ಅತಿ ಹೆಚ್ಚು ಗಳಿಕೆ ಮಾಡಿರುವ ಸೆಲೆಬ್ರಿಟಿಗಳ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಕೈಲಿ ಜೆನ್ನರ್ ಮತ್ತು ಕಾನ್ಯೆ ವೆಸ್ಟ್ ಇದ್ದಾರೆ. ಗುರುವಾರದಂದು ಈ ಪಟ್ಟಿ ಬಿಡುಗಡೆ ಆಗಿದೆ ಇದರ ಟಾಪ್ ಟೆನ್ ಪಟ್ಟಿಯಲ್ಲಿ ರೋಜರ್ ಫೆಡರರ್, ಲಯೋನೆಲ್ ಮೆಸ್ಸಿ ಇತರ ಕ್ರೀಡಾ ತಾರೆಗಳು ಮಿಂಚುತ್ತಿದ್ದಾರೆ. ಫೋರ್ಬ್ಸ್ ಅಂದಾಜು ಮಾಡಿರುವ ಪ್ರಕಾರ, ಕಳೆದ ಹನ್ನೆರಡು ತಿಂಗಳಲ್ಲಿ ಜೆನ್ನರ್ $ 59 ಕೋಟಿ ಗಳಿಸಿದ್ದಾರೆ.
ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 4425 ಕೋಟಿ. ಕೈಲಿ ಕಾಸ್ಮೆಟಿಕ್ಸ್ ಲೈನ್ ನಲ್ಲಿನ ಶೇಕಡಾ 51ರಷ್ಟು ಪಾಲನ್ನು 2019ರಲ್ಲಿ ಕಾಟಿಗೆ ಮಾರಾಟ ಮಾಡಿರುವುದರಿಂದ ಗಳಿಕೆಯ ದೊಡ್ಡ ಪಾಲು ಬಂದಿದೆ. ಅಂದಹಾಗೆ ಕಿಮ್ ಕರ್ದರ್ಶಿಯಾನ್ ಗೆ ಇಪ್ಪತ್ತೆರಡು ವರ್ಷದ ಈ ಜೆನ್ನರ್ ಸಂಬಂಧಿ ಆಗಬೇಕು.
52ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್
ಫೋರ್ಬ್ಸ್ 2020 ವಿಶ್ವದ ಹೆಚ್ಚು ಗಳಿಕೆಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇರುವ ಭಾರತೀಯ ಅಂದರೆ, ಅದು 52 ವರ್ಷದ ಅಕ್ಷಯ್ ಕುಮಾರ್. ಅವರ ವಯಸ್ಸು ಎಷ್ಟೋ ಅಷ್ಟೇ ಸಂಖ್ಯೆಯ ಸ್ಥಾನದಲ್ಲಿ ಅವರು ನಿಂತಿದ್ದಾರೆ. ಆದರೆ ಅಕ್ಷಯ್ ಕುಮಾರ್ ತಮ್ಮ ಗಳಿಕೆಯಲ್ಲಿ ಹಾಲಿವುಡ್ ನಟರಾದ ವಿಲ್ ಸ್ಮಿತ್, ಜೆನಿಫರ್ ಲೋಪೆಜ್, ಗಾಯಕಿ ರಿಹಾನ ಅವರನ್ನೆಲ್ಲ ಮೀರಿಸಿದ್ದಾರೆ. ಆದಾಯ 4.85 ಕೋಟಿ ಅಮೆರಿಕನ್ ಡಾಲರ್ ಇದೆ.
ಕರ್ದರ್ಶಿಯಾನ್ ಗಂಡನಿಗೆ ಪಟ್ಟಿಯಲ್ಲಿ ಸ್ಥಾನ
ಕರ್ದರ್ಶಿಯಾನ್ ರನ್ನು ಮದುವೆ ಆಗಿರುವ ವೆಸ್ಟ್ ಒಟ್ಟು ಆದಾಯ 17 ಕೋಟಿ ಅಮೆರಿಕನ್ ಡಾಲರ್ ಇದೆ. ಅದರಲ್ಲಿ ಬಹುತೇಕ ಆದಾಯದ ಮೂಲವು ಅಡಿಡಾಸ್ ಜತೆಗೆ ತಮ್ಮ ಬ್ರ್ಯಾಂಡ್ ಯೀಜಿ ಸ್ನೀಕರ್ ಒಪ್ಪಂದದಿಂದ ಬಂದಿದೆ. ಹೆಚ್ಚು ಗಳಿಕೆ ಮಾಡಿರುವ ಸಂಗೀತಗಾರ ವೆಸ್ಟ್. ಆ ನಂತರದ ಸ್ಥಾನ ಎಲ್ಟನ್ ಜಾನ್ ಅವರದು. ಅಂದಾಜು ಗಳಿಕೆ 8.1 ಕೋಟಿ ಅಮೆರಿಕನ್ ಡಾಲರ್.
ಮೂರನೇ ಸ್ಥಾನದಲ್ಲಿ ಫೆಡರರ್
ಫೋರ್ಬ್ಸ್ ಟಾಪ್ 100ರ ಪಟ್ಟಿಯಲ್ಲಿ ಇರುವ ಎಲ್ಲ ಸೆಲೆಬ್ರಿಟಿಗಳ ಒಟ್ಟು ಆದಾಯ ಸೇರಿದರೆ 610 ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ. ಅದು ಯಾವುದೇ ತೆರಿಗೆ ಹಾಗೂ ಶುಲ್ಕ ಕಟ್ಟುವ ಮುಂಚಿನ ಆದಾಯ ಇದು. 2019ರ ಸಾಲಿಗೆ ಹೋಲಿಸಿದರೆ 20 ಕೋಟಿ ಡಾಲರ್ ಕಡಿಮೆ ಆಗುತ್ತದೆ. ಕೊರೊನಾ ವೈರಸ್ ಪರಿಣಾಮವಾಗಿ ಆದಾಯದಲ್ಲಿ ಇಳಿಕೆ ಆಗಿದೆ. ಟೆನಿಸ್ ಚಾಂಪಿಯನ್ ಫೆಡರರ್ 10.63 ಕೋಟಿ ಅಮೆರಿಕನ್ ಡಾಲರ್ ಆದಾಯದೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದಾರೆ. ಆ ಪೈಕಿ ಬಹುತೇಕ ಗಳಿಕೆ ಜಪಾನ್ ನ ಬಟ್ಟೆ ಕಂಪೆನಿ ಯುನಿಕ್ಲೋ ಹಾಗೂ ರೋಲೆಕ್ಸ್ ವಾಚ್ ಜತೆಗಿನ ಒಪ್ಪಂದದಿಂದ ಬಂದಿದೆ. ಅವರ ನಂತರದ ಸ್ಥಾನದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಯೋನಲ್ ಮೆಸ್ಸಿ ಇದ್ದಾರೆ.
ಬಿಲ್ಲಿ ಐಲಿಷ್ ಅತ್ಯಂತ ಕಿರಿಯ ವಯಸ್ಸಿನ ಸೆಲೆಬ್ರಿಟಿ
ಜೂನ್ 2019ರಿಂದ ಜೂನ್ 2020ರ ಮಧ್ಯದ ಸೆಲೆಬ್ರಿಟಿಗಳ ಗಳಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಹೊಸ ಸೇರ್ಪಡೆ ಅಂದರೆ 'ಹ್ಯಾಮಿಲ್ಟನ್' ಸೃಷ್ಟಿಕರ್ತರಾದ ಲಿನ್- ಮಾನುಯೆಲ್ ಮಿರಾಂಡ. ಅವರ ಆದಾಯ 4.55 ಕೋಟಿ ಡಾಲರ್ ಇದೆ. ಇನ್ನು 18 ವರ್ಷದ ಸಂಗೀತಗಾರರಾದ ಬಿಲ್ಲಿ ಐಲಿಷ್ 5.3 ಕೋಟಿ ಡಾಲರ್ ಗಳಿಕೆಯೊಂದಿಗೆ ಟಾಪ್ 100 ಸೆಲೆಬ್ರಿಟಿ ಪಟ್ಟಿಯಲ್ಲಿ ಇರುವ ಅತ್ಯಂತ ಕಿರಿಯ ವಯಸ್ಸಿನವರು ಎನಿಸಿಕೊಂಡಿದ್ದಾರೆ.


Click it and Unblock the Notifications