ಬೆಂಗಳೂರು: ಬದುಕು ಬಂದಂತೆ ಸ್ವೀಕರಿಸಬೇಕು, ಸಮಸ್ಯೆ ಸವಾಲುಗಳನ್ನು ಗೆಲ್ಲುತ್ತಾ ಜೀವನವನ್ನ ಹಸನಾಗಿಸಬೇಕು ಎನ್ನುವುದನ್ನು ಅಕ್ಷರಶಃ ಸಾಧಿಸಿ ತೋರಿಸಿದವರು ಕನ್ನಡಿಗ ಕೆ. ಆರ್. ಭಾಸ್ಕರ್. ಇವರು ಸಂಕಷ್ಟಗಳ ಕಹಿಯನ್ನು ದೂರಸರಿಸಿ 'ಸಿಹಿ'ಯಾದ ಉದ್ಯಮ ಕಟ್ಟಿಕೊಂಡ ಅನೇಕರಿಗೆ ಉದ್ಯೋಗದಾತರಾಗಿದ್ದಾರೆ. ಇಂದು ಕೋಟ್ಯಾಧೀಶರಾಗಿ ಬೆಳೆದುನಿಂತ 47 ವರ್ಷದ ಭಾಸ್ಕರ್ ಅವರ ಆರಂಭಿಕ ಜೀವನದಲ್ಲಿ ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ ಜೊತೆಗೆ ಸಂಪಾದನೆಗಾಗಿ ಅವರು ಮಾಡದ ಉದ್ಯೋಗವಿಲ್ಲ. ಆದರೆ ಅಂದು ಪಟ್ಟ ಶ್ರಮಕ್ಕೆ ಇಂದು ಪ್ರತಿಫಲ ಪಡೆಯುತ್ತಿದ್ದಾರೆ ಈ ಕನ್ನಡಿಗ.
ಕರ್ನಾಟಕ ಕರಾವಳಿ ಭಾಗದವರಾಗಿರುವ ಕುಂದಾಪುರ ಮೂಲದ ಭಾಸ್ಕರ್ ಅವರ ಸುವ್ಯವಸ್ಥಿತ "ಮನೆ ಹೋಳಿಗೆ" ರೂಪುಗೊಂಡ ಬಗೆಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಮನೆಯಲ್ಲಿ ಬಾಲ್ಯದಿಂದಲೇ ಕಡುಬಡತನ. ಬಾಲ್ಯದಲ್ಲೇ ದುಡಿಯುವ ಅನಿವಾರ್ಯತೆಯನ್ನು ಭಾಸ್ಕರ್ ಅವರಿಗೆ ಬಂದಿತ್ತು. ನಾಲ್ಕನೇ ತರಗತಿಯಲ್ಲಿರುವಾಗ ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ಬದುಕು ದುಸ್ತರವಾಗಿತ್ತು. ಹೀಗಾಗಿ ಅವರಿಗೆ ಕೇವಲ ೧೧ ವರ್ಷವಿದ್ದಾಗ ಕುಂದಾಪುರ ಬಿಟ್ಟು ಬೆಂಗಳೂರು ಸೇರಬೇಕಾಯಿತು. ಹನುಮಂತ ನಗರದ ಹೊಟೇಲ್ ಒಂದರಲ್ಲಿ ಕ್ಲೀನರ್, ಮಾಣಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಕೆಲ ವರ್ಷಗಳ ದುಡಿದ ಅವರು ಬಳಿಕ ಸಿನಿಮಾದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿದರು.ಮುಂದೆ ಪಾನ್ ಬೀಡಾ ಅಂಗಡಿ ನಡೆಸಿದರು ಹೀಗೆ ಹಲವು ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರನ್ನು ಕೈ ಹಿಡಿದದ್ದು ಹೋಳಿಗೆ (ಒಬ್ಬಟ್ಟು ).

ಹಿಂದೆ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಭಟ್ಟರು ಒಬ್ಬರು ತಯಾರಿಸುತ್ತಿದ್ದ ಹೋಳಿಗೆಗಳ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಮುಂದೆ ಸ್ನೇಹಿತರು ಭಾಸ್ಕರ್ ಅವರಿಗೆ ನೀನೆ ಯಾಕೆ ಮಾಡಿ ಸೇಲ್ ಮಾಡಬಾರದು ಎಂದು ಸಲಹೆ ನೀಡಿದರು. ತಡ ಮಾಡದೆ ಹೋಳಿಗೆ ಮಾಡಿ ಸೈಕಲ್ ಮೂಲಕ ಮನೆಮನೆಗೆ, ಅಂಗಡಿಗಳಿಗೆ ಮಾರಾಟ ಮಾಡಲು ಆರಂಭಿಸಿದರು. ಆದರೆ ಇದು ಮೂರಕ್ಕಿಳಿಯದೇ ಆರಕ್ಕೆ ಏರದೆ ಹೀಗೆ ಸಾಗುತ್ತಿತ್ತು. ಇದೇ ವೇಳೆ ಜನಪ್ರಿಯ ಟಿವಿ ಚಾನೆಲ್ ನಲ್ಲಿ ಕುಕ್ಕಿಂಕ್ ಶೋದಲ್ಲಿ ಕಾಣಿಸಿಕೊಂಡರು. ಇದರಿಂದ ಒಂದಷ್ಟು ಪ್ರಚಾರ ಸಿಕ್ಕಿತು. ನಂತರ ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಹೊಟೇಲ್ ಮಾಲೀಕರೊಬ್ಬರು ಅಂಗಡಿ ಹಾಕಲು ಜಾಗ ನೀಡಿದರು ಜೊತೆಗೆ ಅಂಗಡಿಗಾಗಿ ಒಂದಷ್ಟು ಬಂಡವಾಳ ಹಾಕಿದರು. ಇದೇ ಇವರ ಜೀವನ ಮಹತ್ವದ ತಿರುವು ಅನ್ನಬಹುದು. ಮುಂದೆ "ಭಾಸ್ಕರ್ಸ್ ಮನೆ ಹೋಳಿಗೆ " ಎಂಬ ಅಂಗಡಿ ತೆರೆದರು. ಬಳಿಕ ನಡೆದಿದ್ದೆಲ್ಲಾ ಇತಿಹಾಸವಾಯಿತು.
ಇಂದು ನೂರಕ್ಕೂ ಹೆಚ್ಚು ಕೆಲಸಗಾರರಿಗೆ ಭಾಸ್ಕರ್ ಅನ್ನದಾತರಾಗಿದ್ದಾರೆ. ಮಂಗಳೂರು ಬೆಂಗಳೂರು, ಮುಂಬೈ ಸೇರಿದಂತೆ ಹಲವೆಡೆ ಭಾಸ್ಕರ್ಸ್ ಮನೆ ಹೋಳಿಗೆ ಶಾಪ್ ಗಳು ತಲೆ ಎತ್ತಿವೆ. ಇವರ ಸಂಸ್ಥೆ ತಯಾರಿಸುವ ಒಬ್ಬಟ್ಟು, (ಹೋಳಿಗೆ,ಪೂರನ್ ಪೋಲಿ, ಪೋಲಿ) ಸ್ವಾಧಕ್ಕೆ, ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.
ಕೇವಲ ಬೇಳೆ ಒಬ್ಬಟ್ಟು ಮಾಡದೇ, ಕಾಯೊ ಹೋಳಿಗೆ, ಕ್ಯಾರೆಟ್ , ಪೈನಾಪಲ್, ಹಲಸು ಸೇರಿ ಸುಮಾರು 24 ವಿಧದ ಹೋಳಿಗೆಯನ್ನು ತಯಾರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಇವರು ತಯಾರಿಸುವ ಹೋಳಿಗೆಗೆ ಯಾವುದೇ ಕೃತಕವಾದ ಬಣ್ಣ, ಅಥವಾ ಎಸೆನ್ಸ್ ಬಳಸುವುದಿಲ್ಲ. ಇದೇ ಕಾರಣಕ್ಕೆ ಇವರು ತಯಾರಿಸಿದ ಹೋಳಿಗೆಗೆ ಗ್ರಾಹಕರ ವಲಯದಿಂದ ಡಿಮ್ಯಾಂಡ್ ಇದೆ. ಕೇವಲ ಇವರ ಸಂಸ್ಥೆಯಡಿ ಪೂರನ್ ಪೋಲಿ ಮಾತ್ರ ತಯಾರಿಸುವುದಿಲ್ಲ. ರವೆಲಡ್ದು, ಚಿಪ್ಸ್ ಸೇರಿ 400ಕ್ಕೂ ಹೆಚ್ಚು ಬಗೆಯ ಸ್ನಾಕ್ಸ್ (ಕುರುಕಲು ತಿಂಡಿಗಳು)ಗಳನ್ನು ತಯಾರಿಸಿ ಮಾರುತ್ತಾರೆ. ಸ್ವಿಗ್ಗಿ, ಝೊಮ್ಯಾಟೋ ಮೂಲಕವೂ ಇಂದು ಇವರು ಆರ್ಡರ್ ಗಳನ್ನು ಸ್ವೀಕರಿಸುತ್ತಾರೆ.
ಬಾಯಿಗಿಟ್ಟ ತಕ್ಷಣ ಕರಗುವಂತಹ ರುಚಿಕರ ಹೋಳಿಗೆ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸುವ ಕಾರಣ ಒಂದು ಇದ್ದ ಅಂಗಡಿ ಎರಡಾಯಿತು. ಎರಡು ಇದ್ದಿದ್ದು ಮೂರಾಗಿ ಮುಂದೆ ಬೆಳೆಯುತ್ತಾ ಹೋಯಿತು. ಇಂದು ಅವರ ಕರ್ನಾಟಕದಲ್ಲಿ ಸುಮಾರು 17 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದಾರೆ. 10 ಫ್ರಾಂಚೈಸಿಗಳನ್ನು ನೀಡಿದ್ದಾರೆ. ಮಹಾರಾಷ್ಟ್ರದಲ್ಲೂ ಹಲವು ಔಟ್ಲೆಟ್ ಗಳನ್ನು ತೆರೆದಿದ್ದಾರೆ . ಅಲ್ಲಿ ಅವರು 'ಪುರನ್ಪೋಲಿ ಘರ್ ಆಫ್ ಭಾಸ್ಕರ್' ಎಂಬ ತಮ್ಮದೇ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ. ಈ ಅಂಗಡಿಗಳಿಂದ ಅವರ ತಿಂಗಳ ಆದಾಯ ಸುಮಾರು 18 ಕೋಟಿ ರೂ ಆಗಿದೆ. ಈ ಹಣಕಾಸು ವರ್ಷದಲ್ಲಿ ಅವರ ವ್ಯವಹಾರ 3.6 ಕೋಟಿ ನಿವ್ವಳ ಲಾಭ ಗಳಿಸುತ್ತಿದೆ. ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2 ರಲ್ಲಿ ಭಾಸ್ಕರ್ ಕಾಣಿಸಿಕೊಂಡಿದ್ದಾರೆ.
ಒಟ್ಟಾರೆ ಹೊಟೇಲ್ ಗಳಲ್ಲಿ ಟೇಬಲ್ ಸ್ವಚ್ಚಗೊಳಿಸುತ್ತಿದ್ದ ಬಾಲಕ, ಪರಿಶ್ರಮ ಶೃದ್ದೆಯ ಮೂಲಕ ಇಂದು ಯಶಸ್ಸಿನ ಉತ್ತುಂಗವನ್ನು ತಲುಪಿದ್ದಾರೆ. ಇವರ ಜೀವನ ಬಹಳಷ್ಟು ಉದ್ಯಮಿಗಳಿಗೆ ಸ್ಪೂರ್ತಿದಾಯಕವಾಗಿದೆ.


Click it and Unblock the Notifications