾವಿರ ಕೋಟಿ ಹೆಚ್ಚುವರಿ ತುರ್ತು ಸಾಲ ನೀಡಲಾಗುವುದು. ಇದರಿಂದ 3 ಕೋಟಿ ಸಣ್ಣ, ಅತಿಸಣ್ಣ ರೈತರಿಗೆ ಪ್ರಯೋಜನವಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
ರೈತರಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹಣದ ಹರಿವಿನ ಅಗತ್ಯತೆ ಇದೆ. ಹೀಗಾಗಿ 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. 4,200 ಕೋಟಿ ಗ್ರಾಮೀಣ ಮೂಲ ಸೌಕರ್ಯ ವಲಯಕ್ಕೆ ನಿಯೋಜಿಸಲಾಗಿದೆ.
ಸಣ್ಣ ರೈತರಿಗೆ ಸಾಲದ ರಿಲೀಫ್
ಸಣ್ಣ ರೈತರಿಗೆ ಕೇಂದ್ರ ಸರ್ಕಾರವು ಬಿಗ್ ರಿಲೀಫ್ ನೀಡಿದೆ. ಈಗಿರುವ ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೊತೆಗೆ ಸಣ್ಣ ರೈತರಿಗೆ ಮೇ 31ರವರೆಗಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದೆ. ಹಾಗೂ 6,700 ಕೋಟಿ ಹೊಸ ಮೂಲ ಬಂಡವಾಳ ನೀಡಲಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


Click it and Unblock the Notifications