ನವದೆಹಲಿ, ಏಪ್ರಿಲ್ 24: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ವು ಪ್ಯಾನ್-ಇಂಡಿಯಾ ಮಾದರಿಯಲ್ಲಿ ಮಸಾಲೆಗಳು ಮತ್ತು ಶಿಶು ಪೌಷ್ಟಿಕಾಂಶದ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲನೆಗೆ ದೇಶದಾದ್ಯಂತ ಪರೀಕ್ಷಾ ಡ್ರೈವ್ ಗೆ ಮುಂದಾಗಿದೆ.
ಪ್ರಸ್ತುತ ಬೆಳವಣಿಗೆಗಳ ದೃಷ್ಟಿಯಿಂದ MDH ಮತ್ತು Everest ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಸಾಂಬಾರ ಪದಾರ್ಥಗಳ ಮಾದರಿಗಳನ್ನು ಎಫ್‌ಎಸ್‌ಎಸ್‌ಎಐ ಮಾರುಕಟ್ಟೆಯಿಂದ ಸಂಗ್ರಹಿಸುತ್ತಿದೆ.

ಇತ್ತೀಚೆಗಷ್ಟೇ ಅಗತ್ಯಕ್ಕಿಂತ ಯಥೇಚ್ಛ ಪ್ರಮಾಣದಲ್ಲಿ ಸಕ್ಕರೆ ಅಂಶ ಹೊಂದಿದೆ ಎಂಬ ಆರೋಪದ ಮೇರೆಗೆ ಕ್ಯಾಡ್ಬರಿ ಸಂಸ್ಥೆ ಬೋರ್ನ್ ವೀಟಾವನ್ನು 'Health Drinks' ಪಟ್ಟಿಯಿಂದ ಕೈ ಬಿಡಲಾಗಿತ್ತು. ಇದೀಗ ಈ ಪಟ್ಟಿಗೆ ಅದೇ ಆರೋಪದ ಮೇರೆಗೆ ನೆಸ್ಲೆ ಸಂಸ್ಥೆಯ ಪುಟ್ಟ ಶಿಶುಗಳಿಗೆ ನೀಡುವ ಸೆರೆಲಾಕ್ ನಲ್ಲಿಯೂ ಮಿತಿ ಮೀರಿ ಸಕ್ಕರೆ ಬಳಸಲಾಗಿದೆ ಎಂಬ ಅಂಶ ಬಯಲಾಗಿತ್ತು. ಇನ್ನು ಭಾರತೀಯ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ ಮಿಶ್ರಿತ ಉತ್ಪನ್ನಗಳಲ್ಲಿ ಕೀಟನಾಶಕ 'ಎಥಿಲೀನ್ ಆಕ್ಸೈಡ್' ಕಂಡುಬಂದಿದೆ ಮಾರಾಟದ ಮೇಲೆ ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ನಿಷೇಧ ಹೇರಲಾಗಿತ್ತು.
FSSAI, ವರದಿಗಳ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಲು ಆಹಾರ ಸುರಕ್ಷತಾ ಆಯುಕ್ತರಿಗೆ ನಿರ್ದೇಶನ ನೀಡಿದೆ.
"ಪ್ರಸ್ತುತ ಬೆಳವಣಿಗೆಯ ದೃಷ್ಟಿಯಿಂದ, ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸಲು ಎಮ್‌ಡಿಹೆಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಸಾಂಬಾರ ಪದಾರ್ಥಗಳ ಮಾದರಿಗಳನ್ನು ಮಾರುಕಟ್ಟೆಯಿಂದ ಸಂಗ್ರಹಿಸುತ್ತಿದೆ " ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಆದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ ) ರಫ್ತು ಮಾಡಿದ ಮಸಾಲೆಗಳ ಗುಣಮಟ್ಟವನ್ನು ನಿಯಂತ್ರಿಸುವುದಿಲ್ಲ ಎಂದು ಸರ್ಕಾರಿ ಮೂಲವೊಂದು ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ FSSAI, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಲು ಮಾರುಕಟ್ಟೆಯಿಂದ ನಿಯಮಿತವಾಗಿ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳುತ್ತದೆ. ಏತನ್ಮಧ್ಯೆ, ಭಾರತೀಯ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ-ಮಿಶ್ರಣ ಉತ್ಪನ್ನಗಳ ಮಾರಾಟದ ಮೇಲೆ ಹಾಂಗ್ ಕಾಂಗ್ ಮತ್ತು ಸಿಂಗಾಪುರ ವಿಧಿಸಿರುವ ನಿಷೇಧವನ್ನು "ಸ್ಪೈಸಸ್ ಬೋರ್ಡ್ ಆಫ್ ಇಂಡಿಯಾ" ಪರಿಶೀಲಿಸುತ್ತಿದೆ.
FSSAI ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ, ಮಾನದಂಡಗಳು ಮತ್ತು ಗುಣಮಟ್ಟ ಜಾರಿಗೊಳಿಸುವ ಕಾರ್ಯವನ್ನು ಹೊಂದಿದೆ. ಭಾರತೀಯ ಮಸಾಲೆ ಮಂಡಳಿ (Spices Board of Indiaಯು ರಫ್ತು ಮಾಡುವ ಮೊದಲು ಮಸಾಲೆ ಉತ್ಪನ್ನಗಳನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿ ಹೊಂದಿದ್ದು, ಈ ಸಮಸ್ಯೆಯನ್ನು ಪರಿಶೀಲಿಸುವ ಸಾಧ್ಯತೆ ಇದೆ.
ಭಾರತೀಯ ಮಸಾಲೆ ಮಂಡಳಿಯ ನಿರ್ದೇಶಕಿ ಎ ಬಿ ರೆಮಾ ಶ್ರೀ ಮಾಹಿತಿ ನೀಡಿದ್ದು, "ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಈ ಸಂಬಂಧ ತಕ್ಷಣಕ್ಕೆ ಕಂಪನಿಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.


Click it and Unblock the Notifications