ರಾಜ್ಯದ ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕದ ದೇವಾಲಯಗಳು ಉಚಿತ ವಿದ್ಯುತ್ ಪಡೆಯುವ ನಿರೀಕ್ಷೆಯಿದೆ. ಶೀಘ್ರವೇ ಕರ್ನಾಟಕದ ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ವರದಿಯಾಗಿದೆ.
ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. "ನಾವು ಅದನ್ನು ರಾಜ್ಯ ಸರ್ಕಾರದ ಮುಂದೆ ಅನುಮೋದನೆಗಾಗಿ ಶೀಘ್ರದಲ್ಲೇ ಸಲ್ಲಿಸುತ್ತೇವೆ," ಎಂದು ಮಾಹಿತಿ ನೀಡಿದ್ದಾರೆ.

ಯಾವ ದೇವಸ್ಥಾನಕ್ಕೆ ಈ ಯೋಜನೆ ಅನ್ವಯ?
ಕರ್ನಾಟಕದಲ್ಲಿರುವ 'ಸಿ' ವರ್ಗದ ದೇವಸ್ಥಾನಗಳಿಗೆ ಈ ಯೋಜನೆ ಅನ್ವಯವಾಗಲಿದೆ. ರಾಜ್ಯದಲ್ಲಿನ ದೇವಾಲಯಗಳನ್ನು ಅವು ಉತ್ಪಾದಿಸುವ ವಾರ್ಷಿಕ ಆದಾಯದ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ 34,563 ದೇವಾಲಯಗಳಿವೆ. ಇವುಗಳಲ್ಲಿ, ಸುಮಾರು ಶೇಕಡ 99 ರಷ್ಟು ಅಂದರೆ 34,223 ದೇವಾಲಯಗಳು ವರ್ಗ 'ಸಿ' ಅಡಿಯಲ್ಲಿ ಬರುತ್ತವೆ.
201 'ಎ' ವರ್ಗದ ದೇವಸ್ಥಾನಗಳಿದ್ದು, ವಾರ್ಷಿಕ ಆದಾಯ 25 ಲಕ್ಷ ರೂಪಾಯಿ ಆಗಿದೆ. 139 'ಬಿ' ವರ್ಗದ ದೇವಸ್ಥಾನಗಳಿದ್ದು, ವಾರ್ಷಿಕ ಆದಾಯ 5 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಆಗಿದೆ. ಉಳಿದ ದೇವಸ್ಥಾನಗಳಲ್ಲಿ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿದೆ.
'ಸಿ' ವರ್ಗದ ದೇವಸ್ಥಾನಗಳಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾವನೆಯು ಸಾಕಷ್ಟು ಆದಾಯವನ್ನು ಗಳಿಸದ ದೇವಸ್ಥಾನಗಳಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಶೇಕಡ 20 'ಎ' ವರ್ಗದ ದೇವಸ್ಥಾನದ ಆದಾಯವನ್ನು 'ಸಿ' ವರ್ಗದ ದೇವಸ್ಥಾನಗಳೊಂದಿಗೆ ಹಂಚಿಕೊಳ್ಳುವ ಪ್ರಸ್ತಾಪವಿದ್ದರೂ, ಅದು ಜಾರಿಗೆ ಬಂದಿಲ್ಲ.
ಈಗ ಗೃಹ ಜ್ಯೋತಿ ಯೋಜನೆಯು ರಾಜ್ಯದ ವಿವಿಧ ಭಾಗಗಳಲ್ಲಿರುವ ಸಣ್ಣ ದೇವಾಲಯಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ. ಗೃಹ ಜ್ಯೋತಿ ಯೋಜನೆಯು ಕಾಂಗ್ರೆಸ್‌ನ ಐದು ಭರವಸೆಗಳಲ್ಲಿ ಒಂದಾಗಿದೆ. ಇದನ್ನು ಕರ್ನಾಟಕದಲ್ಲಿ ಆಗಸ್ಟ್ 5 ರಂದು ಪ್ರಾರಂಭಿಸಲಾಗಿದೆ. ರಾಜ್ಯದ ಸುಮಾರು ಎರಡು ಕೋಟಿ ಕುಟುಂಬಗಳಿಗೆ ಈ ಯೋಜನೆ ಪ್ರಯೋಜನವನ್ನು ನೀಡುತ್ತದೆ.
ಕರ್ನಾಟಕ ಸರ್ಕಾರ ಜಾರಿ ಮಾಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡಾ ಒಂದಾಗಿದೆ. ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು ಜೂನ್ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.


Click it and Unblock the Notifications