ಬೆಂಗಳೂರು, ಮೇ 18: ಭಾರತೀಯ ಪ್ರವಾಸಿಗರು ಹೆಚ್ಚಾಗಿ ನೆರೆ ರಾಷ್ಟ್ರ ಶ್ರೀಲಂಕಾ ದೇಶಕ್ಕೆ ಪ್ರವಾಸ ಹೋಗುತ್ತಿರುತ್ತಾರೆ. ಹೀಗೆ ಪ್ರವಾಸಕ್ಕೆ ತೆರಳುವಾಗ ಆ ದೇಶದ ಕರೆನ್ಸಿಯನ್ನು ನಮ್ಮ ಬಳಿ ಇರಿಸಿಕೊಳ್ಳಬೇಕಾಗುತ್ತದೆ. ಆದರೆ ಇನ್ಮುಂದೆ ಆ ಚಿಂತೆ ಇಲ್ಲ. ಯಾಕೆಂದರೆ ಫೋನ್ ಪೇ ಆಪ್ಯ್ ಮೂಲಕ ಶ್ರೀಲಂಕಾದಲ್ಲೂ ಪಾವತಿಗಳನ್ನು ಮಾಡಬಹುದು .
ಹೌದು ಇನ್ಮುಂದೆ ಫಿನ್ ಟೇಕ್ ಸಂಸ್ಥೆ ಫೋನ್ ಪೇ ಬಳಕೆದಾರರು ಶ್ರೀಲಂಕಾದಲ್ಲಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೂಲಕ ಪಾವತಿಗಳನ್ನು ಮಾಡಬಹುದಾಗಿದ್ದು, ಲಂಕಾ ಕ್ಯೂಆರ್ ಮರ್ಚೆಂಟ್ ಪಾಯಿಂಟ್‌ಗಳಾದ್ಯಂತ ಲಂಕಾಪೇ ಸಹಯೋಗದೊಂದಿಗೆ ಯುಪಿಐ ಪಾವತಿ ಸ್ವೀಕಾರವನ್ನು ಅಕ್ಶ್ಟಿವೇಟ್ ಮಾಡಲಾಗಿದೆ ಎಂದು ಫೋನ್‌ಪೇ ಬುಧವಾರ ಹೇಳಿದೆ.

ಶ್ರೀಲಂಕಾಕ್ಕೆ ಪ್ರಯಾಣಿಸುವ ತನ್ನ ಅಪ್ಲಿಕೇಶನ್ ಬಳಕೆದಾರರು ಈಗ ರಾಷ್ಟ್ರವ್ಯಾಪಿ ಲಂಕಾ ಪೇ ಕ್ಯುಆರ್ ವ್ಯಾಪಾರಿಗಳಾದ್ಯಂತ UPI ಬಳಸಿಕೊಂಡು ಪಾವತಿಗಳನ್ನು ಮಾಡಬಹುದು ಎಂದು ಫೋನ್ ಪೇ ಘೋಷಿಸಿದೆ. ವಿದೇಶದಲ್ಲೂ ಯುಪಿಐ ಕೆಲಸ ಮಾಡುತ್ತಿರುವುದರಿಂದ ಭಾರತೀಯರು ಸ್ಥಳೀಯ ಕರೆನ್ಸಿಗೆ ಭಾರತೀಯ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೇರವಾಗಿ UPI ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಸುರಕ್ಷಿತ ಮತ್ತು ತ್ವರಿತ ಪಾವತಿಗಳನ್ನು ಮಾಡಲು ಬಳಕೆದಾರರು ಲಂಕಾಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಅವರ ಖಾತೆಯನ್ನು ಇಂಡಿಯನ್ ರೂಪಾಯಿ (INR) ನಲ್ಲಿ ಡೆಬಿಟ್ ಮಾಡಲಾಗುತ್ತದೆ. ಮತ್ತು ಇಲ್ಲಿ ಕರೆನ್ಸಿ ವಿನಿಮಯ ದರವನ್ನು ತೋರಿಸುತ್ತದೆ. ಈ ವಹಿವಾಟುಗಳನ್ನು ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮತ್ತು ಲಂಕಾಪೇ ನ್ಯಾಷನಲ್ ಪೇಮೆಂಟ್ ನೆಟ್‌ವರ್ಕ್ ಮೂಲಕ ಸುಗಮಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
"ಲಂಕಾಪೇ ಜೊತೆಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಾವು ಉತ್ಸುಕಗೊಂಡಿದ್ದೇವೆ. ಈ ಸಹಯೋಗದಿಂದ ಭಾರತೀಯ ಪ್ರವಾಸಿಗರಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ನೀವೇನಾದರೂ ಶ್ರೀಲಂಕಾಕ್ಕೆ ಪ್ರಯಾಣಿಸುತ್ತಿದ್ದೀರಿ ಎಂದರೆ ಯಾವ ಚಿಂತೆಯೂ ಇಲ್ಲದೇ ಪರಿಚಿತ ಮತ್ತು ಸುರಕ್ಷಿತ ಪಾವತಿ ವಿಧಾನವನ್ನು ಬಳಸಿಕೊಂಡು ಲಂಕಾ ಕ್ಯುಆರ್ ಮರ್ಚೆಂಟ್ ಪಾಯಿಂಟ್‌ಗಳಾದ್ಯಂತ ಪಾವತಿಸಬಹುದು" ಎಂದು ಫೋನ್‌ಪೇ ಇಂಟರ್‌ನ್ಯಾಶನಲ್ ಪೇಮೆಂಟ್ಸ್ ಸಿಇಒ ರಿತೇಶ್ ಪೈ ಹೇಳಿದ್ದಾರೆ.
ಫೋನ್‌ಪೇ 535 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದ್ದು, 39 ಮಿಲಿಯನ್ ಗೂ ಹೆಚ್ಚು ವ್ಯಾಪಾರಿಗಳೊಂದಿಗೆ ಡಿಜಿಟಲ್ ಪಾವತಿ ಸ್ವೀಕರಿಸಿವ ನೆಟ್ ವರ್ಕ್ ಹೊಂದಿದೆ ಎಂದು ಹೇಳಿಕೊಂಡಿದೆ. PhonePe 255 ಮಿಲಿಯನ್ ದೈನಂದಿನ ವಹಿವಾಟುಗಳೊಂದಿಗೆ ವಾರ್ಷಿಕ ಒಟ್ಟು ಪಾವತಿ ಮೌಲ್ಯ (Total Payment Value TPV) USD 1.5 ಟ್ರಿಲಿಯನ್ ಗೂ ಹೆಚ್ಚು ವಹಿವಾಟು ನಡೆಸುತ್ತಿದೆ .


Click it and Unblock the Notifications