ನವದೆಹಲಿ, ಏಪ್ರಿಲ್ 7: ಯುಪಿಐ ಟ್ರಾನ್ಸಾಕ್ಷನ್..ಭಾರತದ ಡಿಜಿಟಲ್ ಟ್ರಾನ್ಸಾಕ್ಷನ್‌ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ವ್ಯವಸ್ಥೆ. ಹಣ ವರ್ಗಾವಣೆಯನ್ನ ಬಹಳ ಸರಳೀಕರಣಗೊಳಿಸುವ ಯುಪಿಐ ಪದ್ಧತಿ ಇದೀಗ ಮತ್ತೊಂದು ಕ್ರಾಂತಿಗೆ ಸಾಕ್ಷಿಯಾಗುವತ್ತ ದಾಪುಗಾಲಿಡ್ತಿದೆ. ಕುಳಿತ ಜಾಗದಿಂದಲೇ ಯಾವ ವ್ಯಕ್ತಿಯ ಖಾತಗೂ ಕ್ಷಣ ಮಾತ್ರದಲ್ಲಿ ಹಣ ವರ್ಗಾಯಿಸಬಲ್ಲ ವ್ಯವಸ್ಥೆ ಕಲ್ಪಿಸಿಕೊಟ್ಟ ಕಾರಣಕ್ಕಾಗಿ, ಅತೀ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದುಕೊಂಡ ಖ್ಯಾತಿ ಈ ಯುಪಿಐ ವ್ಯವಸ್ಥೆಗೆ ಸಲ್ಲುತ್ತದೆ.
ಇಷ್ಟೂ ದಿನ ಯುಪಿಐ ಮೂಲಕ ಕೇವಲ ಹಣ ವರ್ಗಾವಣೆ ಮಾಡಬಹುದಾಗಿತ್ತು. ಆದ್ರೆ ಇನ್ಮುಂದೆ ಹಣ ಠೇವಣಿ ಕೂಡ ಮಾಡಬಹುದಾಗಿದೆ. ಹೌದು ಈಗಾಗಲೇ ಈ ನಿಟ್ಟಿನಲ್ಲಿ ಯೋಜನೆಗಳು ಆರಂಭವಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹೊಂದಿಕೊಂಡಿರುವ ಮೊಬೈಲ್ ಸಂಖ್ಯೆಯ ಮೂಲಕ ಕ್ಷ ಮಾತ್ರದಲ್ಲಿ ಯಾರಿಗಾದರೂ ಹಣ ಕಳುಹಿಸುವ ಮತ್ತು ಪಡೆದುಕೊಳ್ಳುವ ವ್ಯವಸ್ಥೆಯನ್ನ ಈ ವೇದಿಕೆ ಸೃಷ್ಟಿಸಿಕೊಟ್ಟಿತ್ತು. ಇದೀಗ ಮತ್ತೊಂದು ಹೆಜ್ಜೆ ವಿಸ್ತರಿಸೋದಕ್ಕೆ ಈ ವ್ಯವಸ್ಥೆ ಸಿದ್ಧತೆ ಆರಂಭಿಸಿದೆ.

ಒಂದೋ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಅಥವಾ QR CODE ಮೂಲಕ ನಿರಾಯಾಸವಾಗಿ ಹಣ ವರ್ಗಾವಣೆ ಮಾಡಬಲ್ಲ ಸಾಮರ್ಥ್ಯ ಯುಪಿಐ ವರ್ಗಾವಣೆಗಳ ಖ್ಯಾತಿ. ಈ ಕಾರಣದಿಂದಾಗಿ ಜನ ಹಣ ವಿತ್ ಡ್ರಾ ಮಾಡಲು ಎಟಿಎಂ ಗಳ ಬಳಿ ಹೋಗೋದು, ಬ್ಯಾಂಕ್‌ಗಳಿಗೆ ತೆರಳೋದು ಕಡಿಮೆಯಾಗಿತ್ತು. ಹೀಗಾಗಿ ಇದು ಬಹಳ ಗ್ರಾಹಕ ಸ್ನೇಹಿಯಾಗಿತ್ತು. ವಯಕ್ತಿಕ ವ್ಯವಹಾರಗಳಿಂದ ಹಿಡಿದು ವ್ಯಾಪಾರ ವಹಿವಾಟಿನ ವರೆಗೂ ಜನರು ಸಂಪೂರ್ಣ ಇದರ ಮೇಲೆಯೇ ಅವಲಂಬಿತರಾಗಿದ್ದಾರೆ.
ಉದಾಹರಣೆಗೆ ತಳ್ಳೋ ಗಾಡಿಯಲ್ಲಿ ತರಕಾರಿ ಮಾರುವ ಸಣ್ಣ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್, ಶೋ ರೂಂ ಗಳ ವರೆಗೂ ಇದೀಗ ಎಲ್ಲ ಕಡೆಗಳಲ್ಲೂ OR CODE ಬಳಕೆ ಚಾಲ್ತಿಗೆ ಬಂದುಬಿಟ್ಟಿದೆ. ಜೇಬಲ್ಲಿ ನಗದು ಇಲ್ಲದಿದ್ರೂ ಮೊಬೈಲ್ ಇದ್ರೆ ಸಾಕು, ಯುಪಿಐ ಮೂಲಕ ವಹಿವಾಟು ಸರಾವಾಗಿ ನಡೆದುಹೋಗುತ್ತೆ.ಹಾಗಾಗೀ ಬಹುತೇಕ ವ್ಯವಹಾರಗಳು ಇದೀಗ ಕ್ಯಾಶ್‌ಲೆಸ್ ಆಗಿಹೋಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಿದ್ಧವಾಗ್ತಿದೆ ಹೊಸ ಯೋಜನೆ !
ಇಷ್ಟೆಲ್ಲಾ ಅನುಕೂಲಗಳಿದ್ರೂ, ಯುಪಿಐ ವ್ಯವಸ್ಥೆಯಲ್ಲಿ ಇನ್ನಷ್ಟು ಬದಲಾವಣೆಗಳು ಮತ್ತು ಕೊರೆತೆಗಳಿದ್ದವು. ಆ ಕೊರತೆಗಳನ್ನು ನೀಗಿಸಿ ಇನ್ನಷ್ಟು ಗ್ರಾಹಕರಿಗೆ ಹತ್ತಿರವಾಗೋ ನಿಟ್ಟಿನಲ್ಲಿ ಈಗ ಪ್ರಯೋಗ ಆರಂಭವಾಗಿದೆ. ಉದಾಹರಣೆಗೆ ಹಣ ವರ್ಗಾವಣೆ ಮಾಡುವ ವಿಷಯದಲ್ಲಿ ಯುಪಿಐ ಸುಲಭದ ಆಯ್ಕೆ ಹೌದು. ಆದ್ರೆ ಖಾತೆಗೆ ಹಣ ಠೇವಣಿ ಮಾಡಬೇಕು ಅಂದ್ರೆ ಈ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಇನ್ಮುಂದೆ ಈ ಅವಕಾಶವೂ ತೆರೆದುಕೊಳ್ಳಲಿದೆ.
ನಮ್ಮದೇ ಖಾತೆಗೋ ಅಥವಾ ಇನ್ಯಾರದ್ದೋ ಖತೆಗೋ ಹಣ ಠೇವಣಿ ಮಾಡಬೇಕಂದ್ರೆ ಎರಡು ಆಯ್ಕೆಗಳಿತ್ತು. ಒಂದು ನಿಮ್ಮ ಬ್ಯಾಂಕ್‌ಗೆ ಸಂಬಂಧಪಟ್ಟ ಹತ್ತಿರದ ಎಟಿಎಂ ಸೆಂಟರ್‌ಗಳಲ್ಲಿ ಹೋಗಿ ಡೆಪಾಸಿಟ್ ಮೆಷಿನ್‌ನಲ್ಲಿ ಖಾತೆಯ ವಿವರಗಳನ್ನ ತುಂಬಿ ಹಣ ಡೆಪಾಸಿಟ್ ಮಾಡಬೇಕು ಅಥವಾ ನೇರವಾಗಿ ಬ್ಯಾಂಕ್‌ಗೆ ತೆರಳಿ ವಿವರಗಳನ್ನ ತುಂಬಿ ಹಣ ಠೇವಣಿ ಮಾಡಬೇಕಿತ್ತು. ಆದ್ರೆ ಇನ್‌ಉಂದೆ ಹಣ ಠೇವಣಿ ಕೂಡ ಯುಪಿಐ ಮೂಲಕವೇ ಸಾಧ್ಯವಾಗಲಿದ್ಯಂತೆ.
ಇದಕ್ಕಾಗಿ ಯಾವ ರೀತಿಯ ವ್ಯವಸ್ಥೆ ಕಲ್ಪಿಸಾಗುತ್ತಿದೆ. ಯುಪಿಐ ಮೂಲಕ ಯಾವ ರೀತಿ ಹಣ ಠೇವಣಿ ಮಾಡಬಹುದು ಎಂಬ ವಿವರಗಳು ಸದ್ಯದಲ್ಲೇ ಹೊರಬೀಳಲಿದ್ದು, ಸದ್ಯಕ್ಕೆ ಇಂಥದ್ದೊಂದು ಯೋಜನೆ ರೂಪುಗೊಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಗ್ರಾಹಕರಿಗೆ ಬ್ಯಾಂಕಿಂಗ್ ವಹಿವಾಟು ಮತ್ತಷ್ಟು ಸರಳೀಕೃತಗೊಳಿಸಲು ಮತ್ತು ಬ್ಯಾಂಕ್‌ಗಳಿಗೆ ಕರೆನ್ಸಿ ನಿರ್ವಹಣೆ ಮತ್ತಷ್ಟು ಸುಲಭವಾಗಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ದಿಕ್ಕಿನಲ್ಲಿ ಯೋಚನೆ ಮುಂದುವರೆಸಿದ್ದು, ಈಗಾಗಲೇ ಈ ಯೋಜನೆ ರೂಪಿಸುವ ಕಾರ್ಯ ಆರಂಭವಾಗಿದೆ. ಶೀರ್ಘದಲ್ಲಿಯೇ ಯುಪಿಐ ಮೂಲಕವೇ ಗ್ರಾಹಕರು ಠೇವಣಿ ಮಾಡುವ ವ್ಯವಸ್ಥೆ ಜಾರಿಗೊಳ್ಳಲಿದೆ ಎಂದು ಸ್ವತಃ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.


Click it and Unblock the Notifications