ಬೆಂಗಳೂರು: ಇತ್ತೀಚೆಗೆ ಸಾರಿಗೆ ಬಸ್‌ಗಳು (Govt Bus), ಯಾಕೋ ಹಲವು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆದಂತಿದೆ. ಕಾರಣ ಒಂದು ಕಾಲದಲ್ಲಿ ಕೆಂಪು, ನೀಲಿ ಬಣ್ಣದಲ್ಲಿ ಕಾಣುತ್ತಿದ್ದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು (KSRTC, BMTC), ಇತ್ತೀಚೆಗೆ ಸಂಪೂರ್ಣವಾಗಿ ಜಾಹೀರಾತು ಸ್ಟಿಕ್ಕರ್‌ಗಳಿಂದ ಮುಚ್ಚಿಹೋಗಿದೆ. ಯಾವುದೇ ಬಸ್ ನೋಡಿದರೂ, ಯಾವುದಾದರೂ ಕಂಪನಿಯ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಬಹುತೇಕ ಬಸ್‌ಗಳಲ್ಲಿ "ಎಲ್ಲೆಲ್ಲೂ ಕೇಸರಿ" ಎಂಬ ಜಾಹೀರಾತು ಹೊಂದಿರುವ ಸ್ಟಿಕ್ಕರ್ ಅಂಟಿಸಿರುತ್ತಾರೆ. ಆದ್ರೆ ಇದೀಗ ಸಾರಿಗೆ ಇಲಾಖೆ (Transport Department) ಅಂತಹ ಜಾಹೀರಾತುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದೆ.

ಹೌದು, ಸಾರ್ವಜನಿಕ ಬಸ್‌ಗಳಲ್ಲಿ ಅಥವಾ ಬಸ್ ನಿಲ್ದಾಣಗಳಲ್ಲಿ ಇನ್ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಹಾಕುವಂತಿಲ್ಲ ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹಾಗಿದ್ರೆ ಏನಿದು ನಿಯಮ? ಯಾವಾಗದಿಂದ ಜಾರಿ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾರಿಗೆ ಬಸ್‌ಗಳಲ್ಲಿ ಜಾಹೀರಾತುಗಳಿಗೆ ಬ್ರೇಕ್!
ಸಾರ್ವಜನಿಕ ಬಸ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಈ ಮಹತ್ವದ ಕ್ರಮ ಕೈಗೊಂಡಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಸಾರ್ವಜನಿಕ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಈಗಾಗಲೇ ಇರುವ ತಂಬಾಕು ಜಾಹೀರಾತುಗಳನ್ನು ತಕ್ಷಣವೇ ರಿಮೂವ್ ಮಾಡುವಂತೆ, ಇನ್ಮೇಲೆ ಅಂಟಿಸುವಂತಿಲ್ಲ ಎಂದು ಮಹತ್ವದ ಆದೇಶ ಹೊರಡಿಸಿದ್ದಾರೆ..
ಸಚಿವರ ಆದೇಶ, ಹಲವು ಕ್ರಮ!
ಸಚಿವರ ಆದೇಶದ ಪ್ರಕಾರ, ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಅಥವಾ ಬಸ್ ಟರ್ಮಿನಲ್ ಆವರಣದಲ್ಲಿ ಯಾವುದೇ ರೂಪದ ತಂಬಾಕು ಸಂಬಂಧಿತ ಉತ್ಪನ್ನಗಳ ಜಾಹೀರಾತು ಅಂಟಿಸುವಂತಿಲ್ಲ ಎನ್ನಲಾಗಿದೆ. ಇದರಲ್ಲಿ ವಿಡಿಯೋ, ಪೋಸ್ಟರ್‌ಗಳು, ಸ್ಟಿಕ್ಕರ್‌ಗಳು, ಹಾಗೆಯೇ ತಂಬಾಕು ಕಂಪನಿಗಳಿಗೆ ಸಂಬಂಧಿಸಿದ ಯಾವುದೇ ಜಾಹೀರಾತು ಅಂಟಿಸುವುದಿಲ್ಲ ಎಂದು ಖಡಕ್ ಸೂಚನೆ ಹೊರಡಿಸಿದೆ. ಅಲ್ಲದೇ, ಈಗಾಗಲೇ ಅಂಟಿಸಿರುವ, ಚಲಾವಣೆಯಲ್ಲಿರುವ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ವಿಮಲ್, ಆರ್‌ಎಂಡಿ, ಮತ್ತು ಚೈನಿ ಖೈನಿ ಮುಂತಾದ ತಂಬಾಕು ಉತ್ಪನ್ನಗಳ ಜಾಹೀರಾತುಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸಾರಿಗೆ ಇಲಾಖೆಯ ವಿರುದ್ಧ ಸಾರ್ವಜನಿಕರಿಂದ ಭಾರೀ ವಿರೋಧಗಳು ವ್ಯಕ್ತವಾಗಿತ್ತು. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹಾನಿಕಾರಕ ಪದಾರ್ಥಗಳ ಪ್ರಚಾರಕ್ಕೆ ವೇದಿಕೆಯನ್ನಾಗಿ ಬಳಸಬಾರದು ಎಂದು ನಾಗರಿಕರು ಮತ್ತು ಆರೋಗ್ಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಇಂತಹ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು. ಈ ಆಗ್ರಹದ ಬೆನ್ನಲ್ಲೇ ಸಾರಿಗೆ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನೇಕ ಕಡೆ ಜನರು ಬಸ್‌ಗಳಿಗೆ ಅಂಟಿಸಿದ್ದ ಜಾಹೀರಾತು ಪೋಸ್ಟರ್‌ಗಳನ್ನು ಸ್ವತಃ ಕಿತ್ತುಹಾಕಿ ಪ್ರತಿಭಟನೆ ನಡೆಸಿದ್ದರು. ರಾಜ್ಯ ಸರ್ಕಾರಿ ಸಾರಿಗೆ ವ್ಯವಸ್ಥೆಗಳಲ್ಲಿ ಇಂತಹ ಪ್ರಚಾರಗಳಿಗೆ ಹೇಗೆ ಅನುಮತಿ ನೀಡಲಾಯಿತು ಎಂಬುದು ವ್ಯಾಪಕ ಚರ್ಚೆಗೆ ಮತ್ತು ಪ್ರಶ್ನೆಗಳಿಗೆ ಕಾರಣವಾಯಿತು.
ಇದೀಗ ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ಮಾಧ್ಯಮಗಳ ಸತತ ವರದಿಯ ಬೆನ್ನಲ್ಲೇ, ಸಾರಿಗೆ ಸಚಿವರು ತಕ್ಷಣವೇ ತಂಬಾಕು ಉತ್ಪನ್ನಗಳಂತಹ ಜಾಹೀರಾತಿಗೆ ಕ್ರಮ ಕೈಗೊಂಡಿದ್ದಾರೆ.


Click it and Unblock the Notifications