ದೇಶದ ಹಣಕಾಸು ಸ್ಥಿತಿ ಚೇತರಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಮೂರು ಸಲಹೆಗಳನ್ನು ನೀಡಿದ್ದಾರೆ. ಭಾರತದಲ್ಲಿ ಬಹುದೊಡ್ಡ ಆರ್ಥಿಕ ಸುಧಾರಣೆಯ ಅಧ್ವರ್ಯು ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಕಾಂಗ್ರೆಸ್ ನಾಯಕ ಸಿಂಗ್, ಜನರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವಂತೆ ಮೊದಲ ಸಲಹೆ ನೀಡಿದ್ದಾರೆ.
ಹೀಗೆ ನೇರವಾಗಿ ಹಣವನ್ನು ಜನರ ಖಾತೆಗೆ ಜಮೆ ಮಾಡುವ ಮೂಲಕ ಅವರ ಬದುಕು ನಡೆಯಲು ಸಹಾಯ ಮಾಡಬೇಕು ಹಾಗೂ ಖರ್ಚು ಮಾಡುವ ಸಾಮರ್ಥ್ಯವನ್ನು ಉಳಿಸಬೇಕು ಎಂದಿದ್ದಾರೆ. ಇನ್ನು ಎರಡನೇ ಸಲಹೆಯಾಗಿ, ಸರ್ಕಾರವೇ ಸಾಲಕ್ಕೆ ಖಾತ್ರಿಯಾಗಿ ನಿಂತು, ವ್ಯಾಪಾರ- ವ್ಯವಹಾರಗಳಿಗೆ ಬಂಡವಾಳ ಒದಗಿಸಬೇಕು ಎಂದಿದ್ದಾರೆ.
ಮಾನವೀಯ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಆರ್ಥಿಕ ಹಿಂಜರಿತ
ಇನ್ನು ಕೊನೆಯ ಸಲಹೆ ಎಂಬಂತೆ, ಹಣಕಾಸು ವಲಯದ ಸಮಸ್ಯೆಗಳನ್ನು ಸರಿಪಡಿಸುವುದಕ್ಕೆ ಸಾಂಸ್ಥಿಕ ಸ್ವಾಯತ್ತತೆ ನೀಡಬೇಕು ಎಂದು ಹೇಳಿದ್ದಾರೆ. "ಎಲ್ಲರೂ ಹೇಳುವಂತೆ ನಾನು ಕೂಡ ಪ್ರಸ್ತುತ ಸನ್ನಿವೇಶದಲ್ಲಿ 'ಆರ್ಥಿಕ ಕುಸಿತ'ದಂಥ ಪದವನ್ನು ಬಳಸುವುದಕ್ಕೆ ಬಯಸುವುದಿಲ್ಲ" ಎಂದು ಬಿಬಿಸಿ ಜತೆಗಿನ ಸಂವಾದದಲ್ಲಿ ಹೇಳಿರುವ ಅವರು, ಇನ್ನೂ ಮುಂದುವರಿದು, ತುಂಬ ತೀಕ್ಷ್ಣ ಹಾಗೂ ದೀರ್ಘವಾದ ಆರ್ಥಿಕ ಹಿಂಜರಿತ ಅನಿವಾರ್ಯವಾಗಿ ಎದುರಿಸಬೇಕಿದೆ. ಈ ಆರ್ಥಿಕ ಹಿಂಜರಿತ ಆಗಿರುವುದು ಮಾನವೀಯ ಬಿಕ್ಕಟ್ಟಿನಿಂದ. ಕೇವಲ ಆರ್ಥಿಕತೆಯ ಸಂಖ್ಯೆ ಹಾಗೂ ವಿಧಾನದಿಂದ ಈಗಿನ ಸನ್ನಿವೇಶವನ್ನು ನೋಡುವ ಬದಲಿಗೆ ನಮ್ಮ ಸಮಾಜದ ಭಾವನಾತ್ಮಕ ನೆಲೆಗಟ್ಟಿನಲ್ಲಿ ಕಾಣಬೇಕು ಎಂದು ವಿವರಿಸಿದ್ದಾರೆ.
50 ವರ್ಷದಲ್ಲೇ ಭೀಕರವಾದ ಆರ್ಥಿಕ ಹಿಂಜರಿತ
ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2020- 21ರ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯಲ್ಲಿ ಭಾರೀ ಕುಸಿತ ಆಗುವ ನಿರೀಕ್ಷೆ ಇದೆ. ಕಳೆದ 50 ವರ್ಷದಲ್ಲೇ ಇದು ತಾಂತ್ರಿಕವಾಗಿ ಭೀಕರವಾದ ಆರ್ಥಿಕ ಹಿಂಜರಿತಕ್ಕೆ ದೂಡುತ್ತದೆ ಎಂಬ ಮಾತುಗಳು ಚಾಲ್ತಿಯಲ್ಲಿ ಇರುವಾಗಲೇ ಮನ್ ಮೋಹನ್ ಸಿಂಗ್ ಸಲಹೆ ಮಾಡಿದ್ದಾರೆ. ಉದ್ಯಮ- ವ್ಯಾಪಾರಕ್ಕೆ ಬಂಡವಾಳ, ಸಾಲ ಒದಗಿಸಬೇಕು ಹಾಗೂ ನೇರ ಹಣ ವರ್ಗಾವಣೆ ಮಾಡಬೇಕು ಅಂದರೆ ಸಾಲ ಪಡೆಯಲೇಬೇಕಾಗುತ್ತದೆ. ಇನ್ನು ಸೈನ್ಯ, ಆರೋಗ್ಯ ಹಾಗೂ ಆರ್ಥಿಕ ಸವಾಲುಗಳಿಗೆ ಜಿಡಿಪಿಯ ಹತ್ತು ಪರ್ಸೆಂಟ್ ನಷ್ಟನ್ನು ಖರ್ಚು ಮಾಡಲೇಬೇಕಾಗುತ್ತದೆ ಎಂದಿದ್ದಾರೆ.
ಸಾಲ ಮಾಡುವುದಿಲ್ಲ ಎಂದು ದೂರ ನಿಲ್ಲಲು ಆಗಲ್ಲ
ಭಾರತದ ಜಿಡಿಪಿ ಹಾಗೂ ಸಾಲದ ಅನುಪಾತ ಹೆಚ್ಚುತ್ತಿರುವ ಆತಂಕದ ಬಗ್ಗೆ ಕೇಳಿರುವ ಪ್ರಶ್ನೆಗೆ ಸಿಂಗ್, ಈ ಸಂದರ್ಭದಲ್ಲಿ ಸಾಲ ಮಾಡುವುದಿಲ್ಲ ಎಂದು ದೇಶವು ದೂರ ನಿಲ್ಲಲು ಆಗಲ್ಲ. ಆದರೆ ವಿವೇಕಯುತವಾಗಿ ಆಲೋಚಿಸಬೇಕು. ಸಾಲ ಮಾಡುವುದರಿಂದ ಜೀವಗಳನ್ನು ಉಳಿಸಬಹುದು, ಗಡಿಗಳ ರಕ್ಷಣೆ ಮಾಡಿಕೊಳ್ಳಬಹುದು, ಜೀವನ ಮೊದಲಿನಂತೆ ಆಗುತ್ತದೆ ಮತ್ತು ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ ಎಂದಾದಾಗ ಸಾಲ ಮಾಡಬೇಕಾಗುತ್ತದೆ. ಈಗಿನ ಹಣಕಾಸು ಸಮಸ್ಯೆ ಸೃಷ್ಟಿ ಆಗಿರುವುದು ಕೊರೊನಾ ಬಿಕ್ಕಟ್ಟಿನಿಂದ. ಇದರಿಂದ ಸಮಾಜದಲ್ಲಿ ಭಯ ಹಾಗೂ ಅನಿಶ್ಚಿತತೆ ಹೆಚ್ಚಾಗಿದೆ. ಬಿಕ್ಕಟ್ಟು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯುವ ಮೊದಲೇ ಹಣಕಾಸು ನೀತಿಯನ್ನು ಆರ್ಥಿಕತೆಯ ಸಲಕರಣೆಯಾಗಿ ಬಳಸಿಕೊಂಡು, ಸನ್ನಿವೇಶವನ್ನು ಎದುರಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications